ಟಿಪ್ಪು ಅವಧಿಯಲ್ಲಿ ಮೈಸೂರು ಮಹಾರಾಜರಿಗೆ ಕೆಡುಕಾಗಿತ್ತು: ರಾಜಮಾತೆ ಪ್ರಮೋದಾ ದೇವಿ

ಡಿಜಿಟಲ್ ಕನ್ನಡ ಟೀಮ್:

ಟಿಪ್ಪು ಸುಲ್ತಾನ್ ರಾಷ್ಟ್ರ ಭಕ್ತನೇ ಅಥವಾ ಹಿಂದೂ ವಿರೋಧಿಯೇ? ಎಂಬ ಚರ್ಚೆ ಸದ್ಯ ರಾಜ್ಯ ರಾಜಕೀಯ ಸಮರಕ್ಕೆ ವೇದಿಕೆ ಕಲ್ಪಿಸಿದೆ. ಈ ಸಂದರ್ಭದಲ್ಲಿ ‘ಟಿಪ್ಪು ಸುಲ್ತಾನ್ ನಿಂದ ಮೈಸೂರು ಮಹಾರಾಜರಿಗೆ ಹೆಚ್ಚು ಕೆಡುಕಾಗಿದೆ’ ಎಂದು ರಾಜಮಾತೆ ಪ್ರಮೋದಾ ದೇವಿ ಹೇಳಿದ್ದಾರೆ.

ಟಿಪ್ಪು ಜಯಂತಿ ಆಚರಣೆ ಪರ ಹಾಗೂ ವಿರೋಧದ ಚರ್ಚೆ ಪ್ರತಿ ವರ್ಷ ಉದ್ಭವಿಸುತ್ತಿದ್ದು, ಈಗ ಈ ವಿಚಾರವಾಗಿ ಪ್ರಮೋದಾ ದೇವಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮಾಧ್ಯಮದ ಜತೆ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ…

‘ಟಿಪ್ಪು ಸುಲ್ತಾನನ ಆಕ್ರಮಣಗಳ ಕುರಿತು ಇತಿಹಾಸದಲ್ಲೇ ಉಲ್ಲೇಖವಾಗಿದೆ. ಅವರ ಕಾಲದಲ್ಲಿ ರಾಣಿ ಲಕ್ಷ್ಮಮ್ಮಣ್ಣಿ ದೇವಿಯವರನ್ನು ಶ್ರೀರಂಗಪಟ್ಟಣದ ಜನನ ಮಂಟಪದಲ್ಲಿ ನಿರ್ಬಂಧ ರೂಪದಲ್ಲಿ ಇಟ್ಟಿದ್ದರು. ಟಿಪ್ಪು ಸುಲ್ತಾನ್ ರಿಂದ ಮೈಸೂರಿನ ಮಹಾಜರಿಗೆ ಭಾರಿ ಕೆಡುಕಾಗಿದೆ ಎಂದು ನಮ್ಮ ಹಿರಿಯರಿಂದ ಕೇಳಿ ತಿಳಿದಿದ್ದೇನೆ. ಟಿಪ್ಪು ದಾಳಿಯಿಂದ ಮೈಸೂರು ಮಹಾರಾಜರಿಗೆ ಭಾರಿ ತೊಂದರೆಯಾಗಿತ್ತು. ಅಲ್ಲದೇ ದೀಪಾವಳಿ ದಿನದಂದೇ ಟಿಪ್ಪು ಐಯ್ಯಂಗಾರ್ ಸಮುದಾಯದ ಮೇಲೆ ಸಾಮೂಹಿಕ ನರಮೇಧ ನಡೆಸಿದ್ದ, ಹೀಗಾಗಿ ಇಂದಿಗೂ ಮೈಸೂರಿನ ಭಾಗದಲ್ಲಿ ಈ ಪಂಗಡದವರು ದೀಪಾವಳಿಯನ್ನು ಆಚರಣೆಯನ್ನು ಮಾಡುವುದಿಲ್ಲ. ಮುಮ್ಮಡಿ ಚಿಕ್ಕರಾಜ ಒಡೆಯರ್ ಕಾಲದಲ್ಲಿ ಟಿಪ್ಪು ರಾಜಮನೆತನದವರನ್ನು ಬಂಧನ ಮಾಡಿದ್ದರು. ಹೀಗಿದ್ದರೂ ನೋವುಂಟು ಮಾಡಿದವರ ಬಗ್ಗೆ ಮಾತನಾಡಬಾರದೆಂದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟಿದ್ದಾರೆ. ಹೀಗಾಗಿ ಟಿಪ್ಪು ವಿರುದ್ಧ ಯಾವುದೇ ಹೇಳಿಕೆ ನೀಡುವುದಿಲ್ಲ.

ಒಬ್ಬ ನಾಗರೀಕಳಾಗಿ ನಾನು ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವುದಿಲ್ಲ. ಜಯಂತಿ ವಿಚಾರದ ಬಗ್ಗೆ ಏನನ್ನು ಮಾತನಾಡುವುದಿಲ್ಲ. ಟಿಪ್ಪುವಿನ ವಿರುದ್ಧ ಯಾವುದೇ ಮಾತುಗಳನ್ನಾಡಲು ಇಷ್ಟಪಡುವುದಿಲ್ಲ.’

Leave a Reply