ಬಡ ಕುಟುಂಬಗಳ ಚಿಕಿತ್ಸೆ ನೆರವು ವಾರ್ಷಿಕ 5 ಲಕ್ಷ ರುಪಾಯಿಗೆ ವಿಸ್ತರಣೆ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರಕಾರವು ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಡಿ ಪ್ರತಿ ಬಡ ಕುಟುಂಬಗಳ (ಬಿಪಿಎಲ್) ಆಸ್ಪತ್ರೆ ವೆಚ್ಚದ ಮಿತಿಯನ್ನು ವಾರ್ಷಿಕ 5 ಲಕ್ಷ ರುಪಾಯಿಗಳಿಗೆ ವಿಸ್ತರಿಸಿದೆ. ಮೊದಲು ಆರೋಗ್ಯ ಕರ್ನಾಟಕ ಯೋಜನೆಯಡಿ ಈ ಮಿತಿ ಎರಡು ಲಕ್ಷ ರುಪಾಯಿ ಇತ್ತು.

ಅದೇ ರೀತಿ ಎಪಿಎಲ್ ಕುಟುಂಬಗಳಿಗೂ ವಾರ್ಷಿಕ 1.50 ಲಕ್ಷ ರುಪಾಯಿ ನೀಡಲಾಗುವುದು. ಈ ಯೋಜನೆ ಕಳೆದ ಅಕ್ಟೋಬರ್ 30 ರಿಂದ ಜಾರಿಗೆ ಬಂದಿದೆ. ಕೇಂದ್ರ ಸರಕಾರದ ಜತೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಲಾಗಿದೆ ಎಂದು ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಕೇಂದ್ರದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯದ ಆರೋಗ್ಯ ಕರ್ನಾಟಕ ಯೋಜನೆ ಸಂಯೋಜಿಸಿ ಅನುಷ್ಠಾನಕ್ಕೆ ತರಲಾದ ಈ ಯೋಜನೆಯಡಿ ಒಟ್ಟು 1.15 ಕೋಟಿ ಬಿಪಿಎಲ್ ಹಾಗೂ 19 ಲಕ್ಷ ಎಪಿಎಲ್ ಕುಟುಂಬಗಳು ಅರ್ಹತೆ ಪಡೆದಿವೆ. ರಾಜ್ಯದ 385 ಸರಕಾರಿ ಹಾಗೂ 531 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇದಲ್ಲದೆ ಗಡಿಭಾಗದ ರೋಗಿಗಳಿಗೆ ಅನುಕೂಲವಾಗುವಂತೆ ನೆರೆಯ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಗೋವಾದ 36 ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ. ಬಿಪಿಎಲ್ ಕುಟುಂಬಗಳಿಗೆ ಕೇಂದ್ರದ ಪಾಲು ಶೇಕಡಾ 60 ಹಾಗೂ ರಾಜ್ಯದ ಪಾಲು ಶೇಕಡಾ 40 ರಷ್ಟಿದೆ. ಉಳಿದ ಕುಟುಂಬಗಳ ಶೇಕಡಾ 100 ರಷ್ಟು ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುತ್ತದೆ. ಈ ಮೊದಲು ನೆರವು ಸಿಗುತ್ತಿದ್ದ 1516 ವಿಧದ ಚಿಕಿತ್ಸೆಗಳಲ್ಲಿ ಕೆಲವು ಸಣ್ಣಪುಟ್ಟವುಗಳನ್ನು ರದ್ದು ಮಾಡಿ ಹೊಸದಾಗಿ 630 ಚಿಕಿತ್ಸೆಗಳನ್ನು ಸೇರಿಸಲಾಗಿದೆ. ಇದರಲ್ಲಿ 169 ತುರ್ತು ಚಿಕಿತ್ಸೆಗಳೂ ಸೇರಿವೆ. ಈಗ ಒಟ್ಟಾರೆ 1614 ಸ್ವರೂಪದ ಚಿಕಿತ್ಸೆಗಳಿಗೆ ಈ ನೆರವು ಸಿಗುತ್ತಿದೆ. ಕಳೆದ ಅಕ್ಟೋಬರ್ 30 ರಿಂದ ಈಚೆಗೆ 2391 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆರೋಗ್ಯ ಕರ್ನಾಟಕ ಯೋಜಚನೆಯಡಿ ಈವರೆಗೂ 1.49 ಲಕ್ಷ ಕುಟುಂಬಗಳು ಸೌಲಭ್ಯ ಪಡೆದಿವೆ ಎಂದು ವಿವರಿಸಿದರು.

ಆರೋಗ್ಯ ಕಾರ್ಡ್ ಇರಲಿ, ಬಿಡಲಿ ಎಲ್ಲರೂ ಈ ಯೋಜನೆ ನೆರವು ಪಡೆಯಬಹುದಾಗಿದೆ. ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಯಾರಿಗೂ ಚಿಕಿತ್ಸೆ ನಿರಾಕರಿಸುವಂತಿಲ್ಲ. ಆದರೂ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆಧಾರ್ ಅಥವಾ ಪಡಿತರ ಚೀಟಿ ತೋರಿಸಿ, 30 ರುಪಾಯಿ ಶುಲ್ಕ ತುಂಬಿ ಬೆಂಗಳೂರು ಒನ್ ಮತ್ತಿತರ ಕಡೆ ಕಾರ್ಡ್ ಪಡೆಯಬಹುದಾಗಿದೆ. ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಅಗತ್ಯವೆನಿಸಿದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು. ಒಂದೊಮ್ಮೆ ಪ್ರಕರಣ ಗಂಭೀರವಾಗಿದ್ದರೆ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೂ ಹೋಗಿ ಚಿಕಿತ್ಸೆ ಪಡೆಯಬಹುದು. ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲಿ ಎಂಬ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯದ ಪೈಕಿ ಯಾವುದು ಹೆಚ್ಚೋ ಆ ಚಿಕಿತ್ಸಾ ದರವನ್ನು ಆಸ್ಪತ್ರೆಗಳಿಗೆ ನಿಗದಿ ಮಾಡಲಾಗಿದೆ.

ಅಕ್ಟೋಬರ್ 30 ರಂದೇ ಕೇಂದ್ರದ ಜತೆ ಗೊತ್ತುವಳಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅದನ್ನು ಪ್ರಚುರಪಡಿಸಲು ಹೋಗಿರಲಿಲ್ಲ. ರಾಜ್ಯದ ಜನರಿಗೆ ಮಾಹಿತಿ ಸಿಗಲಿ ಎಂಬ ಕಾರಣಕ್ಕೆ ಅದನ್ನು ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಹೊರರಾಜ್ಯದವರು ಬಂದು ಇಲ್ಲಿ ನೆಲೆಸಿದ್ದಾರೆ. ಅವರಿಗೂ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಐಟಿ ಮಂದಿ ಸಹ ಸೌಲಭ್ಯ ಪಡೆದುಕೊಳ್ಳಬಹುದು. ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಯಾರಾದರೂ ಚಿಕಿತ್ಸೆ ನಿರಾಕರಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರ ಆಹವಾಲು ಸ್ವೀಕಾರಕ್ಕೂ ವ್ಯವಸ್ಥೆ ಮಾಡಲಾಗುವುದು. ಆಸ್ಪತ್ರೆಗಳಿಗೂ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ, ಮಾರ್ಗದರ್ಶನ ನೀಡಲು ಇದೇ 20 ರಂದು ಸರಕಾರಿ ಹಾಗೂ 27 ರಂದು ಖಾಸಗಿ ಆಸ್ಪತ್ರೆಗಳವರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಡಿಸ್ನಿಲ್ಯಾಂಡ್, ಐಫೆಲ್ ಟವರ್ ಮಾದರಿ ಬೃಂದಾವನ

ಕೆಆರೆಸ್ ಅಭಿವೃದ್ಧಿ ಬಗ್ಗೆ ಕೇಳಲಾದ ಪ್ರಶ್ನೆಗೆ, ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರೆಸ್ ಅಭಿವೃದ್ಧಿಪಡಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಬಜೆಟ್ ನಲ್ಲಿ ಘೋಷಣೆ ಮಾಡಿದ್ದಂತೆ ಯೋಜನೆ ಸಾಕಾರಗೊಳ್ಳಲಿದೆ. ಐಫೆಲ್ ಟವರ್ ಮಾದರಿಯಲ್ಲಿ ಕಾವೇರಿ ಪ್ರತಿಮೆ ಒಳಗೊಂಡ ಮ್ಯೂಸಿಯಂ ಸಮುಚ್ಛಯ ಅಣೆಕಟ್ಟೆಯ ವಿಹಂಗಮ ನೋಟದ ವ್ಯವಸ್ಥೆ ಹೊಂದಿರಲಿದೆ. ಅಲ್ಲದೆ ಹಂಪಿ, ಸೋಮನಾಥಪುರ, ಗೋಲಗುಂಬಜ್ ಸೇರಿದಂತೆ ಕರ್ನಾಟಕ ಮತ್ತು ದೇಶದ ಐತಿಹ್ಯ ಸಾರುವ ಪ್ರತಿರೂಪ ಕಟ್ಟಗಳು ತಲೆ ಎತ್ತಲಿವೆ. ಪ್ರಾಚ್ಯ ಮತ್ತು ಇತಿಹಾಸ ಪ್ರತಿಬಿಂಬಿಸುವ ಶಾಶ್ವತ ಸ್ಮಾರಕಗಳು ನಿರ್ಮಾಣಗೊಳ್ಳಲಿವೆ ಎಂದರು.

ಯೋಜನೆಗೆ ಬೇಕಾದ ಭೂಮಿ ನಮ್ಮ ಬಳಿ ಇದೆ. ಅಗತ್ಯ ಬಿದ್ದರೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಹೆಚ್ಚಿನ ಭೂಮಿ ಪಡೆದುಕೊಳ್ಳಲಾಗುವುದು. ಬೃಂದಾವನ ಮತ್ತಷ್ಟು ಹೊಸ ಕಳೆಯೊಂದಿಗೆ ನಳನಳಿಸಬೇಕು. ಸರಕಾರಕ್ಕೆ ವರಮಾನವೂ ಬರಬೇಕು. ಜಾಗತಿಕ ಟೆಂಡರ್ ಕರೆದು, ಸಂಪುಟ ಸಭೆಯಲ್ಲಿ ಯೋಜನೆ ಗುತ್ತಿಗೆ ಅಂತಿಮಗೊಳಿಸಲಾಗುವುದು. ಭೂಮಿ ಮತ್ತು ಕಟ್ಟಡದ ಒಡೆತನ ಮಾತ್ರ ಸರಕಾರದ್ದೇ. ಬಂಡವಾಳ ಹೂಡುವ ಗುತ್ತಿಗೆದಾರರು ವಹಿವಾಟು ನಡೆಸುತ್ತಾರೆ ಅಷ್ಟೇ ಎಂದು ಹೇಳಿದರು.

ದೊಡ್ಡ ಜನ, ದೊಡ್ಡ ಶಕ್ತಿ ಕತೆ ನನಗೆ ಬೇಡ

ನಿನ್ನೆಯಷ್ಟೇ ಜೈಲಿಂದ ಬಿಡುಗಡೆ ಆದ ಜನಾರ್ಧನರೆಡ್ಡಿ ಅವರು ರಾಜ್ಯ ಸರಕಾರ ತಮ್ಮನ್ನು ಜೈಲಿಗೆ ಕಳುಹಿಸುವ ಮೂಲಕ ಸೇಡು ತೀರಿಸಿಕೊಂಡಿದೆ ಎಂದು ಹೇಳಿರುವ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ದೊಡ್ಡವರ ಕತೆ ನಮಗೆ ಬೇಡ. ದೊಡ್ಡ ಜನ, ದೊಡ್ಡ ಶಕ್ತಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

ನಾನು ಕೂಡ ಸುಮ್ಮನೆ ಇರುವುದಿಲ್ಲ. ಏನೂ ಮಾಡಬೇಕೆಂಬುದು ಗೊತ್ತು. ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಜನಾರ್ಧನರೆಡ್ಡಿ ಅವರು ಹೇಳಿದ್ದಾರಲ್ಲ ಎಂಬ ಮತ್ತೊಂದು ಪ್ರಶ್ನೆಗೆ, ‘ಅವರು ಕೊಡುವ ಪ್ರಸಾದವನ್ನು ನಾನು ಸ್ವೀಕರಿಸುತ್ತೇನೆ ಅಷ್ಟೇ’ ಎಂದರು.

ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಷಾಮೀಲಾಗಿದ್ದಾರೆ ಎಂಬ ಮಾತಿದೆ, ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ, ‘ಈ ವಿಚಾರದಲ್ಲಿ ಪ್ರತಿಕ್ರಿಯಿಸಲು ನಾನು ಗೃಹ ಸಚಿವನೂ ಅಲ್ಲ, ಪೊಲೀಸ್ ಕಮೀಷನರೂ ಅಲ್ಲ. ಸುಖಾಸುಮ್ಮನೆ ಈ ವಿಚಾರದಲ್ಲಿ ನನ್ನನ್ನು ಎಳೆಯಬೇಡಿ’ ಎಂದರು.

‘ಶಾಂತಕ್ಕ ದಿಲ್ಲಿಗೆ, ಶಿವಕುಮಾರ್ ಜೈಲಿಗೆ’ ಅಂತ ರಾಮುಲು ಹೇಳಿದ್ದನ್ನು ನೆನಪಿಸಿದಾಗ, ಅವರೇನೋ ನವೆಂಬರ್ 6 ನೇ ತಾರೀಖು ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಅಂತ ಡೇಟ್ ಫಿಕ್ಸ್ ಮಾಡಿದ್ದರು. ಈಗ ಹೊಸ ಡೇಟ್ ಯಾವಾಗ ಕೊಡ್ತಾರೋ ಗೊತ್ತಿಲ್ಲ, ಜಡ್ಜ್ ಸಾಹೇಬರು. ಆದರೆ ನಾನಂತೂ ಏನೂ ಮಾತಾಡಲು ಹೋಗುವುದಿಲ್ಲ. ಬಳ್ಳಾರಿ ಚುನಾವಣೆ ಸಂದರ್ಭದಲ್ಲೂ ನಾನೇದರೂ ಮಾತನಾಡಿದ್ದು ನೋಡಿದಿರಾ? ನನ್ನ ಪಾಡಿಗೆ ನಾನು ಶಾಂತಕ್ಕ, ಶ್ರೀರಾಮುಲು ಅಣ್ಣ ಅಂತಂದುಕೊಂಡು ಇದ್ದೇನೆ’ ಎಂದರು.

Leave a Reply