ಮೈಸೂರಿನಲ್ಲಿ ಶುರುವಾಯ್ತು ದೋಸ್ತಿ ದಂಗಲ್..!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಮೈಸೂರು ಪಾಲಿಕೆ ಕಬ್ಬಿಣದ ಕಡಲೆಯಾಗಿದೆ. ಯಾಕಂದ್ರೆ ಮೈಸೂರು ಪಾಲಿಕೆ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆಸಿ ಸಮಬಲ ಸಾಧಿಸಿರುವ ಉಭಯ ಪಕ್ಷಗಳು ಇದೀಗ ಮೇಯರ್ ಪಟ್ಟಕ್ಕಾಗಿ ಕಸರತ್ತು ಆರಂಭಿಸಿವೆ. ಮೇಯರ್ ಚುನಾವಣೆಗೆ ಇನ್ನೊಂದು ದಿನ ಬಾಕಿ ಇದ್ದು, ರಾಜ್ಯದಲ್ಲಿ ಮೈತ್ರಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಜೆಡಿಎಸ್ ನಡುವೆ ಮೇಯರ್ ಪಟ್ಟಕ್ಕೆ ಪೈಪೋಟಿ ಶುರುವಾಗಿದೆ. ಮೇಯರ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಎರಡೂ ಪಕ್ಷಗಳು ತಮ್ಮ ತಮ್ಮ ದಾಳ ಉರುಳಿಸಲು ಅಣಿಯಾಗಿದ್ದಾರೆ..

ನಿನ್ನೆ ರಾತ್ರಿ ಪಾಲಿಕೆ ಸದಸ್ಯರೂ ಹಾಗೂ ಜೆಡಿಎಸ್ ನಾಯಕರ ಜೊತೆ ಸಚಿವರಾದ ಜಿ.ಟಿ ದೇವೇಗೌಡ ಹಾಗೂ ಸಾರಾ ಮಹೇಶ್ ಮಹತ್ವದ ಸಭೆ ನಡೆಸಿದ್ದು, ಶತಾಯಗತಾಯ ಮೇಯರ್ ಪಟ್ಟ ಪಡೆಯಲೇ ಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಅದೇ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡ ತಂತ್ರ ಅನುಸರಿಸಲು, ಪಾಲಿಕೆ ಸದಸ್ಯರು ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್‌ನಲ್ಲಿ ಜೆಡಿಎಸ್ ಸದಸ್ಯರು ಠಿಕಾಣಿ ಹೂಡಿದ್ದಾರೆ. ಜೆಡಿಎಸ್‌ ಸದಸ್ಯರ ಉಸ್ತುವಾರಿಯನ್ನು ಮೈಸೂರು ನಗರಾಧ್ಯಕ್ಷ ಕೆ.ಟಿ ಚೆಲುವೇಗೌಡಗೆ ವಹಿಸಲಾಗಿದೆ. 18 ಮಂದಿ ಜೆಡಿಎಸ್ ಸದಸ್ಯರು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಮೇಯರ್ ರೇಸ್‌ನಲ್ಲಿರುವ ಭಾಗ್ಯ ಮಾದೇಶ್, ರುಕ್ಮಿಣಿ ಮಾದೇಗೌಡ, ಅಶ್ವಿನಿ ಅನಂತ್, ಲಕ್ಷ್ಮೀ ಶಿವಣ್ಣ, ಪ್ರೇಮ ಶಂಕರೇಗೌಡ ಕೂಡ ರೇಸಾರ್ಟ್ನಲ್ಲೇ ಬೀಡುಬಿಟ್ಟಿದ್ದಾರೆ.

ಜೆಡಿಎಸ್ ಈ ರೀತಿ ಕಾಂಗ್ರೆಸ್‌ ವಿರುದ್ಧ ಲೆಕ್ಕಾಚಾರ ಹಾಕುತ್ತಿದ್ದರೆ, ಕಾಂಗ್ರೆಸ್ ಕೂಡ ಕೈಕಟ್ಟಿ ಕುಳಿತಿಲ್ಲ.
ಬೆಳ್ಳಂಬೆಳಗ್ಗೆಯೇ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಸಿದ್ದು, ಮೈಸೂರು ನಿವಾಸದಲ್ಲಿ ಮೇಯರ್ ಆಕಾಂಕ್ಷಿಗಳು ಹಾಗೂ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದ್ದು ಮೇಯರ್ ಪಟ್ಟ ಪಡೆಯಲು ಯಾವ ರೀತಿಯ ತಂತ್ರಗಾರಿಕೆ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನೊಂದು ಕಡೆ ಮೈಸೂರು ಪಾಲಿಕೆಯಲ್ಲಿ ಮೇಯರ್ ಪಟ್ಟ ಗಿಟ್ಟಿಸಲು ಸಚಿವ ಕೃಷ್ಣಭೈರೇಗೌಡರನ್ನು ಉಸ್ತವಾರಿಯಾಗಿ ನೇಮಿಸಲಾಗಿದೆ. ಈಗಾಗಲೇ ಮೈಸೂರಿಗೆ ಬಂದಿರುವ ಸಚಿವ ಕೃಷ್ಣ ಭೈರೇಗೌಡ ಸ್ಥಳೀಯ ನಾಯಕರ ಜೊತೆ ಸಭೆ ನಡೆಸಿ ಮೇಯರ್ ಸ್ಥಾನ ಬಿಟ್ಟು ಕೊಟ್ಟರೆ ಆಗಬಹುದಾದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಯಾರು ಮೇಯರ್ ಆಗ್ತಾರೆ ಅನ್ನೋದನ್ನು ಇನ್ನೇನು ಕೆಲವೇ ಗಂಟೆಗಳಲ್ಲಿ ಮೈತ್ರಿ ಪಕ್ಷದ ನಾಯಕರು ಒಮ್ಮತದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.. ಒಟ್ಟಾರೆ ಮೈಸೂರು ರಾಜಕಾರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಚಿವ ಜಿ.ಟಿ ದೇವೇಗೌಡರು ಜಿದ್ದಾಜಿದ್ದಿ ರಾಜಕಾರಣ ಮಾಡುತ್ತಿದ್ದು, ದೋಸ್ತಿ ದಂಗಲ್‌ನಲ್ಲಿ ಗೆಲ್ಲೋದ್ಯಾರು ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ..

Leave a Reply