ಆಂಧ್ರದಲ್ಲಿ ಸಿಬಿಐಗೆ ನಿಷೇಧ ಹೇರಿ ಕೇಂದ್ರಕ್ಕೆ ಸವಾಲೆಸೆದ ಚಂದ್ರಬಾಬು ನಾಯ್ಡು!

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರ ಸಿಬಿಐ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ ಸಿಬಿಐ ವಿರುದ್ಧವೇ ಆರೋಪಗಳು ಕೇಳಿ ಬಂದಿದ್ದು, ವಿಶ್ವಾಸಾರ್ಹತೆಗೆ ಧಕ್ಕೆ ಬಂದಿದೆ ಎಂಬ ಕಾರಣ ನೀಡಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ಆಂಧ್ರ ಪ್ರದೇಶದಲ್ಲಿ ಸಿಬಿಐ ಸಂಸ್ಥೆ ತನಿಖೆ ನಡೆಸುವ ಅವಕಾಶವನ್ನು ಕಿತ್ತುಕೊಂಡು ನಿಷೇಧ ಹೇರಿದೆ. ಅದರೊಂದಿಗೆ ಇನ್ನು ಮುಂದೆ ಸಿಬಿಐ ಆಂಧ್ರ ಪ್ರದೇಶದಲ್ಲಿ ಯಾವುದೇ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೆಕಿದೆ.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಬಿಐಗೆ ನೀಡಲಾಗಿದ್ದ ‘ಮುಕ್ತ ಸಮ್ಮತಿ’ಯನ್ನು ಹಿಂಪಡೆಯಲಾಗಿದೆ. ಇನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಿರುವ ಪ್ರಕರಣಗಳನ್ನು ಹಿಂಪಡೆದಿದ್ದು, ಇನ್ನುಮುಂದೆ ಈ ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ನೀಡಲಾಗುವುದು.

ದೆಹಲಿ ಪೊಲೀಸ್ ಕಾಯಿದೆ ಪ್ರಕಾರ ದೆಹಲಿಯ ಹೊರಗೆ ತನಿಖೆ ನಡೆಸಲು ಆಯಾ ರಾಜ್ಯಗಳ ಅನುಮತಿ ಪಡೆದುಕೊಳ್ಳಬೇಕಾಗಿರುತ್ತದೆ. ಇದಕ್ಕಾಗಿ ಎಲ್ಲ ರಾಜ್ಯಗಳು ಸಿಬಿಐಗೆ ಮುಕ್ತ ಸಮ್ಮತಿ ನೀಡಿರುತ್ತವೆ. ಇಂತಹ ಸಮ್ಮತಿಯನ್ನು ಆಂಧ್ರ ಪ್ರದೇಶ ಸರಕಾರ ಕಳೆದ ಆಗಸ್ಟ ನಲ್ಲಿ ನವೀಕರಿಸಿತ್ತು.

ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಖಾತೆ ಉಪ ಸಚಿವ ಚಿನ್ನರಾಜಪ್ಪ, ‘ಕೇಂದ್ರ ಸರಕಾರದ ತಾಳಕ್ಕೆ ತಕ್ಕಂತೆ ಸಿಬಿಐ ವರ್ತಿಸುತ್ತಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವುದರ ಜತೆಗೆ ಕೇಂದ್ರ ಸರಕಾರ ಸಿಬಿಐನ ಗೌರವಕ್ಕೂ ಚ್ಯುತಿ ತಂದಿದೆ.ಅಲ್ಲಿನ ಆಂತರಿಕ ಕಚ್ಚಾಟದಿಂದ ಇದು ಸಾಬೀತಾಗಿದೆ. ಆದ್ದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ನಾಯ್ಡು ನಿರ್ಧಾರಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲ ನೀಡಿದ್ದು, ‘ಸಿಬಿಐ, ಆರ್‌ಬಿಐನಂತಹ ಪ್ರಮುಖ ಸಂಸ್ಥೆಗಳನ್ನು ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರ ನಾಶಪಡಿಸುತ್ತಿದೆ. ಹೀಗಾಗಿ ನಾವು ಚಂದ್ರಬಾಬು ನಾಯ್ಡು ಸರ್ಕಾರದ ನಿರ್ಧಾರ ಸ್ವಾಗತಿಸುತ್ತೇವೆ’ ಎಂದಿದ್ದಾರೆ.

Leave a Reply