ರಾಜ್ಯಗಳು ಬೇಡ ಅಂದ್ರೆ ಸುಮ್ಮನಿರುತ್ತಾ ಸಿಬಿಐ?

ಡಿಜಿಟಲ್ ಕನ್ನಡ ಟೀಮ್:

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದ ವಿರುದ್ಧ ನೇರ ಸಮರಕ್ಕೆ ಇಳಿದಿದ್ದಾರೆ. ಮೊದಲು ಕೇಂದ್ರ ಸರ್ಕಾರ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಜೊತೆಗೆ ವಿಶೇಷ ಪ್ಯಾಕೇಜ್ ನೀಡಲಿಲ್ಲ ಅನ್ನೋ ಕಾರಣಕ್ಕೆ ಕೇಂದ್ರ ಸರ್ಕಾರದಿಂದಲೇ ಹೊರಕ್ಕೆ ಬರುವ ನಿರ್ಧಾರ ಕೈಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ರು. ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರೀಯ ತನಿಖಾ ಸಂಸ್ಥೆ ಆಂಧ್ರಪ್ರದೇಶದಲ್ಲಿ ಯಾವುದೇ ದಾಳಿ ಮಾಡದಂತೆ ತಡೆದಿದ್ದಾರೆ. ಯಾವುದೇ ತನಿಖೆ ಮಾಡಬೇಕಿದ್ರೂ ಮೊದಲು‌ ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು. ರಾಜ್ಯ ಸರ್ಕಾರದ ಗಮನಕ್ಕೆ ತಾರದೆ ಯಾವುದೇ ದಾಳಿ ಮಾಡುವಂತಿಲ್ಲ ಎಂದಿದ್ದಾರೆ. ಇದನ್ನೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಅನುಕರಣೆ ಮಾಡಿದ್ದಾರೆ. 1989ರ ಅಧಿಸೂಚನೆಯ ಪ್ರಕಾರ ಕೇಂದ್ರದ ಜೊತೆಗೆ ಆಗಿದ್ದ ಒಪ್ಪಂದವನ್ನು ಕ್ಯಾನ್ಸಲ್ ಮಾಡಿದ್ದಾರೆ. ಹಾಗಿದ್ರೆ ರಾಜ್ಯದಲ್ಲಿ ದಾಳಿ ಮಾಡಬೇಡಿ ಅಂದ್ರೆ ಸಿಬಿಐ ಸುಮ್ಮನಿರುತ್ತಾ ಅನ್ನೋ ಪ್ರಶ್ನೆ ಜನರನ್ನು ಕಾಡುತ್ತಿದೆ.

ಭಾರತ ಹಲವು ರಾಜ್ಯಗಳಿಂದ ಕೂಡಿದ ಒಕ್ಕೂಟದ ಗುಂಪು. ಇಲ್ಲಿ ಯಾವುದೇ ಒಂದು ಕಾನೂನು ಜಾರಿ ಮಾಡುವ ಮೊದಲು ಎಲ್ಲಾ ರಾಜ್ಯಗಳ ಜೊತೆಗೂ ಚರ್ಚೆ ಮಾಡುವುದು ಕಡ್ಡಾಯ. ಈ ಚರ್ಚೆ ಪ್ರಧಾನಿ ನೇತೃತ್ವದಲ್ಲೇ ನಡೆಯುತ್ತದೆ. ಆ ಸಭೆಯಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಯೋಜನೆ ಬಗ್ಗೆ ಪ್ರಸ್ತಾಪ ಮಾಡಲಾಗುತ್ತೆ. ಆ ಬಗ್ಗೆ ರಾಜ್ಯಗಳಿಗೆ ಮಾಹಿತಿ‌ ನೀಡುವ ಕೇಂದ್ರದ ಅಧಿಕಾರಿಗಳ ತಂಡ, ಆ ಯೋಜನೆಯಿಂದ ರಾಜ್ಯಕ್ಕಾಗುವ ಅನುಕೂಲ ಹಾಗೂ ಜಾರಿಯಾಗದಿದ್ರೆ ಅದರಿಂದಾಗುವ ಅನಾನುಕೂಲದ ಬಗ್ಗೆ ಚರ್ಚೆ ಮಾಡ್ತಾರೆ. ಆ ಬಳಿಕ ರಾಜ್ಯ ಸರ್ಕಾರದ ಅಧಿಕಾರಿಗಳೂ ಪ್ರತ್ಯೇಕ ಸಭೆ ನಡೆಸಿ ಕೇಂದ್ರದ ಹೊಸ ಯೋಜನೆಯಿಂದ ರಾಜ್ಯಕ್ಕಾಗುವ ಲಾಭ-ನಷ್ಟದ ಬಗ್ಗೆ ಚರ್ಚೆ ನಡೆಸಿ ಮುಂದಿನ ಸಭೆಯಲ್ಲಿ ತಮ್ಮ ರಾಜ್ಯದ ನಿರ್ಧಾರ ಇದು ಎಂದು ಕೇಂದ್ರಕ್ಕೆ ತಿಳಿಸ್ತಾರೆ. ಇದೇ ರೀತಿ ಪ್ರಧಾನಿ‌ ನರೇಂದ್ರ ಮೋದಿ ಅವರು ಜಿಎಸ್‌ಟಿ (ಸರಕು ಸೇವಾ ತೆರಿಗೆ) ಜಾರಿ ಮಾಡಿದ್ದು. ಅದೇ ರೀತಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಸಿಬಿಐ ಸಂಸ್ಥೆ ಸ್ಥಾಪನೆ ವೇಳೆಯಲ್ಲೂ ಇದೇ ರೀತಿಯ ಒಪ್ಪಂದ ಆಗಿರುತ್ತದೆ. ಇದೀಗ ಸಾಮಾನ್ಯ ಸಮ್ಮತಿಯಿಂದ ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಹೊರಬಂದಿರೋದ್ರಿಂದ ಅನುಮತಿ‌ ಪಡೆಯೋದು ಕಡ್ಡಾಯ.

ಸಿಬಿಐ ಸಂಸ್ಥೆ ಸ್ಥಾಪನೆ ಮಾಡಿದ್ದು‌ ದೆಹಲಿ ಪೊಲೀಸ್ ಕಾಯ್ದೆ ಅನ್ವಯ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ಮಾಡಿದ್ದು ಅಲಗಲ. ಇದನ್ನು ಕಾಂಗ್ರೆಸ್ ನಾಯಕರೇ ಜಾರಿ ಮಾಡಿರೋದು. ಹಾಗಿದ್ದ ಮೇಲೆ ವಿರೋಧ ಯಾಕೆ..? ಅನ್ನೋ ಪ್ರಶ್ನೆ ಉಂಟಾಗುವುದು ಸಹಜ. ಆದ್ರೆ ಸಿಬಿಐ ಅಂದ್ರೆ ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಅನ್ನೋ ಆರೋಪವನ್ನು ಬಿಜೆಪಿ ಪದೇ ಪದೇ ಮಾಡ್ತಿತ್ತು. ಆದ್ರೆ ಒಪ್ಪಂದವನ್ನೇ ರದ್ದು ಮಾಡುವ ನಿರ್ಣಯ ಕೈಗೊಂಡಿರಲಿಲ್ಲ. ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ರಚನೆಯಾದ ಬಳಿಕ ತನಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡು ವಿರೋಧಿಗಳನ್ನು ಕಾನೂನಿನ ಮೂಲಕ ಅಣಿಯುವ ಕೆಲಸ ಆಗ್ತಿದೆ ಅನ್ನೋದು ವಿರೋಧ ಪಕ್ಷಗಳ ಬಲವಾದ ಆರೋಪ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ವಿರೋಧಿ ಪಾಳಯ ಸವಾಲೊಡ್ಡುತ್ತಿದ್ದು, ಮೋದಿಯ ನಾಗಾಲೋಟಕ್ಕೆ ಬ್ರೇಕ್ ಹಾಕುವ ಮುನ್ಸೂಚನೆ ಕೊಟ್ಟಿದ್ದಾರೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡು ವಿರೋಧಿಗಳನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತೆ ಅನ್ನೋ ಕಾರಣಕ್ಕೆ ಈ ನಿರ್ಧಾರ ಪ್ರಕಟಿಸಲಾಗಿದೆ. ಸದ್ಯಕ್ಕೆ ಒಪ್ಪಂದದ ಪ್ರಕಾರ ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ದಾಳಿ ಮಾಡಬೇಕು ಅಂದ್ರೆ ಸಿಬಿಐ ಕೂಡ ಅನುಮತಿ ಪಡೆಯಲೇ ಬೇಕು..

Leave a Reply