ಸಾವಿನ ಬಗ್ಗೆ ದೇವೇಗೌಡರ ಕನವರಿಕೆ ಏನು?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ದೇವೇಗೌಡರು ಮರಣದ ಬಗ್ಗೆ ಮಾತನಾಡಿದ್ದಾರೆ. ತಮಗೆ ಅನಾಯಾಸ ಮರಣ ಬೇಕು, ಇನ್ನೇನು ಬೇಕಿಲ್ಲ ಎಂದು ಹೇಳಿರೋದು ಗೌಡರ ಅಭಿಮಾನಿಗಳಲ್ಲಿ ಆಶ್ಚರ್ಯ ಹಾಗೂ ಭಯ ಮೂಡಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಮನೆ ಅಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮಾತನಾಡಿರುವ ಗೌಡರು ಮನದಾಳದ ಮಾತನ್ನು ತೆರೆದಿಟ್ಟಿದ್ದಾರೆ. ಅವರು ಅಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರೂ ಮರಣದ ಬಗ್ಗೆ ವಿಶೇಷವಾಗಿ ಮಾಡಿರುವ ಪ್ರಸ್ತಾಪ ಗಮನ ಸೆಳೆದಿದೆ. ‘ನನಗೆ ಅನಾಯಾಸ ಮರಣ ಬೇಕು, ‘ಅದೊಂದೇ ನಾನು ಬಯಸೋದು’ ಎಂದಿರೋದು ಅಭಿಮಾನಿಗಳ ಮನಕಲಕಿದೆ.

ಕಷ್ಟಕಾಲದಲ್ಲಿದ್ದಾಗ ಪತ್ನಿ ಚನ್ನಮ್ಮ ಚಿನ್ನ ಮಾರಾಟ ಮಾಡಿ ದೇವೇಗೌಡರಿಗೆ ಸಹಾಯ ಮಾಡಿದ್ರಂತೆ. ಇದನ್ನು ಹೇಳುವಾಗ ಗೌಡರು ಭಾವುಕರಾದ್ರು. ನಾನು ಈಗಲೇ ರಾಜಕೀಯ ಬಿಡಲ್ಲ, ಶಕ್ತಿ ಇರೋತನಕ ರಾಜಕೀಯದಲ್ಲಿ ಇರ್ತೇನೆ. ರಾಜಕೀಯ ಆಗಲ್ಲ ಅಂದಾಗ ನಾನೇ ವಿಶ್ರಾಂತಿ ಪಡೀತೀನಿ’ ಎಂದಿದ್ದಾರೆ. ‘ನಾನು ಯಾರಿಗೂ ಮೋಸ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ನಾನು ಯಾವುದೇ ಜಾತಿಯ ವಿರೋಧಿ ಅಲ್ಲ, ಇದೇ ಕಾರಣಕ್ಕೆ ಈ ದೇವೇಗೌಡರ ಬಗ್ಗೆ ಎಲ್ಲರಿಗೂ ಗೌರವ ಇದೆ. ಭಾರತದ ಯಾವುದೇ ಪ್ರದೇಶಕ್ಕೆ ಹೋದರೂ ಗೌರವ ಕೊಡ್ತಾರೆ. ಪಂಜಾಬ್, ಉತ್ತರ ಪ್ರದೇಶ, ಮಿಜೋರಾಂ ಯಾವುದೇ ಸ್ಥಳಕ್ಕೆ ಹೋದರೂ ಗೌಡ ಅಚ್ಚಾ ಆದ್ಮಿ ಹೈ ಅಂತಾರೆ. ಆದರೆ ಇಲ್ಲಿ ನಮ್ಮ ಮಾಧ್ಯಮ ಸ್ನೇಹಿತರು ಮಾತ್ರ ಕುಮಾರಸ್ವಾಮಿ ಸರ್ಕಾರ ಯಾವಾಗ ಬೀಳುತ್ತೋ ಅಂತ ಕಾಯ್ತಾ ಕೂತಿದ್ದಾರೆ’ ಅಂತಾ ಚಟಾಕಿ ಹಾರಿಸಿದ್ದಾರೆ.

ದೇವೇಗೌಡರು ದಿವಂಗತ ಸಿಎಂ ದೇವರಾಜ ಅರಸು ಅವರ ಬಗ್ಗೆಯೂ ಸಾಕಷ್ಟು ಹೇಳಿದ್ದಾರೆ. ‘ಇಡೀ ರಾಷ್ಟ್ರ ರಾಜಕಾರಣದಲ್ಲಿ ಅವಲೋಕನ ಮಾಡಿದಾಗ ಮತ್ತೊಬ್ಬ ದೇವರಾಜ ಅರಸು, ಮತ್ತೊಬ್ಬ ದೇವೇಗೌಡ ಹುಟ್ಟಲ್ಲ. ಆದರೆ ನಾನು ವಿಪಕ್ಷ ನಾಯಕ ಆಗಿದ್ದೆ, ನಿತ್ಯವೂ ಒಂದಲ್ಲ ಒಂದು ಹಗರಣ ಹೊರತರುತ್ತಿದ್ದೆ. ಆದರೆ ದೇವರಾಜ ಅರಸು ಒಂದು ದಿನ ನನಗೆ ಸವಾಲಾಕಿದ್ರು, ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ಹೊರ ತಂದ್ರೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ರು. ನಾನು ಬೇಡ ಅಂದರೂ ಅವರು ಕೇಳಲಿಲ್ಲ, ನಾನು ಅವತ್ತು ಅರಸು ಮಕ್ಕಳಿಗೆ ಸೈಟು ನೀಡಿದ್ದರ ಬಗ್ಗೆ ದಾಖಲೆ ಹೊರತಂದೆ’ ಎಂದು ನೆನಪಿಸಿಕೊಂಡಿದ್ದಾರೆ.
‘ಇನ್ನು ಅರಸು ಒಮ್ಮೆ ನನ್ನನ್ನು ಮನೆಗೆ ಕರೆದಿದ್ದರು, ತಮ್ಮ ಮುಂದೆ ಮೂರು ಫೈಲ್​​ಗಳನ್ನು ಇಟ್ಟುಕೊಂಡು ಕುಳಿತಿದ್ದರು. ಮರದ ಕಪಾಟು ತೆರೆದು ಸೂಟ್ ಕೇಸ್ ನೀಡಲು ಬಂದರು. ನಾಳೆ ಯಾವುದರ ಬಗ್ಗೆ ಮಾತಾಡ್ತಿಯಾ ಅನ್ನೋದನ್ನ ನನಗೆ ಹೇಳಬೇಕು ಅಂದರು. ಜೊತೆಗೆ ನಿನಗೆ ನಾಲ್ಕು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅದೆಷ್ಟು ದಿನ ಹೀಗೆ ಇರುತ್ತಿಯಾ ಅಂತ ಹೇಳಿ, ಆಮಿಷ ಒಡ್ಡಿದ್ರು. ಆದರೆ ನಾನದನ್ನು ನಿರಾಕರಿಸಿದೆ’ ಎಂದರು.

ನಾನು ಪ್ರಧಾನಿ ಆಗಬೇಕು ಅನ್ನೋ ಕನಸು ಇರಲಿಲ್ಲ, ಆದ್ರೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದ್ದಿದ್ದು ನಿಜ ಎಂದು ಒಪ್ಪಿಕೊಂಡಿರುವ ಗೌಡರು, ಜೀವನದಲ್ಲಿ ಎಲ್ಲವನ್ನೂ ಅನುಭವಿಸಿದ್ದು ಆಗಿದೆ. ಎಲ್ಲೋ ಹರದನಹಳ್ಳಿಯಲ್ಲಿ ಇದ್ದವನು ನಾನು ಈ ದೇಶದ ಪ್ರಧಾನಿ ಪಟ್ಟಕ್ಕೂ ಏರಿದ್ದು ಆಗಿದೆ. ನನಗೆ ಜೀವನದಲ್ಲಿ ಇನ್ನೇನು ಬೇಕು. ಒಳ್ಳೆಯ ಸಾವು ಬಂದರೆ ಅಷ್ಟೇ ಸಾಕು’ ಎಂದು ಭಾವುಕರಾಗಿ ನುಡಿದಿದ್ದಾರೆ.

ಕೊನೆಗಾಲದಲ್ಲಿ ನರಳಿ, ಆಸ್ಪತ್ರೆ ಸೇರಿ, ಹಿಂಸೆ ಅನುಭವಿಸಿ ಸಾಯುವುದಕ್ಕಿಂತ ಒಂದೇ ಬಾರಿಗೆ ಸಾವು ಬಂದರೆ ಉತ್ತಮ ಅನ್ನೋ ಮೂಲಕ ದೇವೇಗೌಡರು ಎಲ್ಲರ ಮನಕಲಕಿದ್ದಾರೆ.

Leave a Reply