ಕಿಚ್ಚನ ಪೈಲ್ವಾನ್ ಪೋಸ್ಟರ್ ನೋಡಿ ಕೆಲವರು ಅನುಮಾನಗೊಂಡಿರೋದ್ಯಾಕೆ..?

ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕಾಗಿ ಕಾತರದಿಂದ ಕಾಯ್ತಿದೆ. ದಂಗಲ್, ಸುಲ್ತಾನ್ ರೇಂಜ್ಗೆ ನಿರ್ಮಾಣವಾಗ್ತಿರೋ ಬಹುಭಾಷಾ ಸಿನಿಮಾ ಪೈಲ್ವಾನ್. ಅಭಿಮಾನಿಗಳ ಕೋರಿಕೆ ಮೇರೆಗೆ ಚಿತ್ರತಂಡ ಇತ್ತೀಚೆಗೆ ಕುಸ್ತಿ ಪೈಲ್ವಾನ್ ಸುದೀಪ್ ಪೋಸ್ಟರ್ ರಿವೀಲ್ ಮಾಡಿದೆ. ಹುರಿಗಟ್ಟಿದ ದೇಹ, ಅಖಾಡದಲ್ಲಿ ನಿಂತ ಕಿಚ್ಚನ ಖಡಕ್ ಲುಕ್ಕಿಗೆ ಅಭಿಮಾನಿಗಳು ಫಿದಾ ಆಗೋಗಿದ್ದಾರೆ. ಈ ಬೆಂಕಿ ಪೋಸ್ಟರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಾಗಿದೆ. ಪೈಲ್ವಾನ್ ಕಿಚ್ಚ ಸುದೀಪ್ಗೆ ಸ್ಯಾಂಡಲ್ ಬಾದ್ ಶಾ ಅನ್ನೋ ಹೊಸ ಬಿರುದು ಕೊಟ್ಟಿರೋದು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿಸಿದೆ.

ಪೈಲ್ವಾನ್ ಕುಸ್ತಿ ಪೋಸ್ಟರ್ ಇಷ್ಟೆಲ್ಲಾ ಸೌಂಡ್ ಮಾಡ್ತಿದೆ ಸರಿ. ಆದರೆ ಕೆಲವರು ಮಾತ್ರ ಈ ಪೋಸ್ಟರ್ ಮೇಲೆ ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಸಿಜಿ ಸಹಾಯದಿಂದ ಸುದೀಪ್ ಅವರನ್ನ ಸಿಕ್ಸ್ ಪ್ಯಾಕ್ ಲುಕ್ನಲ್ಲಿ ತೋರಿಸಲಾಗಿದೆ. ಪೋಸ್ಟರ್ ನೋಡ್ತಿದ್ರೆ, ಬೇರೆಯವರ ದೇಹಕ್ಕೆ ಕಿಚ್ಚನ ಮುಖವನ್ನ ಅಂಟಿಸಿದಂತೆ ಕಾಣ್ತಿದೆ ಅಂತೆಲ್ಲಾ ಮಾತಾಡೋಕೆ ಶುರು ಮಾಡಿದ್ದಾರೆ. ಕುಸ್ತಿ ಪೈಲ್ವಾನ್ ಕಿಚ್ಚನ ದೇಹದ ಮೇಲೆಲ್ಲಾ ಮಣ್ಣಿದೆ, ಆದರೆ ಮುಖದ ಮೇಲೆ ಯಾಕಿಲ್ಲ..? ಯಾಕೋ ಈ ಪೋಸ್ಟರ್ ಗ್ರಾಫಿಕ್ಸ್ ರೀತಿ ಕಾಣ್ತಿದೆ ಅಲ್ವಾ ಅಂತ ತಲೆಗೆ ಹುಳ ಬಿಟ್ಕೊಂಡಿದ್ದಾರೆ.

ಅಲ್ಲ ಪೋಸ್ಟರ್ನಲ್ಲಿ ತೋರಿಸಿದ ಮೇಲೆ ಸಿನಿಮಾದಲ್ಲೂ ಕಿಚ್ಚನನ್ನ ಇದೇ ರೀತಿ ತೋರಿಸಬೇಕಲ್ವಾ..? ಸಿನಿಮಾದಲ್ಲಿ ಹೇಗೆ ಗ್ರಾಫಿಕ್ಸ್ನಲ್ಲಿ ತೋರಿಸೋಕೆ ಸಾಧ್ಯ ಹೇಳಿ..? ಕಿಚ್ಚ ಸುದೀಪ್ ಇತ್ತೀಚಿಗೆ ಸಿಕ್ಕಾಪ ಪಟ್ಟು ತೂಕ ಇಳಿಸಿಕೊಂಡು ಪೈಲ್ವಾನ್ ಸಿನಿಮಾ ಪಾತ್ರಕ್ಕಾಗಿ ಕಸರತ್ತು ನಡೆಸಿ, ದೇಹವನ್ನ ಹುರಿಗೊಳಿಸಿಕೊಂಡಿದ್ದಾರೆ. ಹಾಗಾಗಿ ಸುದೀಪ್ ಸದ್ದಿಲ್ಲದೇ ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಮಾಡ್ಕೊಂಡಿದ್ದಾರೆ ಅನ್ನೂ ಸುಳಿವು ಸಿಕ್ಕಿತ್ತು. ಅದನ್ನೇ ಈಗ ಪೋಸ್ಟರ್ನಲ್ಲಿ ನೋಡ್ತಿದ್ದೇವೆ. ಇದು ನೂರಕ್ಕೆ ನೂರರಷ್ಟು ಕಿಚ್ಚ ಸುದೀಪ್ ಕುಸ್ತಿ ಪೈಲ್ವಾನ್ ಪೋಸ್ಟರ್. ಇದರಲ್ಲಿ ಯಾವುದೇ ಅನುಮಾನ ಬೇಡ.

ಸದ್ಯ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕುಸ್ತಿ ಅಖಾಡ, ಬಾಕ್ಸಿಂಗ್ ರಿಂಗ್ ಮಾದರಿಯ ಅದ್ದೂರಿ ಸೆಟ್ಗಳಲ್ಲಿ ನಿರ್ಮಿಸಿ, ಪೈಲ್ವಾನ್ ಸಿನಿಮಾ ಚಿತ್ರೀಕರಣ ನಡೆಸಲಾಗ್ತಿದೆ. ಹೆಬ್ಬುಲಿ ಸಿನಿಮಾ ನಿರ್ದೇಶಕ ಕೃಷ್ಣ ಈ ಹೈವೋಲ್ಟೇಜ್ ಸಿನಿಮಾವನ್ನ ಕಟ್ಟಿಕೊಡ್ತಿದ್ದಾರೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಫೆಬ್ರವರಿ ವೇಳೆಗೆ ಸುದೀಪ್ ತೆರೆಮೇಲೆ ಕುಸ್ತಿ ಪೈಲ್ವಾನ್ ಅವತಾರದಲ್ಲಿ ತೊಡೆ ತಟ್ಟಲಿದ್ದಾರೆ.

Leave a Reply