ನ.22ರ ಮಹಾಘಟಬಂಧನ ಸಭೆ ಮುಂದಕ್ಕೆ! ಮಹಾಮೈತ್ರಿಗೆ ಕೂಡಿ ಬರುತ್ತಿಲ್ಲ ಮುಹೂರ್ತ!

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲುಸಲು ಒಂದಾಗಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳಿಗೆ ಯಾಕೋ ಸರಿಯಾದ ಕಾಲವೇ ಕೂಡಿ ಬರುತ್ತಿಲ್ಲ. ನ.22ರಂದು ನಿಗದಿಯಾಗಿದ್ದ ಮಹಾಘಟಬಂಧನದ ಸಭೆ ಈಗ ಮುಂದೂಡಲಾಗಿದೆ. ಇದು ಸಹಜವಾಗಿಯೇ ವಿರೋಧ ಪಕ್ಷಗಳ ಮೈತ್ರಿ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾದಂತಾಗಿದೆ.

ನವೆಂಬರ್ 22ರಂದು ದೆಹಲಿಯಲ್ಲಿ ವಿರೋಧ ಪಕ್ಷಗಳು ಸಭೆ ನಡೆಸಿ ಮಹಾಘಟಬಂಧನಕ್ಕೆ ಚಾಲನೆ ನೀಡಬೇಕಿತ್ತು ಆದರೆ ಈಗ ಅದು ಮುಂದಕ್ಕೆ ಹೋಗಿದೆ.
ಬಿಜೆಪಿ ವಿರುದ್ಧದ ಮಹಾಘಟಬಂಧನಕ್ಕೆ ನೇತೃತ್ವ ಯಾರು ಎಂಬುದಕ್ಕೆ ಇನ್ನು ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಹುಲ್ ಗಾಂಧಿಯನ್ನು ನಾಯಕರಾಗಿ ಒಪ್ಪಿಕೊಳ್ಳಲು ಅನೇಕ ಪಕ್ಷಗಳು ಸಿದ್ಧವಿಲ್ಲ. ಕೆಲ ತಿಂಗಳ ಹಿಂದೆ ಮಹಾಮೈತ್ರಿಗೆ ಉತ್ಸುಕರಾಗಿದ್ದ ಮಾಯಾವತಿ ಈಗ ತಣ್ಣಗಾಗಿದ್ದಾರೆ. ಮಮತಾ ಬ್ಯಾನರ್ಜಿ ಅದೇ ಉತ್ಸಾಹ ಉಳಿಸಿಕೊಂಡಿದ್ದಾರೆ. ಈಗ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಹಾಮೈತ್ರಿಗಾಗಿ ಶ್ರಮಿಸುತ್ತಿದ್ದಾರೆ.

ಈ ಹಿಂದೆ ದೆಹಲಿ ಅರವಿಂದ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮೈತ್ರಿ ಕುರಿತು ಚರ್ಚೆ ನಡೆಸಿದ್ದ ನಾಯ್ಡು, ಕಳೆದ ಕೆಲವು ದಿನಗಳಲ್ಲಿ ಜೆಡಿಎಸ್ ಹಿರಿಯ ನಾಯಕ ಮಾಜಿ ಪ್ರಧಾನಿ ದೇವೇಗೌಡ, ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ, ತಮಿಳುನಾಡು ವಿರೋಧ ಪಕ್ಷದ ನಾಯಕ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದಾರೆ. ಸೋಮವಾರ ಸಂಜೆ ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಜತೆ ಮಾತುಕತೆ ನಡೆಸಿದ್ದಾರೆ.

ಮಾತುಕತೆ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ ಹೇಳಿದ್ದಿಷ್ಟು…
‘ಮಹಾಮೈತ್ರಿಯಲ್ಲಿ ಎಲ್ಲರು ಪ್ರಮುಖ ನಾಯಕರೇ. ನಮ್ಮಲ್ಲಿ ಇರುವವರೆಲ್ಲ ಹಿರಿಯರು. ಮೋದಿಗಿಂತಲು ಹಿರಿಯರೇ. ನಾವೆಲ್ಲರೂ ಒಟ್ಟಾಗಿದ್ದು, ಬಿಜೆಪಿ ವಿರುದ್ಧ ಹೋರಾಡುತ್ತೇವೆ.’

Leave a Reply