ಸ್ಥಳೀಯರಿಗೇ ಉದ್ಯೋಗಾವಕಾಶ ಕಲ್ಪಿಸಲು ಬಳ್ಳಾರಿ ಗಣಿ ಉದ್ಯಮಿಗಳಿಗೆ ಡಿಕೆಶಿ ಸೂಚನೆ

ಡಿಜಿಟಲ್ ಕನ್ನಡ ಟೀಮ್:

ಕಬ್ಬಿಣದ ಅದಿರು, ಕಚ್ಛಾವಸ್ತು, ಸಿದ್ಧವಸ್ತು ಸಾಗಣೆ ಒಪ್ಪಂದದಿಂದ ಹಿಡಿದು ಲಾರಿ ಚಾಲಕರು, ಕ್ಲೀನರ್, ಕೂಲಿ ಕಾರ್ಮಿಕರ ನೇಮಕದವರೆಗೆ ಸ್ಥಳೀಯರಿಗೇ ಅವಕಾಶ ನೀಡಬೇಕು ಎಂದು ಬಳ್ಳಾರಿ ಗಣಿ ಉದ್ಯಮಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ.

ಗಣಿಗಾರಿಕೆ ಮತ್ತು ಅದಕ್ಕೆ ಸಂಬಂದಪಟ್ಟ ಕಾರ್ಖಾನೆಗಳಿಗೆ ಪರವಾನಗಿ ನೀಡುವಾಗ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವುದು ಸೇರಿದಂತೆ ಕೆಲವು ನಿಬಂಧನೆಗಳನ್ನು ವಿಧಿಸಿದೆ. ಬಹುತೇಕ ಉದ್ದಿಮೆಗಳು ಈ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ನೇರ ಹಾಗೂ ಪರೋಕ್ಷವಾಗಿ ಗಣಿ ಉದ್ದಿಮೆಗಳನ್ನು ಅವಲಂಬಿಸಿದ್ದ ಸಾವಿರಾರು ಮಂದಿ ಇದೀಗ ನಿರದ್ಯೋಗಿಗಳಾಗಿ ವಲಸೆ ಹೋಗುತ್ತಿದ್ದಾರೆ. ಅವರಿಗೆ ಉದ್ಯೋಗಾವಕಾಶ ಕಲ್ಪಿಸಿ ಬದುಕುವ ಹಕ್ಕು ಸಂರಕ್ಷಿಸುವುದು ಉದ್ಯಮಿಗಳ ಕರ್ತವ್ಯ ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸಂಜೆ ಕರೆದಿದ್ದ ಬಳ್ಳಾರಿಯ ನಾನಾ ಗಣಿ ಸಂಸ್ಥೆಗಳು ಹಾಗೂ ಲಾರಿ ಮಾಲೀಕರು, ಕಾರ್ಮಿಕರ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಆಗ್ರಹಪೂರ್ವಕವಾಗಿ ಮನವಿ ಮಾಡಿದರು.

ಈ ಸಭೆಯ ತರುವಾಯ ನಿಮ್ಮ, ನಿಮ್ಮ ಮಾಲೀಕರಿಗೆ, ಆಡಳಿತ ಮಂಡಳಿಗೆ ಈ ಸಭೆಯ ಉದ್ದೇಶ, ಸಂದೇಶ ವಿವರಿಸಬೇಕು. ನಂತರ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳ ಜತೆ ನೀವೆಲ್ಲ ಮತ್ತೊಮ್ಮೆ ಸಭೆ ನಡೆಸಬೇಕು. ಈಗಿನಿಂದಾಚೆಗೆ ಯಾರ್ಯಾರಿಗೆ ಎಷ್ಟೆಷ್ಟು ಉದ್ಯೋಗ ಅವಕಾಶ ಕಲ್ಪಿಸಿದ್ದೀರಿ ಎಂಬುದರ ಬಗ್ಗೆ ಪಟ್ಟಿ ಮಾಡಿ ಕೊಡಬೇಕು. ಇದನ್ನು ಬಹಳ ವಿನಯಪೂರ್ವಕವಾಗಿ ಒತ್ತಾಯ ಮಾಡುತ್ತಿದ್ದೇನೆ ಎಂದು ಹೇಳಿದರು.

ಕೆಲವು ಸಂಸ್ಥೆಗಳು ಹೊರ ರಾಜ್ಯದವರೊಂದಿಗೆ ಸಾಗಣೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ಸ್ಥಳೀಯ ಲಾರಿ ಮಾಲೀಕರು, ಚಾಲಕರು, ಕ್ಲೀನರ್ ಗಳು, ಕಾರ್ಮಿಕರು ಕೆಲಸ ವಂಚಿತರಾಗಿದ್ದಾರೆ. ಕೆಲವು ಸಂಸ್ಥಗಳು ಸ್ಥಳೀಯರನ್ನು ಕೆಲಸದಿಂದ ಕಿತ್ತು ಹಾಕಿ, ಹೊರಗಿನವರಿಗೆ ಅವಕಾಶ ಕಲ್ಪಿಸಿರುವುದು ಗೊತ್ತಾಗಿದೆ. ಮಾಲೀಕರು ಬ್ಯಾಂಕ್ ಸಾಲ ತೀರಿಸಲಾಗದೆ ಲಾರಿಗಳನ್ನು ಮಾರಿಕೊಂಡಿದ್ದಾರೆ. ಬ್ಯಾಂಕ್ ಗಳು ಲಾರಿಗಳನ್ನು ಜಪ್ದಿ ಮಾಡಿಕೊಂಡಿವೆ. ಚಾಲಕರು, ಕ್ಲೀನರ್ ಗಳು ಕೆಲಸ ಇಲ್ಲದೆ ಊರು ಬಿಟ್ಟು ಹೋಗುತ್ತಿದ್ದಾರೆ. ಕೆಲವರು ಕಳ್ಳತನ, ದರೋಡೆಯಂಥ ಸಮಾಜಘಾತುಕ ಕೃತ್ಯಗಳಿಗೂ ಕೈ ಹಾಕಿದ್ದಾರೆ. ಅವರಿಗೆ ಉದ್ಯೋಗ ಕೊಟ್ಟು ಸಾಮಾಜಿಕ ಜವಾಬ್ದಾರಿ ಮೆರೆಯುವುದು ನಮ್ಮ-ನಿಮ್ಮ ಕರ್ತವ್ಯ ಎಂದರು.

ಗಣಿ ಉದ್ಯಮಿಗಳು ಇಲ್ಲಿನ ಖನಿಜ ಸಂಪತ್ತು ಬಳಕೆ ಮಾಡಿಕೊಳ್ಳುವುದರ ಜತೆಗೆ ರಾಜ್ಯ ಸರಕಾರದಿಂದಲೂ ಭೂಮಿ, ನೀರು, ವಿದ್ಯುತ್ ಮತ್ತಿತರ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಗಣಿ ಉದ್ಯಮಗಳಿಂದಾಗಿ ಬಳ್ಳಾರಿ ನಗರ ಸೇರಿದಂತೆ ಬಹುತೇಕ ಪ್ರದೇಶಗಳ ಮನೆಗಳ ಮೇಲೆ ಅರ್ಧ ಇಂಚು ಧೂಳು ಆವರಿಸಿದೆ. ಪರಿಸರ, ಸಾರ್ವಜನಿಕ ಸಂಪರ್ಕ ವ್ಯವಸ್ಥೆಗೆ ತೀವ್ರ ಧಕ್ಕೆ ಆಗಿದೆ. ಆದರೂ ಜನ ಸಹನೆಯಿಂದ ಇದ್ದಾರೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಏನೇನಾಯ್ತು, ಗಣಿ ಉದ್ಯಮಿಗಳು ಸೇರಿದಂತೆ ಯಾರೆಲ್ಲ ಏನೇನು ಮಾಡಿದ್ದರು, ಯಾರಿಗೆಲ್ಲ ಏನೇನೂ ತೊಂದರೆ ಆಯ್ತು, ಈಗ ಏನೇನೂ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಾನು ವ್ಯಾಖ್ಯಾನಕ್ಕೆ ಹೋಗುವುದಿಲ್ಲ. ಮುಂದೇನಾಗಬೇಕು ಎಂಬುದರ ಬಗ್ಗೆ ಹೇಳುತ್ತಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಿವಕುಮಾರ್ ಕಟ್ಟುನಿಟ್ಟಾಗಿ ಹೇಳಿದರು.

ನಿಮಗೆ ಉದ್ಯೋಗ ಸೃಷ್ಟಿಸುವ ಅವಕಾಶ ಇದೆ. ಬದುಕು ಕಟ್ಟಿಕೊಂಡ ಜಾಗದಲ್ಲಿ ಜನರ ಬದುಕಿಗೆ ಅವಕಾಶ ಕಲ್ಪಿಸುವ ಬದ್ಧತೆ ಕೂಡ ನಿಮಗಿರಬೇಕು. ಎಂಜಿನಿಯರ್ ಗಳು, ಅಧಿಕಾರಿಗಳು ಸೇರಿಂದತೆ ಪರಿಣಿತರ (ಸ್ಕಿಲ್ಡ್) ನೇಮಕದಲ್ಲಿ ನಾವು ತಲೆ ಹಾಕಲು ಹೋಗುವುದಿಲ್ಲ. ಮಾಸಿಕ ಕೆಲವೇ ಸಾವಿರ ರುಪಾಯಿ ವೇತನದಲ್ಲಿ ಬದುಕು ನಡೆಸುವ ಕೆಳಸ್ತರದ ಕಾರ್ಮಿಕರ ಪರ ನಾನು ಮಾತನಾಡುತ್ತಿದ್ದೇನೆ. ನಾನು ಅಧಿಕಾರಿದಲ್ಲಿ ಮೂರು ತಿಂಗಳು, ಇರುತ್ತೇನೋ, ಮೂರು ವರ್ಷ ಇರುತ್ತೇನೋ ಅದು ಮುಖ್ಯವಲ್ಲ. ಆದರೆ ನಾನು ಇರುವವರೆಗೆ ಸ್ಥಳೀಯರ ಹಿತ ರಕ್ಷಣೆಗೆ ಬದ್ಧನಿದ್ದೇನೆ. ನಾನು ಸುಮ್ಮನೆ ಮಾತಾಡಿ ಹೋಗಲು ಬಂದಿಲ್ಲ. ಇಲ್ಲಿನ ಸಮಸ್ಯೆಯ ಗಂಭೀರತೆ ಅರಿತು ನಿಮ್ಮನ್ನು ಕರೆದಿದ್ದೇನೆ. ಇಲ್ಲಿನ ಜನರ ಹಿತ ಕಾಯಲು ನೀವು ಕೂಡ ಕೈ ಜೋಡಿಸಬೇಕು ಎಂದರು.

ಸಂಡೂರು ಶಾಸಕ ತುಕರಾಂ, ಹೊಸಪೇಟೆ ಶಾಸಕ ಆನಂದಸಿಂಗ್, ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್, ಜೆಎಸ್ ಡಬ್ಲ್ಯೂ, ಬಲ್ದೋಟಾ, ಎನ್ಎಮ್ ಡಿಸಿ, ಬಾಲಾಜಿ ಇಂಡಸ್ಟ್ರೀಸ್ ಸೇರಿದಂತೆ ನಾನಾ ಗಣಿ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply