ವಿಶ್ವಕಪ್ ಗೂ ಮುನ್ನ ಟೀಮ್ ಇಂಡಿಯಾಗೆ ಕಾಂಗರೂ ನಾಡಲ್ಲಿ ಪೂರ್ವಸಿದ್ಧತಾ ಪರೀಕ್ಷೆ!

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷ ಆಂಗ್ಲರ ನೆಲದಲ್ಲಿ ವಿಶ್ವಕಪ್ ಮಹಾಸಮರ ನಡೆಯಲಿದ್ದು ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಆಸ್ಟ್ರೇಲಿಯಾ ಪ್ರವಾಸ ಒಂದು ರೀತಿ ಪೂರ್ವಸಿದ್ಧತಾ ಪರೀಕ್ಷೆಯಾಗಿ ಪರಿಣಮಿಸಿದೆ.

ಇತ್ತೀಚೆಗೆ ಭಾರತ ತಂಡ ಕೈಗೊಂಡ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಹೇಳಿಕೊಳ್ಳುವ ಫಲಿತಾಂಶ ಸಿಗದಿದ್ದರೂ ನಾಯಕ ವಿರಾಟ್ ಕೊಹ್ಲಿ ಅತ್ಯದ್ಭುತ ಫಾರ್ಮ್ ಎಲ್ಲರ ಗಮನ ಸೆಳೆದಿತ್ತು.

ಮೂರು ಟಿ20, ನಾಲ್ಕು ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿರುವ ಕೊಹ್ಲಿ ಪಡೆ ಆತಿಥೇಯರಿಗೆ ಕಠಿಣ ಸವಾಲು ನೀಡುವ ತಾಕತ್ತು ಹೊಂದಿದೆ. ಹೀಗಾಗಿ ಸರಣಿ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ.

ವಿಶ್ವಕಪ್ ಟೂರ್ನಿ ಯನ್ನು ಗಮನದಲ್ಲಿ ಇಟ್ಟುಕೊಂಡು ನೋಡುವುದಾದರೆ ಟೀಮ್ ಇಂಡಿಯಾ ದಲ್ಲಿರುವ ಕೆಲವು ಕತೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಸಮತೋಲಿತ ವಿಶ್ವಕಪ್ ತಂಡವನ್ನು ಕಟ್ಟಿಕೊಳ್ಳಲು ಉತ್ತಮ ವೇದಿಕೆಯಾಗಿದೆ.

ಭಾರತ ಹಾಗೂ ಉಪ ಖಂಡ ಗಳಲ್ಲಿನ ಪಿಚ್ ಗಳಲ್ಲಿ ರನ್ ಹೊಳೆ ಹರಿಸುವ ಸಾಮರ್ಥ್ಯ ಹೊಂದಿರುವ ಭಾರತದ ಬ್ಯಾಟ್ಸ್ ಮನ್ ಗಳು ಆಸ್ಟ್ರೇಲಿಯದ ವೇಗ ಹಾಗೂ ಪುಟಿತದ ಪಿಚ್ ಗಳಲ್ಲಿ ಕಾಂಗರೂ ವೇಗದ ದಾಳಿಯನ್ನು ಹೇಗೆ ಹೇಗೆ ಎದುರಿಸುತ್ತಾರೆ ಎಂಬುದು ತಿಳಿಯಲಿದೆ. ಇನ್ನು ಇತ್ತೀಚಿನ ಪಂದ್ಯಗಳನ್ನು ನೋಡಿದಾಗ ಟೀಮ್ ಇಂಡಿಯಾವನ್ನು ಕಾಡಿತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅಸ್ಥಿರತೆ.

ಆರಂಭಿಕ ಶಿಖರ್ ಧವನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೇಲೆ ಹೆಚ್ಚು ಅವಲಂಬಿತವಾಗಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಕಟ್ಟಬಲ್ಲ ಆಟಗಾರನ ಕೊರತೆ ಎದುರಿಸುತ್ತಿದೆ. ಈ ಮಧ್ಯೆ ಮಹೇಂದ್ರ ಸಿಂಗ್ ಧೋನಿ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಭಾರತ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅದರಲ್ಲೂ ತಂಡದಲ್ಲಿ ನಾಲ್ಕನೇ ಸ್ಥಾನ ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆಗೆ ಕಳೆದ ಕೆಲವು ವರ್ಷಗಳಿಂದ ಸರಿಯಾದ ಉತ್ತರ ಸಿಕ್ಕಿಲ್ಲ. ನಾಲ್ಕು ವರ್ಷಗಳಲ್ಲಿ ಈ ಕ್ರಮಾಂಕದಲ್ಲಿ ಸುಮಾರು ಒಂದು ಡಜನ್ ಆಟಗಾರರನ್ನು ಪ್ರಯೋಗಿಸಿದರು ಯಾರು ಪರಿಣಾಮಕಾರಿಯಾಗಿ ಈ ಸ್ಥಾನವನ್ನು ತುಂಬಲು ಸಾಧ್ಯವಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಎಂದರೆ ಕೊಹ್ಲಿ ಮೂರನೇ ಕ್ರಮದಿಂದ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು.

ಅವಕಾಶ ಸಿಕ್ಕಾಗಲೆಲ್ಲ ಉತ್ತಮ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಮೂರನೇ ಸ್ಥಾನವನ್ನು ಬಿಡುವುದು ಅನಿವಾರ್ಯವಾಗಿದೆ. ಆದರೆ ಏಷ್ಯಾ ಕಪ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗಳನ್ನು ನೋಡಿದಾಗ ರಾಹುಲ್ ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಕಲ್ಪಿಸದೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಇನ್ನು ಅಂಬಾಟಿ ರಾಯ್ಡು ಇಂಡೀಸ್ ಪ್ರವಾಸದಲ್ಲಿ ತಕ್ಕ ಮಟ್ಟಿಗೆ ಈ ಕ್ರಮಾಂಕದಲ್ಲಿ ಹೊಂದಿಕೊಳ್ಳುವ ಸೂಚನೆ ನೀಡಿದರು. ಹೀಗಾಗಿ ಟೀಮ್ ಇಂಡಿಯಾ ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್ ಆಡುತ್ತಾರೋ ಅಥವಾ ರಾಯ್ಡು ಅವಕಾಶ ಪಡೆಯುತ್ತಾರೋ ಎಂಬುದು ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟುಹಾಕಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಉತ್ತರ ನೀಡಲಿದೆ.

Leave a Reply