ಸಕ್ಕರೆ ಕಾರ್ಖಾನೆ ಮೇಲೆ ಬ್ರಹ್ಮಾಸ್ತ್ರ ಹೂಡ್ತಾರಾ ಸಿಎಂ ಕುಮಾರಸ್ವಾಮಿ?

ಡಿಜಿಟಲ್ ಕನ್ನಡ ಟೀಮ್:

ಕಬ್ಬು ಬೆಳೆಗೆ ಬೆಂಬಲ ಬೆಲೆ ಹಾಗೂ ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡುವಂತೆ ರೈತರು ಸರ್ಕಾರದ ವಿರುದ್ಧ ಸಮರ ಸಾರಿದ ಕೂಡಲೇ ಕಾರ್ಯಪ್ರವೃತರಾದ ಸಿಎಂ ಕುಮಾರಸ್ವಾಮಿ, ನೇರವಾಗಿ ಪ್ರತಿಭಟನಾ ನಿರತ ರೈತರನ್ನು ಬೆಂಗಳೂರಿನ ವಿಧಾನಸೌಧಕ್ಕೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ರೈತ ಮುಖಂಡರು ಹಲವಾರು ಮನವಿಗಳನ್ನು ಕೊಟ್ಟಿದ್ದು, ರಾಜ್ಯ ಸರ್ಕಾರ ಅನ್ನದಾತರ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹಂತ ಹಂತವಾಗಿ ಎಲ್ಲಾ ಮನವಿಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಕಳೆದ ನಾಲ್ಕೈದು ವರ್ಷದಿಂದ ರೈತರ ಹೋರಾಟ ಹತ್ತಿಕ್ಕುವ ಸಲುವಾಗಿ ದಾಖಲು ಮಾಡಿಕೊಂಡಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲು ಸಿಎಂ ಸಮ್ಮತಿ ಸೂಚಿಸಿದ್ದು, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ನಿರ್ಧಾರ ಪ್ರಕಟ ಮಾಡುವುದಾಗಿಯೂ ಒಪ್ಪಿಕೊಂಡಿದ್ದಾರೆ.

ರೈತರ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡ್ತಿದ್ದ ಹಾಗೆ ಕುಪಿತರಾದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು, ಯಾವುದೇ ಕಾರಣಕ್ಕೂ ಮಾಲೀಕರ ಜೊತೆ ಮಾತನಾಡದೆ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು. ಬಳಿಕ ಪ್ರತ್ಯೇಕವಾಗಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರ ಜೊತೆ ಮಾತನಾಡಿ ಎರಡು ಕಡೆಯ ವಾದವನ್ನು ಆಲಿಸಿದ್ದಾರೆ. ಜೊತೆಗೆ ಇದೇ ತಿಂಗಳ 22 ರಂದು ಸ್ವತಃ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಲಿದ್ದು, ಸರ್ಕಾರದ ಮಾತಿಗೆ ಸಮ್ಮತಿ ಸೂಚಿಸಲೇ ಬೇಕು. ಇಲ್ಲದಿದ್ದರೆ ಸರ್ಕಾರದ ಬಳಿ ಸಕ್ಕರೆ ಕಾರ್ಖಾನೆಗಳ ಕೀಲಿ ನಮ್ಮ ಬಳಿ ಇದೆ. ಸರ್ಕಾರವನ್ನು ಉಢಾಫೆ ಮಾಡಿದ್ರೆ‌ ಸೂಕ್ತ ರೀತಿಯಲ್ಲಿ‌ ದಾರಿಗೆ‌ ತರಬೇಕಾಗುತ್ತದೆ ಎಂದು‌ ಸಿಎಂ ಗುಡುಗಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಹತ್ತು ದಿನಗಳ ಕಾಲ ಚಿಳಿಗಾಲದ ಅಧಿವೇಶನ ನಡೆಯಲಿದ್ದು, ಬೆಳಗಾವಿಯ ಸುವರ್ಣಸೌಧದಲ್ಲಿ‌ಸಕಲ ತಯಾರಿ ನಡೆಯುತ್ತಿದೆ. ಒಂದು ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಬೇಡಿಕೆಗೆ‌ ಒಪ್ಪಿಗೆ ಸೂಚಿಸದಿದ್ದರೆ‌ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಇದೇ ಅಧಿವೇಶನದಲ್ಲಿ ಕಾನೂನು ರೂಪಿಸಲು ಸಜ್ಜಾಗಿದೆ. ಈಗಾಗಲೇ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಸಕ್ಕರೆ ಕಾರ್ಖಾನೆಗಳ‌ ಮಾಲೀಕರ ನಡುವಿನ ಸಂಘರ್ಷ ತಡೆಗಟ್ಟುವುದು, ರೈತರ ಹಣವನ್ನು‌ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡರೆ ಅಷ್ಟು‌ ದಿನಗಳ ಕಾಲ ಬಡ್ಡಿ ಸೇರಿಸಿ ಪಾವತಿಸಬೇಕು‌ ಅನ್ನೋ ಸೂಚನೆ ಮತ್ತು ಸಕ್ಕರೆ ಕಾರ್ಖಾನೆಯಲ್ಲಿ ಉತ್ಪತಿಯಾಗುವ ಕಿರು ಉತ್ಪನ್ನಗಳಿಂದ ಬರುವ ಲಾಭದಲ್ಲೂ ರೈತರಿಗೆ ಷೇರು ಕೊಡಬೇಕು ಅನ್ನೋ ಮಾಹಿತಿಯೂ ಒರಲಿದೆ.. ಒಟ್ಟಾರೆ ರೈತರ ಪರವಾಗಿಯೇ ಇರುತ್ತೇನೆ. ನಿಮಗೆ ಏನಾದರೂ ಸಮಸ್ಯೆ ಆದರೆ ಬೀಡಿದಿಗಿಳಿಯುವ ಮೊದಲೇ‌ ನನ್ನ ಬಳಿಗೆ ಬನ್ನಿ‌ ಎಂದು ಸಿಎಂ ಕರೆ ನೀಡಿದ್ದಾರೆ.. ಅದರ ಜೊತೆ ಸಕ್ಕರೆ ಕಾರ್ಖಾನೆಗಳ ಅರ್ಭಟಕ್ಕೆ ಮೂಗುದಾರ ಹಾಕಲು ರಾಜ್ಯ ಸರ್ಕಾರದ‌ ಮುಂದಾಗಿರೋದು‌ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದರೆ ಸುಳ್ಳಲ್ಲ.

Leave a Reply