ಲೋಕಸಭೆ ಚುನಾವಣೆ ಮುಗಿಯುವವರೆಗೂ ರಾಜ್ಯ ಸಂಪುಟ ವಿಸ್ತರಣೆ ಡೌಟ್!

ಡಿಜಿಟಲ್ ಕನ್ನಡ ಟೀಮ್:

ಯಾರೂ ಏನೇ ಹೇಳಲಿ, ಮುಂದಿನ ಲೋಕಸಭೆ ಚುನಾವಣೆ ಮುಗಿಯುವವರೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವುದು ಅನುಮಾನ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಉಭಯ ಪಕ್ಷಗಳ ಆಕಾಂಕ್ಷಿಗಳ ಮೂಗಿಗೆ ಸಚಿವ ಸಂಪುಟ ವಿಸ್ತರಣೆಯ ತುಪ್ಪ ಹಚ್ಚುತ್ತಾ ಬರಲಾಗಿದೆ. ಕಳೆದ ಹದಿನೈದು ದಿನಗಳಿಂದ ಉಭಯ ಪಕ್ಷಗಳ ಮುಖಂಡರು ಇದೇ ಕೆಲಸವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಿದ್ದರು. ಆದರೆ ಚುನಾವಣೆ ಹತ್ತಿರದಲ್ಲಿಟ್ಟುಕೊಂಡು ಈ ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ತೀರಾ ಕಡಿಮೆ. ಇರುವ ಒಂದೆರಡು ಸ್ಥಾನ ತುಂಬಲು ಹೋಗಿ ಭಿನ್ನಮತಕ್ಕೆ ಮೈಮೇಲೆ ಎಳೆದುಕೊಳ್ಳುವ ಮೂರ್ಖ ಕೆಲಸವನ್ನು ಮಾಡಲು ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಸಿದ್ಧವಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಸದ್ಯಕ್ಕೆ ಆಗುವ ಲಕ್ಷಣಗಳಿಲ್ಲ.

ಈಗೇನಾದರೂ ಸಂಪುಟ ವಿಸ್ತರಣೆ ಮಾಡಿದರೆ ಅವಕಾಶ ವಂಚಿತರು ಬಂಡಾಯ ಹೇಳುವುದು ನಿಶ್ಚಿತ. ಇದರಿಂದ ಲೋಕಸಭೆ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದರ ಜತೆಗೆ ಆಪರೇಷನ್ ಕಮಲ ಮಾಡಲು ಚಾತಕ ಪಕ್ಷಿಯಂತೆ ಕಾಯುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಕೈಗೆ ಮೈತ್ರಿ ಪಕ್ಷಗಳೇ ಅಸ್ತ್ರ ಕೊಟ್ಟಂತಾಗುತ್ತದೆ. ಮೊದಲೇ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲು ತಹತಹಿಸುತ್ತಿದ್ದಾರೆ. ಅವರಿಗೆ ಸಂಪುಟ ಸ್ಥಾನ ವಂಚಿತರನ್ನು ಬಿಜೆಪಿಗೆ ಸೆಳೆಯುವುದು ಸುಲಭವಾಗುತ್ತದೆ. ಈ ಎಲ್ಲ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಪಕ್ಷಗಳು ಸಂಪುಟ ವಿಸ್ತರಣೆಯಂಥ ದುಸ್ಸಾಹಸಕ್ಕೆ ಕೈ ಹಾಕಲು ಹೋಗುವುದಿಲ್ಲ.

ಹಾಗೆಂದು ಅವರು ಸುಮ್ಮನೆ ಕೂರಲು ಆಗುವುದಿಲ್ಲ. ಹೀಗಾಗಿ ಸಚಿವ ಸ್ಥಾನಕಾಂಕ್ಷಿಗಳ ನಿರೀಕ್ಷೆ ತಣಿಸಲು ಇಷ್ಟರಲ್ಲೇ, ಸದ್ಯದಲ್ಲೇ, ಇನ್ನೊಂದು ವಾರದಲ್ಲೇ, ಹದಿನೈದು ದಿನದಲ್ಲೇ, ಈ ತಿಂಗಳ ಅಂತ್ಯದಲ್ಲೇ ಸಂಪುಟ ವಿಸ್ತರಣೆ ಎಂದು ಹೇಳಬೇಕು. ಹೇಳುತ್ತಾ ಬಂದಿದ್ದಾರೆ ಕೂಡ. ಅದು ದೇವೇಗೌಡರಾಗಬಹುದು, ಸಿಎಂ ಕುಮಾರಸ್ವಾಮಿ ಆಗಬಹುದು, ಡಿಸಿಎಂ ಪರಮೇಶ್ವರ ಆಗಬಹುದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಬಹುದು – ಹೀಗೆ ಭರವಸೆ ನೀಡಬೇಕು, ನೀಡಿದ್ದಾರೆ. ಆದರೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಅದು ಸಾಧ್ಯವಾಗುವುದಿಲ್ಲ.

ಡಿಸಿಎಂ ಪರಮೇಶ್ವರ ಇದೀಗ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ನೆಪ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅನುಮತಿ ಬೇಕು ಎಂದಿದ್ದಾರೆ. ಹದಿನೈದು ದಿನದ ಹಿಂದೆ ಭರವಸೆ ನೀಡುವಾಗ ರಾಹುಲ್ ಗಾಂಧಿ ಅವರು ಅನುಮತಿ ನೀಡಿದ್ದರೆ ಎಂಬ ಪ್ರಶ್ನೆ ಈಗ ಉದ್ಭವವಾಗುತ್ತದೆ. ಇದೆಲ್ಲವನ್ನೂ ನೋಡಿದಾಗ ಸಂಪುಟ ವಿಸ್ತರಣೆ ಸದ್ಯಕ್ಕೆ ಮರೀಚಿಕೆ ಎಂಬುದು ಸುಸ್ಪಷ್ಟ.

Leave a Reply