ವಿವಾದಗಳ ಸರಮಾಲೆ, ಮಾತನಾಡಲು ಹೆದರುತ್ತಿದ್ದಾರಾ ಸಿಎಂ ಕುಮಾರಸ್ವಾಮಿ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ “ಬಡವರ ಬಂಧು” ಯೋಜನೆಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಯಶವಂತಪುರದ ಎಪಿಎಂಸಿ ಯಾರ್ಡ್‌ನಲ್ಲಿ ನಡೆದ ಸಮಾರಂಭದಲ್ಲಿ ಗುರುವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಬೀದಿಬದಿ ವ್ಯಾಪಾರ ಮಾಡುವ ಬಡ ಜನರಿಗೆ ಪ್ರತಿದಿನ ಸಾಲಸೌಲಭ್ಯ ನೀಡುವ ಯೋಜನೆ ಇದಾಗಿದ್ದು, ಇನ್ಮುಂದೆ ವ್ಯಾಪಾರಿಗಳು ಮೀಟರ್ ಬಡ್ಡಿಕೋರರಿಂದ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವುದಿಲ್ಲ.

ರಾಜ್ಯ ಸರ್ಕಾರ ಗುರ್ತಿಸಿರುವ ಬ್ಯಾಂಕ್‌ಗಳಲ್ಲಿ ನೋಂದಾಯಿಸಿಕೊಂಡು ಆಧಾರ್ ಕಾರ್ಡ್ ಕೊಟ್ಟರೆ, ಬೆಂಗಳೂರಿನಲ್ಲಿ 10 ಸಾವಿರ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ಸಾವಿರ, ಜಿಲ್ಲಾ ಕೇಂದ್ರಗಳಲ್ಲಿ 3 ಸಾವಿರ ರುಪಾಯಿ ಸಾಲ ಬಡ್ಡಿ ರಹಿತವಾಗಿ ನೀಡಲಾಗುತ್ತದೆ.

‘ಬಡವರ ಬಂಧು’ ಯೋಜನೆಗೆ ಚಾಲನೆ ನೀಡಿ, ಮಾತನಾಡಿದ ಕುಮಾರಸ್ವಾಮಿ, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವವರ ಮೈ ಮೇಲೆ ಒಂದೊಂದು ಕೆಜಿ ಚಿನ್ನ ಇರುತ್ತೆ. ಕೈಗೆ ಖಡಗ, ಕತ್ತಿಗೆ ಸರ ಹಾಕ್ಕೊಂಡು ಓಡಾಡ್ತಿರ್ತಾರೆ. ಅವರು ಸಾಲ ವಸೂಲಿ ಮಾಡಲು ಗೂಂಡಾಗಳನ್ನು ಇಟ್ಟುಕೊಂಡಿದ್ದು ಸಾಲ ತೆಗೆದುಕೊಂಡವರು ದುಪ್ಪಟ್ಟು ಬಡ್ಡಿ‌ ಸೇರಿಸಿ ವಾಪಸ್ ಮಾಡದಿದ್ರೆ ದಬ್ಬಾಳಿಕೆ, ದೌರ್ಜನ್ಯ ಮಾಡಿ ಸಾಲ ವಸೂಲಿ ಮಾಡ್ತಾರೆ ಎಂದ್ರು. ಈ ವೇಳೆ ಗೂಂಡಾಗಳನ್ನು ಇಟ್ಟುಕೊಂಡಿರ್ತಾರೆ ಎಂದರಾದರೂ ಬಳಿಕ ಸಾವರಿಸಿಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ, ‘ನನ್ನ ಮಾತನ್ನು ಮತ್ತೊಮ್ಮೆ ತಪ್ಪಾಗಿ ಅರ್ಥೈಸುತ್ತಾರೊ, ಏನೂ ಗೊತ್ತಿಲ್ಲ. ಈಗ ನಾನು ಏನೇ ಮಾತಾಡಿದ್ರು ತಪ್ಪಾಗಿ ಕಾಣುತ್ತಿದೆ ಅಂದ್ರು..’

ಮುಖ್ಯಮಂತ್ರಿ ಆಗಲು ಕುಮಾರಸ್ವಾಮಿ ನಾಲಯಾಕ್ ಎಂದಿದ್ದ ರೈತ ಮಹಿಳೆ ಜಯಶ್ರೀಗೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ ಎಂದು‌ ಸಾರ್ವಜನಿಕ ಭಾಷಣದ ವೇಳೆ ಹೇಳಿದ್ರು. ಈ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದನ್ನು ವಿವಾದ ಮಾಡುವಲ್ಲಿ ವಿರೋಧ ಪಕ್ಷ ಬಿಜೆಪಿ ಜೊತೆಗೆ ಮಾಧ್ಯಮಗಳ ಪಾತ್ರ ಬಹುಮುಖ್ಯವಾಗಿತ್ತು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಬಡ್ಡಿ ದಂಧೆಕೋರರು ಸಾಲ ವಸೂಲಾತಿಗಾಗಿ ಗೂಂಡಾಗಳನ್ನು ಸಾಕಿಕೊಂಡು ಇರುತ್ತಾರೆ ಎಂದು ನಂತರ, ‘ಏನು ಮಾತನಾಡಿದರೂ ವಿವಾದ ಮಾಡುತ್ತಾರೆ. ನಾನು ಏನು ಮಾತನಾಡಬೇಕೆಂಬುದೇ ನನಗೆ ಗೊತ್ತಾಗುತ್ತಿಲ್ಲ. ಇನ್ಮುಂದೆ ನಾನು ಮಾತನಾಡಬೇಕು ಅಂದ್ರೆ ಒಂದು ಸಮಿತಿ ರಚನೆ ಮಾಡಿಕೊಳ್ಳಬೇಕಾಗುತ್ತದೆ. ಆ ಸಮಿತಿಯ ಪ್ರಕಾರವೇ ನಾನು ಮಾತನಾಡುತ್ತೇನೆ’ ಎಂದು ಮಾಧ್ಯಮಗಳನ್ನು ಗುರಿಯಾಗಿಟ್ಟುಕೊಂಡು ವ್ಯಂಗ್ಯ ಮಾಡಿದ್ದಾರೆ.

Leave a Reply