ಬಳ್ಳಾರಿಯಿಂದ ಶ್ರೀರಾಮುಲು ಆಚೆಗೆ, ರೆಡ್ಡಿ ಸಾಮ್ರಾಜ್ಯ ಗಣಿಪಾತಾಳಕ್ಕೆ!

ಡಿಜಿಟಲ್ ಕನ್ನಡ ಟೀಮ್:

ಬಳ್ಳಾರಿ ಗಣಿ ರೆಡ್ಡಿ ಬಳಗದ ಹಣೆಬರಹ ತೀರಾ ಉಲ್ಟಾ ಆದಂತಿದೆ!

ಗಣಿ ಅಕ್ರಮದ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಅವರನ್ನು ಕೋರ್ಟ್ ಬಳ್ಳಾರಿಗೆ ಕಾಲಿಡದಂತೆ ಮಾಡಿದ್ದರೆ, ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಬಿ. ಶ್ರೀರಾಮುಲು ಸಹೋದರಿ ಶಾಂತಾ ಅವರನ್ನು ಜನ ದಿಲ್ಲಿ ಬದಲು ಗಲ್ಲಿ ಸೇರಿಸಿದ್ದಾರೆ. ಅವರ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಆ ಚುನಾವಣೆ ಉಸ್ತುವಾರಿ ಹೊತ್ತಿದ್ದ ಅಣ್ಣ ರಾಮುಲು ಅವರನ್ನು ಬಿಜೆಪಿಯು ಇದೀಗ ಬಳ್ಳಾರಿಯಿಂದ ಆಚೆಗೆಸೆದಿದೆ.

ಮುಂದಿನ ಲೋಕಸಭೆ ಚುನಾವಣೆಗೆ ಜಿಲ್ಲಾವಾರು ಉಸ್ತುವಾರಿ ಹಂಚಿಕೆ ಮಾಡಿ ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಮುಲು ಅವರಿಗೆ ಬಳ್ಳಾರಿಯಿಂದ ಕೊಕ್ ಕೊಡಲಾಗಿದ್ದು, ಪಕ್ಕದ ಕೊಪ್ಪಳಕ್ಕೆ ಶಿಫ್ಟ್ ಮಾಡಲಾಗಿದೆ. ಇತ್ತೀಚೆಗೆ ನಡೆದ ಮರುಚುನಾವಣೆಯಲ್ಲಿ ಕಾಂಗ್ರೆಸ್ಸಿನ ಉಗ್ರಪ್ಪ ಅವರು ರಾಮುಲು ಸಹೋದರಿ ಶಾಂತಾ ಅವರನ್ನು ಸುಮಾರು ಎರಡೂವರೆ ಲಕ್ಷ ಮತಗಳ ಅಂತರದಿಂದ ಹೀನಾಯವಾಗಿ ಸೋಲಿಸಿದ್ದರು. ತಮ್ಮ ಸಹೋದರಿಯನ್ನೇ ಗೆಲ್ಲಿಸಿಕೊಳ್ಳಲಾಗದ ರಾಮುಲು ಬಳ್ಳಾರಿ ಉಸ್ತುವಾರಿಗೆ ಅಸಮರ್ಥರು ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ಈ ನಿರ್ಣಯ ಕೈಗೊಂಡಿದೆ. ಅವರ ಬದಲು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಬಳ್ಳಾರಿ ಉಸ್ತುವಾರಿ ವಹಿಸಲಾಗಿದೆ.

ಇದರೊಂದಿಗೆ ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಹಾಗೂ ರಾಮುಲು ಬಳಗ ಕಟ್ಟಿದ್ದ ಸಾಮ್ರಾಜ್ಯ ನುಚ್ಚು ನೂರಾದಂತಾಗಿದೆ. ರೆಡ್ಡಿ ಒಳಗೆ ಬರುವಂತಿಲ್ಲ. ರಾಮುಲು ಕಳೆದ ವಿಧಾನಸಭೆ ಚುನಾವಣೆಯಲ್ಲೇ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಬಿಟ್ಟು ಚಿತ್ರದುರ್ಗದ ಮೊಳಕಾಲ್ಮೂರಿಗೆ ಪಲಾಯನ ಮಾಡಿದ್ದರು. ಈಗ ಲೋಕಸಭೆ ಚುನಾವಣೆ ಉಸ್ತುವಾರಿಯಿಂದಲೂ ಗೇಟ್ ಪಾಸ್ ನೀಡಲಾಗಿದೆ. ಅವರ ಸಹೋದರಿ ಶಾಂತಾ ಸೋತಿದ್ದಾರೆ. ಜನಾರ್ಧನರೆಡ್ಡಿ ಸಹೋದರ ಕರುಣಾಕರರೆಡ್ಡಿ ಈ ಬಳಗದಿಂದ ದೂರ ಸರಿದು ಬಹುಕಾಲವಾಗಿದೆ. ಸೋಮಶೇಖರರೆಡ್ಡಿ ತಟಸ್ಥರಾಗಿದ್ದಾರೆ. ಹಿಂದೆಲ್ಲ ಜನಾರ್ಧನರೆಡ್ಡಿ ಅವರ ಹಿಂದಿದ್ದ ನಾಗೇಂದ್ರ, ಆನಂದಸಿಂಗ್ ಪಕ್ಷವನ್ನೇ ಬಿಟ್ಟು ಕಾಂಗ್ರೆಸ್ಸಿನಿಂದ ಶಾಸಕರಾಗಿದ್ದಾರೆ. ಅಲ್ಲಿಗೆ ಬಳ್ಳಾರಿಯಲ್ಲಿ ಜನಾರ್ಧನರೆಡ್ಡಿ ಕೋಟೆ ಕುಸಿದು ಬಿದ್ದಿದೆ.

ಎಲ್ಲಕ್ಕಿಂತ ಮಿಗಿಲಾಗಿ ಬಳ್ಳಾರಿ ಜನರಿಗೂ ರೆಡ್ಡಿ ಬಳಗದ ಬಗ್ಗೆ ಅಸಹ್ಯ ಹಾಗೂ ಅನಾದಾರ ಭಾವ ಗಟ್ಟಿಯಾಗಿದೆ. ರೆಡ್ಡಿ ಬಳಗ ಕಟ್ಟಿದ ಹದಿಮೂರು ವರ್ಷಗಳ ಗಣಿ ಸಾಮ್ರಾಜ್ಯ ಇದೀಗ ಹಾಳಾ ಸುರಿಯುತ್ತಿರುವ ಹಂಪಿಯಂಥಾಗಿದ್ದು, ಈ ಉದ್ಯಮವನ್ನು ನಂಬಿಕೊಂಡಿದ್ದ ಜನರು ಈಗ ಬೀದಿಗೆ ಬಿದ್ದಿದ್ದಾರೆ. ಹರ್ಷದ ಕೂಳಿಗೆ ವರ್ಷದ ಕೂಳು ಕಳೆದುಕೊಂಡರು ಎಂಬಂತೆ ರೆಡ್ಡಿ ಬಳಗ ನಂಬಿಕೊಂಡಿದ್ದವರು ಇದೀಗ ನಿರುದ್ಯೋಗಿಗಳಾಗಿದ್ದು, ಇದ್ದಪದ್ದದ್ದನ್ನೆಲ್ಲ ಮಾರಿಕೊಂಡು ವಲಸೆ ಹೋಗುವ ಸ್ಥಿತಿ ತಲುಪಿದ್ದಾರೆ. ಇದಕ್ಕೆಲ್ಲ ರೆಡ್ಡಿ ಬಳಗವೇ ಕಾರಣ ಎಂದು ಅವರ ಬಗ್ಗೆ ಜನ ರೋಸಿಹೋಗಿದ್ದಾರೆ. ಅದು ಮೇಲಿಂದ ಮೇಲೆ ಚುನಾವಣೆಗಳಲ್ಲಿ ಸಾಬೀತಾಗುತ್ತಿದ್ದು, ರೆಡ್ಡಿ ಬಳಗ ದಿನಗಳೆದಂತೆ ಬಳ್ಳಾರಿ ಗಣಿಧೂಳಲ್ಲಿ ಮಸುಕಾಗುತ್ತಿದ್ದಾರೆ.

Leave a Reply