ಡಿಜಿಟಲ್ ಕನ್ನಡ ಟೀಮ್:
‘ಹುಟ್ಟು ಸಾವು ಬರುತ್ತವೇ ಹೋಗುತ್ತವೆ ಆದರೆ ಇವುಗಳ ಮಧ್ಯ ಬದುಕಿನಲ್ಲಿ ನಾವು ಏನು ಮಾಡುತ್ತೇವೆ ಅದು ಅಜರಾಮರವಾಗಿ ಉಳಿಯುತ್ತದೆ. ಹಾಗಾಗೀ ಕೆಎಲ್ಇ ಸಂಸ್ಥೆಯನ್ನು ಕಟ್ಟಿದ ಏಳು ಜನ ಶಿಕ್ಷಕರು ಇಂದು ಇತಿಹಾಸದ ಪುಟಗಳಲ್ಲಿ ಅಮರವಾಗಿದ್ದಾರೆ’ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಶುಕ್ರವಾರ ಬೆಳಗಾವಿಯ ಜೆಎನ್ಎಂಸಿಯ ಕನ್ವೇನ್ ಷನ್ ಸೆಂಟರ್ನಲ್ಲಿ ಜರುಗಿದ ಕೆಎಲ್ಇ ಸಂಸ್ಥೆಯ 103ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕೆಎಲ್ಇ ಸಂಸ್ಥೆಯು ಇಂದು ಜಾಗತಿಕವಾಗಿ ವಿಸ್ತರಿಸಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಶಿಕ್ಷಣ ಹೆಜ್ಜೆಗಳನ್ನು ಮೂಡಿಸಿದೆ. ಅಂದು ಶಿಕ್ಷಣದ ಕನಸುಗಳನ್ನು ಕಟ್ಟಿಕೊಂಡ ಏಳು ಜನ ಶಿಕ್ಷಕರು ತಮ್ಮ ಬದುಕನ್ನು ಸಮರ್ಪಿಸಿಕೊಂಡು ಅದ್ಭುತವಾದ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು. ಅವರು ಇಟ್ಟುಕೊಂಡ ಗುರಿ ಅಚಲವಾಗಿತ್ತು. ಜನರಿಗೆ ವಿದ್ಯೆಕೊಡುವ ದೊಡ್ಡ ಬುನಾದಿಯನ್ನೇ ಅವರು ಹಾಕಿದರು. ಅವರು ಮಾಡಿದ ತ್ಯಾಗ ಇಂದಿನವರಿಗೆ ಮಾದರಿಯಾಗಿದೆ. ಸಮಾಜವು ಮುನ್ನಡೆಯುವಲ್ಲಿ ಶಿಕ್ಷಣದ ಪಾತ್ರ ಹಿರಿದಾದದು. ಕೆಎಲ್ಇ ಸಂಸ್ಥೆಯು ಶಿಕ್ಷಣ, ಆರೋಗ್ಯ, ಸಂಶೋಧನೆ ಕ್ಷೇತ್ರಗಳಲ್ಲಿ ದಾಖಲೆಯ ಕಾರ್ಯವನ್ನು ನಿರ್ವಹಿಸಿದೆ. ಸರ್ಕಾರ ಮಾಡದೇ ಇರುವ ಕಾರ್ಯವನ್ನು ಕೆಎಲ್ಇ ಸಂಸ್ಥೆಯು ಸಾಧಿಸಿ ತೋರಿಸಿದೆ. ಈ ನಾಡಿನ ಹಲವಾರು ಶಿಕ್ಷಣ ಸಂಸ್ಥೆಗಳು ಶತಮಾನಗಳಿಂದ ಸಲ್ಲಿಸುತ್ತಿರುವ ಸೇವೆಯ ಪ್ರತಿಫಲವಾಗಿ ಇಂದು ನಾಡಿನ ಶಿಕ್ಷಣ ಕ್ಷೇತ್ರವೇ ಬದಲಾಗಿದೆ. ಇಂತಹ ಸಂಸ್ಥೆಗಳಿಗೆ ಯಾವ ಪಕ್ಷದ ಸರ್ಕಾರವಿದ್ದರು ಇಂತಹ ಸಂಸ್ಥೆಗಳಿಗೆ ಸಹಕಾರ ನೀಡಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯುವರು ಸಪ್ತರ್ಷಿಗಳು ಸಾಗಿದ ದಾರಿಯಲ್ಲಿ ಕೆಎಲ್ಇ ಸಂಸ್ಥೆಯನ್ನು ವಿಸ್ತಾರೋನ್ನತವಾಗಿ ಬೆಳೆಸಿದ್ದಾರೆ. ಅವರು ಹಾಗೂ ಆಡಳಿತ ಮಂಡಳಿಯವರ ಕೊಡುಗೆ ಅಪಾರ. ಡಾ.ಕೋರೆಯವರು ಕೆಎಲ್ಇ ಸಂಸ್ಥೆಯನ್ನು ಬೆಳೆಸಿಲ್ಲ, ಅದರೊಂದಿಗೆ ಬೆಳಗಾವಿ ಅಭಿವೃದ್ಧಿಗೆ ಮೌಲಿಕ ಕಾರ್ಯವನ್ನು ಮಾಡಿದ್ದಾರೆ. ಬೆಳಗಾವಿಗೆ ಎರಡನೇ ರಾಜ್ಯಧಾನಿ ಪಟ್ಟ, ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಸುವರ್ಣ ವಿಧಾನ ಸೌಧ ಬರುವಲ್ಲಿ ಕೋರೆಯವರು ಅಹರ್ನಿಶಿ ಶ್ರಮಿಸಿದ್ದಾರೆ. ಹೀಗೆ ಬೆಳಗಾವಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಒಂದು ಸ್ಥಾನವನ್ನು ತಂದುಕೊಡುವಲ್ಲಿ ವಿಶೇಷ ಕಾಳಜಿವಹಿಸಿದ್ದಾರೆ. ಡಾ.ಕೋರೆಯವರಿಂದ ಕೆಎಲ್ಇ ಸಂಸ್ಥೆಯು ಇನ್ನಷ್ಟು ವಿಸ್ತಾರೋನ್ನತವಾಗಿ ಮುನ್ನಡೆಯಲಿ’ ಎಂದು ಶುಭಹಾರೈಸಿದರು.
ಇನ್ನು ಕೆಎಲ್ಇ ಹೈಯರ ಎಜುಕೇಶನ್ ಆ್ಯಂಡ ರಿಸರ್ಚ ಕೇಂದ್ರದ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ ಸೈನ್ಸ್ ಹಾಗೂ ಓವರಸೀಸ್ ನರ್ಸಿಂಗ ಆಫ್ ಇಂಡಿಯಾ ಇವುಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಟ್ಟದ ‘ಇಸ್ ಅವರ ನರ್ಸಿಂಗ ಪ್ರ್ಯಾಕ್ಟಿಸ್ ಎವಿಡೆನ್ಸ ಬೇಸ್ಡ? ಎ ರಿವಿವ್ ಆಫ್ ಎಸಿನ್ಸಿಯಲ್ ಸ್ಕಿಲ್ಲ್ಸ್ ಇನ್ ಹೆಲ್ತಕೇರ್ ಆ್ಯಂಡ ನರ್ಸಿಂಗ್’ ಎಂಬ ಸಮ್ಮೇಳನದಲ್ಲಿ ಮಾತನಾಡಿದ ಸಚಿವರು, ನರ್ಸ್ ಗಳ ಪರಿಶ್ರಮ ಶ್ಲಾಘಿಸಿದರು. ಜತೆಗೆ ರಾಜ್ಯದಲ್ಲೂ ಹೊಸದಾಗಿ ನರ್ಸಿಂಗ್ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ತರುವ ಬಗ್ಗೆ ವಿಚಾರ ಮಾಡುತ್ತಿರುವುದಾಗಿ ತಿಳಿಸಿದರು.