ಅಂಬರ ಸೇರಿದ ನಾಟಿ ನಟ ಅಂಬರೀಶ್!

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರರಂಗದ ನಾಟಿ ನಟ ಅಂಬರೀಶ್ ಇನ್ನಿಲ್ಲ.

ಹೃದಯ ಶ್ರೀಮಂತಿಕೆಯಲ್ಲಿ ಆಗಸದ ವಿಸ್ತಾರ, ಸಾಗರದ ಆಳವನ್ನು ಮೀರಿಸಿದ್ದ, ಕೊಡುಗೈ ದಾನದಲ್ಲಿ ದಾನಶೂರ ಕರ್ಣನನ್ನೂ ಪಕ್ಕಕ್ಕೆ ಸರಿಸಿದ್ದ, ತಮ್ಮಲ್ಲಿದ್ದ ನಕಾರಾತ್ಮಕ ಅಂಶಗಳನ್ನು ಸಕಾರಾತ್ಮಕ ನಡೆಯಿಂದ ಮಸುಕಾಗಿಸಿದ್ದ, ಬೈಗುಳವನ್ನೇ ಅಭಿಮಾನಿಗಳ ಜೋಗುಳವನ್ನಾಗಿಸಿದ್ದ ಮಳವಳ್ಳಿ ಹುಚ್ಚೇಗೌಡ ಅಮರನಾಥ್ (66) ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಶನಿವಾರ ರಾತ್ರಿ ದೀಢೀರನೇ ಆರೋಗ್ಯ ಕೈಕೊಟ್ಟು, ತೀವ್ರ ಉಸಿರಾಟದ ತೊಂದರೆಗೆ ಒಳಗಾದ ಅಂಬರೀಶ್ ಅವರನ್ನು ತಕ್ಷಣವೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ದು, ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಲಾಯ್ತು. ಆದರೆ ಶ್ವಾಸಕೋಶ ಸೋಂಕು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ತೀವ್ರ ಹೃದಯಾಘಾತದಿಂದ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು.

ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಲ ಸಂಪನ್ನೂಲ ಸಚಿವ ಡಿ.ಕೆ. ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಜೆ. ಜಾರ್ಜ್, ಮಂಡ್ಯ ಸಂಸದ ಶಿವರಾಮೇಗೌಡ, ಶಾಸಕರಾದ ಮುನಿರತ್ನ, ಹ್ಯಾರೀಸ್, ಬೆಂಗಳೂರು ಪೊಲೀಸ್ ಕಮೀಷನರ್ ಸುನೀಲ್ ಕುಮಾರ್, ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಯಶ್, ಪ್ರಜ್ವಲ್ ದೇವರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ವಿಕ್ರಂ ಆಸ್ಪತ್ರೆಗೆ ದೌಡಾಯಿಸಿದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಕಂಬನಿಯುಕ್ತ ಅಂಬರೀಶ್ ಅಭಿಮಾನಿಗಳು ಆಸ್ಪತ್ರೆಯತ್ತ ಸಾಗರೋಪಾದಿಯಲ್ಲಿ ಹರಿದುಬಂದಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ನಾಗರಹಾವು ಸಿನಿಮಾ ಮೂಲಕ ಚಿತ್ರರಂಗಕ್ಕೆ ನಟನಾಗಿ ಪದಾರ್ಪಣೆ ಮಾಡಿದ್ದ ಅಂಬರೀಶ್ 208 ಚಿತ್ರಗಳಲ್ಲಿ ನಟಿಸಿದ್ದಾರೆ. ಶುಭಮಂಗಳ, ಪಡುವಾರಹಳ್ಳಿ ಪಾಂಡವರು, ನಾಗರಹೊಳೆ, ಅಂತ, ಅಮರನಾಥ್,  ಏಳು ಸುತ್ತಿನ ಕೋಟೆ, ಒಲವಿನ ಉಡುಗೊರೆ, ಮಂಡ್ಯದ ಗಂಡುವಿನಿಂದ ಹಿಡಿದು ತೀರಾ ಇತ್ತೀಚಿನ ಅಂಬಿ ನಿನಗೆ ವಯಸ್ಸಾಯ್ತುವರೆಗೆ ನಾನಾ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದ ಅಂಬರೀಶ್ ರಾಜಕೀಯ ರಂಗದಲ್ಲಿಯೂ ಕೈಯಾಡಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಅಂಬರೀಶ್ ಅಧಿಕಾರಕ್ಕೆ ಎಂದಿಗೂ ಅಂಟಿ ಕೂತವರಲ್ಲ. ಯಾವುದೇ ರಾಜೀ ಮಾಡಿಕೊಂಡವರಲ್ಲ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಎರಡು ವರ್ಷಗಳ ಕಾಲ ಅಂಗೀಕರಿಸದೇ ಇದ್ದದ್ದು ಅವರಿಗಿದ್ದ ಜನಪ್ರಿಯತೆ, ಪ್ರಾಬಲ್ಯಕ್ಕೆ ಸಾಕ್ಷಿ. ರಾಜಕೀಯ ರಂಗದಲ್ಲಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದೇ ಆಗಿದ್ದಲ್ಲಿ ಅವರು ಮುಖ್ಯಮಂತ್ರಿಯೂ ಆಗಬಹುದಿತ್ತು. ಆದರೆ ತಟಸ್ಥ ಮತ್ತು ಲಘು ಮನೋಭಾವ ಈ ಅವಕಾಶವನ್ನು ದೂರೀಕರಿಸಿತ್ತು.

ಬೆಂಗಳೂರಲ್ಲೇ ಅಂತ್ಯಕ್ರಿಯೆ: ಈ ಮಧ್ಯೆ, ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಮೂರು ದಿನ ಸರಕಾರಿ ಶೋಕಾಚರಣೆ ಘೋಷಿಸಿರುವ ಸಿಎಂ ಕುಮಾರಸ್ವಾಮಿ ಅವರು, ಭಾನುವಾರ ಬೆಳಗ್ಗೆ 7.30 ಕ್ಕೆ ಬೆಂಗಳೂರು ಹೃದಯಭಾಗದ ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್ ಪಾರ್ಥೀವ ಶರೀರರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಹುಟ್ಟೂರು ಮಂಡ್ಯಕ್ಕೆ ಕೊಂಡೊಯ್ಯೂವುದು ಸಾಧುವಲ್ಲಿ. ಹೀಗಾಗಿ ಹುಟ್ಟೂರು ಮತ್ತು ಬೆಳೆದೂರಿನ ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಅನುವಾಗುವಂತೆ ಮಂಡ್ಯ ಮತ್ತು ಮೈಸೂರಿನಿಂದ ಬೆಂಗಳೂರಿಗೆ ಹೆಚ್ಚುವರಿ ಸಾರಿಗೆ ಬಸ್ ಸಂಚಾರ ವ್ಯವಸ್ಥೆ ಮಾಡಲಾಗುವುದು. ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಒತ್ತಾಸೆ ಮೇರೆಗೆ ಬೆಂಗಳೂರಿನಲ್ಲೇ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು. ಕನ್ನಡ ಚಿತ್ರರಂಗ ಮತ್ತು ರಾಜಕೀಯ ರಂಗದಲ್ಲಿ ಉದಾತ್ತ ಸೇವೆ ಸಲ್ಲಿಸಿರುವ ಅಂಬರೀಶ್ ಅವರ ಸ್ಮಾರಕವನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಅಂಬರೀಶ್ ಅಭಿಮಾನಿಗಳ ನೋವು, ದುಃಖ ತಮಗೆ ಅರ್ಥವಾಗುತ್ತದೆ. ಆದರೆ ಅಭಿಮಾನಿಗಳು ಯಾವುದೇ ಉದ್ವೇಗಕ್ಕೆ ಒಳಗಾಗದೆ ಶಾಂತರೀತಿಯಲ್ಲಿ ವರ್ತಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

Leave a Reply