ಗುರು ಶಿಷ್ಯರ ಸಮಾಗಮ.. ಕಮಲಕ್ಕೆ ಆತಂಕ?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ರಾಜಕಾರಣದಲ್ಲಿ ಚಾಣಕ್ಯ ಎಂದರೆ ತಪ್ಪೇನಿಲ್ಲ. ದೇವೇಗೌಡರ ನೇತೃತ್ವದ ಜೆಡಿಎಸ್‌ನಲ್ಲಿ ಬೆಳೆದು ಬಂದ ನಾಯಕರು ಇಂದೂ ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಉನ್ನತ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಅದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಮುಖವಾಗಿ ಕಾಣಿಸುತ್ತಾರೆ. 2004ರಲ್ಲಿ‌ ಮುಖ್ಯಮಂತ್ರಿ ಆಗಬಹುದಾದ ಸಂಧರ್ಭದಲ್ಲಿ ದೇವೇಗೌಡರೇ ತಪ್ಪಿಸಿದರು ಎನ್ನುವುದು ಸಿದ್ದರಾಮಯ್ಯ ಅವರ ಆರೋಪವಾಗಿತ್ತು. ಅದೇ ಕಾರಣಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ರು. ಮುಖ್ಯಮಂತ್ರಿಯೂ ಆದರು. ಆದರೀಗ ಕಾಲ ಬದಲಾಗಿದೆ. ಸಿದ್ದರಾಮಯ್ಯ ಎಲ್ಲವನ್ನೂ ಮರೆತು ಅದೇ ರಾಜಕೀಯ ಗುರುವಿನ ಜೊತೆಗೆ ಕೈ ಜೋಡಿಸಿ ಯಶಸ್ಸಿನ ಹಾದಿ ಹಿಡಿದಿದ್ದಾರೆ.

ಮೊದಲಿಗೆ ಒಲ್ಲದ ಮನಸ್ಸಿನಲ್ಲೇ ಜೆಡಿಎಸ್‌ಗೆ ಬೆಂಬಲಿಸಿದ ಸಿದ್ದರಾಮಯ್ಯ, ಇದೀಗ ಎಲ್ಲವನ್ನು ಮರೆತಿದ್ದಾರೆ. ಅದಕ್ಕೆ ಅವರು ಕೊಡುತ್ತಿರುವ ಕಾರಣ ಅಂದ್ರೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು. ಮೊದಲಿಗೆ ಸರ್ಕಾರಕ್ಕೆ ಎದುರಾಗಿದ್ದ ಆಪರೇಷನ್ ಕಮಲ ಭೀತಿಯನ್ನು ಹೋಗಲಾಡಿಸಿದ್ರು.‌ ನಂತರದ ಮಾಜಿ ಪ್ರಧಾನಿ ದೇವೇಗೌಡರ ಪಕ್ಕದಲ್ಲೇ ಕುಳಿತು ಮಾಧ್ಯಮಗೋಷ್ಠಿ ನಡೆಸಿದ್ರು. ಆ ಬಳಿಕ ಶಿವಮೊಗ್ಗ ಅಭ್ಯರ್ಥಿ ಆಯ್ಕೆಯಲ್ಲಿ ಇವರಿಬ್ಬರೇ ನಿರ್ಧಾರ ಮಾಡಿದ್ರು. ಬಳ್ಳಾರಿ ಲೋಕಸಭಾ ಉಪಸಮರದಲ್ಲಿ ದೇವೇಗೌಡರ ಜೊತೆ ಪ್ರಚಾರ ನಡೆಸಿದ್ರು. ಒಂದೇ ವೇದಿಕೆಯಲ್ಲಿ ಜ್ಯೋತಿ‌ ಬೆಳಗಿಸಿದ್ರು. ಮೈಸೂರು ಮೇಯರ್ ಚುನಾವಣೆ ವಿಚಾರದಲ್ಲಿ ಸ್ವತಃ ಸಿದ್ದರಾಮಯ್ಯ ಅಭ್ಯರ್ಥಿಯನ್ನು ಮೇಯರ್ ಮಾಡಲು ದೇವೇಗೌಡರೇ ಸೂಚಿಸಿದ್ರು. ಇತ್ತೀಚಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಒಂದೇ ವಿಮಾನದಲ್ಲಿ‌ ಪ್ರಯಾಣ ಮಾಡಿದ್ರು. ಕುಮಾರಸ್ವಾಮಿ ರೈತ ಮಹಿಳೆ ಬಗ್ಗೆ ಮಾತನಾಡಿದ ಮರು ದಿನವೇ ಸಿಎಂ ಗೃಹ ಕಚೇರಿ‌ ಕೃಷ್ಣಾದಲ್ಲಿ ಮುಖಾಮುಖಿಯಾಗಿ ಚರ್ಚೆ ನಡೆಸಿದ್ರು. ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರಿಗೆ ಧನ್ಯವಾದ ಕಾರ್ಯಕ್ರಮದಲ್ಲಿ ಅಕ್ಕಪಕ್ಕದಲ್ಲೇ ಕುಳಿತು‌ ಉಗ್ರಪ್ಪನ ಗೆಲುವಿಗೆ ಧನ್ಯವಾದ ಹೇಳಿದ್ರು. ಒಟ್ಟಾರೆ ಗುರು ಶಿಷ್ಯನ ಸಮಾಗಮ ಗೆಲುವಿನ ಪಥದಲ್ಲಿ ಸಾಗುತ್ತಿದ್ದು, ಕಮಲಕ್ಕೆ ಆತಂಕ ಶುರು ಮಾಡಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ‌ 20 ಸ್ಥಾನಗಳಿಗಿಂತ ಹೆಚ್ಚು ಸ್ಥಾನ ಗೆಲ್ಲಬೇಕು ಅನ್ನೋದು ಬಿಜೆಪಿ ಇಂಗಿತ ಹಾಗೂ ಕಮಲ ಪಾಳಯದ ಯೋಜನೆ. ಆದರೆ ಇದೀಗ ಕರ್ನಾಟಕದಲ್ಲಿ‌ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಚದುರಂಗದ ಆಟದಲ್ಲಿ ಒಟ್ಟಾಗಿದ್ದು, ಯಾವುದೇ ಕಾಯನ್ನು ಮುನ್ನಡೆಸಿ ಯಶಸ್ಸು ಪಡೆಯಬಲ್ಲ ಜೋಡಿಯಾಗಿದ್ದಾರೆ. ಎದುರಾಳಿ ಒಂದು ಕಾಯನ್ನು ಮುಂದಕ್ಕೆ ನಡೆಸಿದ್ರೆ ಏಕಕಾಲದಲ್ಲಿ ದಾಳಿ ಮಾಡಿ ಮುಗಿಸುವ ಚಾಕಚಕ್ಯತೆ ಈ ಇಬ್ಬರು ನಾಯಕರಲ್ಲಿದೆ. ಯಾವುದೇ ವ್ಯಕ್ತಿ ಇವರಿಬ್ಬರ ಎದುರು ಬಂಡಾಯ ಪ್ರದರ್ಶನ ಮಾಡಿದ್ರೆ ಮನವೊಲಿಸುವ ತಾಕತ್ತು ಈ ಇಬ್ಬರಲ್ಲಿದೆ. ಅದೇ ರೀತಿ ಎದುರಾಳಿ ಪಕ್ಷ ಯಾವುದೇ ತಂತ್ರಗಾರಿಕೆ ಮಾಡಿದರೂ ಕಟ್ಟಿಹಾಕುವಂತ ತಂತ್ರಗಾರಿಕೆಯನ್ನು ದೇವೇಗೌಡರು ಹಾಗೂ ಸಿದ್ದರಾಮಯ್ಯ ಮಾಡಬಲ್ಲರು. ಇದೇ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಏನು ಮಾಡೋದು ಎಂದು ಕಮಲ ನಾಯಕರು ಕಂಗಾಲಾಗಿದ್ದು, ಗುರು ಶಿಷ್ಯರ ಸಮಾಗಮ ಬಿಜೆಪಿಯನ್ನು ಆತಂಕಕ್ಕೆ ದೂಡಿದೆ.

Leave a Reply