ಮತ್ತೆ ವಿಶ್ವ ಚಾಂಪಿಯನ್‌ ಆಗಿ ಇತಿಹಾಸ ಬರೆದ ಮೇರಿ ಕೋಮ್!

ಡಿಜಿಟಲ್ ಕನ್ನಡ ಟೀಮ್:

ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಗಳ ಒಕ್ಕೂಟದ ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌‌ನಲ್ಲಿ ಭಾರತದ ಬಾಕ್ಸಿಂಗ್ ತಾರೆ ಮೇರಿಕೋಮ್‌ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಈ ಚಿನ್ನದೊಂದಿಗೆ ಆರನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಮೊದಲ ಮಹಿಳಾ ಬಾಕ್ಸರ್ ಆಗಿದ್ದಾರೆ.

ಐಬಾ ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನ 48ಕೆಜಿ ಲೈಟ್‌ ಫ್ಲೈವೇಟ್‌ ವಿಭಾಗದಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕೋಮ್ ತಮ್ಮ ಪ್ರತಿಸ್ಪರ್ಧಿ ಉಕ್ರೇನ್‌ನ ಎಚ್. ಓಕೋಟೊ ವಿರುದ್ಧ 5-0 ಅಂತರದ ಅರ್ಹ ಗೆಲುವು ತಮ್ಮದಾಗಿಸಿಕೊಂಡರು.

ಮಂಗಳವಾರ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ತಮ್ಮ 6ನೇ ಪದಕ ಖಾತ್ರಿಪಡಿಸಿದ್ದ ಮೇರಿ ಕೋಮ್‌, ಮಹಿಳಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತ್ಯಧಿಕ ಪದಕ ಗೆದ್ದ ದಾಖಲೆ ಸೃಷ್ಟಿಸಿದ್ದರು. ಚಾಂಪಿಯನ್‌ಷಿಪ್‌ ಆರಂಭಕ್ಕೂ ಮುನ್ನ ಐದು ಸ್ವರ್ಣ ಮತ್ತು ಒಂದು ಬೆಳ್ಳಿ ಪದಕ ಜಯಿಸಿದ್ದ ಭಾರತೀಯ ಬಾಕ್ಸರ್‌, ಐರ್ಲೆಂಡ್‌ನ ದಿಗ್ಗಜೆ ಕೇಟಿ ಟೇಲರ್‌(ಐದು ಚಿನ್ನ, ಒಂದು ಕಂಚು) ಅವರೊಂದಿಗೆ ಜಂಟಿ ಸ್ಥಾನ ಗಳಿಸಿದ್ದರು. 2010ರಲ್ಲಿ ಐದನೇ ಸ್ವರ್ಣ ಗೆದ್ದಿದ್ದ ಮೇರಿ ಕೋಮ್‌ 8 ವರ್ಷಗಳ ನಂತರ ಮತ್ತೆ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

Leave a Reply