ನನ್ನನ್ನು ಎದುರಿಸಲು ಕಾಂಗ್ರೆಸ್ ಗೆ ಶಕ್ತಿ ಇಲ್ಲ ಅದಕ್ಕೆ ತಾಯಿಯನ್ನು ನಿಂದಿಸುತ್ತಾರೆ: ಮೋದಿ

ಡಿಜಿಟಲ್ ಕನ್ನಡ ಟೀಮ್:

‘ಕಾಂಗ್ರೆಸ್ ಗೆ ನನ್ನನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಅದಕ್ಕೆ ನನ್ನ ತಾಯಿಯನ್ನು ಮಧ್ಯೆ ತಂದು ನಿಂದಿಸುತ್ತಿದ್ದಾರೆ…’ ಇದು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಪರಿ.

‘ದೇಶದಲ್ಲಿ ಪೆಟ್ರೋಲ್ ದರ ಮೋದಿ ಅವರ ವಯಸ್ಸಿನಷ್ಟಾಗಿದೆ’ ಎಂದು ಕಾಂಗ್ರೆಸ್ ಸಂಸದ ರಾಜ್ ಬಬ್ಬರ್ ಅವರು ಮಧ್ಯ ಪ್ರದೇಶದ ಇಂಧೋರ್‌ನಲ್ಲಿ ನಡೆದ ಚುನಾವಣಾ ಸಮಾವೇಶದ ವೇಳೆ ಟೀಕಿಸಿದ್ದರು.

ಇದಕ್ಕೆ ಪ್ರತಿಯಾಗಿ ಶನಿವಾರ ಮಧ್ಯಪ್ರದೇಶದ ಛತರ್‌ಪುರದಲ್ಲಿ ನರೇಂದ್ರ ಮೋದಿ ಹೇಳಿದ್ದಿಷ್ಟು…
‘ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಎದುರಿಸುವ ಸಾಮರ್ಥ್ಯವಿಲ್ಲ. ಅದಕ್ಕೆ ನನ್ನ ತಾಯಿಯನ್ನು ನಿಂದಿಸುತ್ತಿದ್ದಾರೆ. 18 ವರ್ಷಗಳಿಂದ ನಾನು ಕಾಂಗ್ರೆಸ್ ಅನ್ನು ಸೋಲಿಸುತ್ತಲೇ ಬಂದಿದ್ದೇನೆ. ಅದಕ್ಕೆ ಅವರು ಕೀಳುಮಟ್ಟಕ್ಕೆ ಇಳಿದಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದರೆ ಚುನಾವಣಾ ರಾಜಕೀಯದಲ್ಲಿ ನನ್ನ ತಾಯಿಯನ್ನು ತರುತ್ತಿದ್ದಾರೆ. ನನ್ನ ತಾಯಿಯನ್ನು ನಿಂದಿಸಿ ಕಾಂಗ್ರೆಸ್ ನಾಯಕರು ತಮ್ಮ ಠೇವಣಿಯನ್ನು ಉಳಿಕೊಳ್ಳಬಹುದು ಎಂದು ಭಾವಿಸಿದ್ದರೆ, ಮಧ್ಯಪ್ರದೇಶದ ಮತದಾರರು ತಮಗೆ ತಕ್ಕ ಪಾಠ ಕಲಿಸಲಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಮಾಮಾ ಕರೆಯಲು ಮುಂದಾಗಿರುವ ಕಾಂಗ್ರೆಸ್ ನಾಯಕರು ತಮ್ಮ ಸ್ವಂತ ಕ್ವಟ್ರೋಚಿ ಮಾಮಾರನ್ನು ಮರೆತಿದ್ದಾರೆ? ಅವರ (ರಾಹುಲ್ ಗಾಂಧಿ) ತಂದೆ ಬೋಫೋರ್ಸ್ ಹಗರಣದಲ್ಲಿ ಭಾರತದ ರಕ್ಷಣೆಗಾಗಿ ಇಡಲಾಗಿದ್ದ ಹಣವನ್ನು ದೋಚಲು ಕ್ವಟ್ರೋಚಿ ಮಾಮಾನಿಗೆ ಅನುಮತಿ ನೀಡಿದ್ದರು.

ನಮ್ಮ ಸರಕಾರಕ್ಕೆ ದೇಶದ 125 ಕೋಟಿ ಜನರೇ ಹೈಕಮಾಂಡ್. ನಮ್ಮ ಸರಕಾರ ಯಾವುದೋ ಮೇಡಂ ಅವರ ರಿಮೋಟ್ ನಿಯಂತ್ರಿತ ಸರಕಾರ ಅಲ್ಲ.’

Leave a Reply