ಆತ್ಮೀಯ ಅಂಬಿ ಸಾವಿಗೆ ಗಣ್ಯರ ಸಂತಾಪ

ಡಿಜಿಟಲ್ ಕನ್ನಡ ಟೀಮ್:

ಸಿಎಂ ಸಂತಾಪ:

ಅಂಬರೀಷ್ ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವವುಳ್ಳವರಾಗಿದ್ದರು. ಹಾಗಾಗಿಯೇ ಅವರು ಪ್ರತಿಯೊಬ್ಬರ ಗೌರವಕ್ಕೆ ಪಾತ್ರರಾಗಿದ್ದರು. ಅಂಬರೀಷ್ ಅವರ ಅಕಾಲಿಕ ಮರಣ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೂ ಹಾಗೂ ಅಪಾರ ಅಭಿಮಾನಿಗಳಿಗೂ ನೀಡಲಿ. ಕನ್ನಡ ಚಿತ್ರರಂಗ ಕಂಡ ಮಹತ್ವದ ಕಲಾವಿದ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಇನ್ನಿಲ್ಲ ಎನ್ನುವುದು ಅಪಾರ ದುಃಖವನ್ನುಂಟುಮಾಡಿದೆ. ನನ್ನ ಮತ್ತು ಅವರ ಸ್ನೇಹ ಅನುಗಾಲದ್ದು. ಚಿತ್ರರಂಗ ಹಾಗೂ ರಾಜಕಾರಣವನ್ನು ಮೀರಿದ ಸ್ನೇಹ ನಮ್ಮದಾಗಿತ್ತು ಎಂದು ಅವರು ಹೇಳಿದ್ದಾರೆ.

ಡಿಕೆಶಿ ಕಂಬನಿ:

ಕನ್ನಡ ಚಿತ್ರರಂಗದ ವಜ್ರವಾಗಿದ್ದ ಅಂಬರೀಶ್ ವೈಯಕ್ತಿಕವಾಗಿಯೂ ತಮಗೆ ಆತ್ಮೀಯರಾಗಿದ್ದರು. ಅಣ್ಣನ ಸಮಾನರಾಗಿದ್ದರು. ತಮ್ಮದೇ ಆದ ವಿಭಿನ್ನ, ವಿಶಿಷ್ಟ ನಡೆ-ನುಡಿಯಿಂದ ಆಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು ಇದೀಗ ನಮ್ಮೊಡನೆ ಇಲ್ಲ ಎಂಬ ಸಂಗತಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಗಲಿಕೆ ನೋವು ತಮ್ಮನ್ನೂ ಇನ್ನಿಲ್ಲದಂತೆ ಕಾಡುತ್ತಿದೆ. ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಈ ಘೋರ ನೋವಿನ ಸಂದರ್ಭವನ್ನು ಅಭಿಮಾನಿಗಳು ಮತ್ತು ಸಾರ್ವಜನಿಕರು ಸಮಾಧಾನಚಿತ್ತದಿಂದ ಎದುರಿಸಬೇಕು.

ಮಾಜಿ ಪ್ರಧಾನಿ ದೇವೇಗೌಡ:

ಅಂಬರೀಷ್ ಅವರ ಅಗಲಿಕೆ ತೀವ್ರ ಆಘಾತವನ್ನುಂಟು ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಇದು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ, ಅವರ ಬೆಂಬಲಿಗರಿಗೆ ಹಾಗು ನಾಡಿನ ಸಮಸ್ತ ಜನತೆಗೆ ಈ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.

ಮಾಜಿ ಸಿಎಂ ಸಿದ್ದರಾಮಯ್ಯ:

ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅವರ ಸಾವಿನಿಂದ ಅವರ ಅಪಾರ ಅಭಿಮಾನಿಗಳಿಗಾಗಿರುವ ಆಘಾತ, ದು:ಖ, ನೋವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.‌ ಈ ಸಂದರ್ಭದಲ್ಲಿ ಎಲ್ಲರೂ ಶಾಂತಿ‌ ಮತ್ತು ಸಂಯಮವನ್ನು ಕಾಪಾಡಿಕೊಂಡು ಮೃತ ನಾಯಕನಿಗೆ ಅಂತಿಮ ಗೌರವ ಸಲ್ಲಿಸಬೇಕೆಂದು ನಾನು‌ ಮನವಿಮಾಡಿಕೊಳ್ಳುತ್ತೇನೆ.

ಬೃಹತ್ ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್:

ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ, ನನ್ನ ಗೆಳೆಯ ಡಾ.ಅಂಬರೀಶ್ ಅವರ ನಿಧನದ ಸುದ್ಧಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ. ಇವರ ಅಗಲಿಕೆಯಿಂದ ಕರ್ನಾಟಕವು ಸರಳ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ, ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ: ಹಿರಿಯ ನಟ,ರಾಜಕಾರಣಿ ಅಂಬರೀಶ್ ಅವರನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ. ಒಬ್ಬ ಒಳ್ಳೆಯ ಸ್ನೇಹಿತರಾಗಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವನ್ನುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ.

ದರ್ಶನ್:

ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.

ನಟ, ಶಾಸಕ ಎಂ.ಬಿ. ಪಾಟೀಲ್:

ಅಂಬರೀಶ್ ಅವರ ಸಾವಿನ ಸುದ್ದಿ ತೀವ್ರ ನೋವು ಹಾಗೂ ಆಘಾತಕಾರಿ. ನಂಬಲಸಾಧ್ಯ ಸಂಗತಿ. ನನ್ನ ಆತ್ಮೀಯ ಸ್ನೇಹಿತ, ನಿಷ್ಕಲ್ಮಶ ಮನಸ್ಸಿನ ವ್ಯಕ್ತಿ,ಅವರ ಅಗಲಿಕೆ ನಿಜಕ್ಕೂ ದೊಡ್ದ ದುರಂತ.

ಮಾಜಿ ಸಚಿವ ಸುರೇಶ್ ಕುಮಾರ್:

ಪುಟ್ಟಣ್ಣ ಕಣಗಾಲ್ ನಮಗೆಲ್ಲಾ ಪರಿಚಯಿಸಿದ್ದ “ಜಲೀಲ” ಇನ್ನಿಲ್ಲ.‌ ಅಂಬರೀಶ್ (ಅಮರನಾಥ್) ರವರ ಆತ್ಮಕ್ಕೆ ಶಾಂತಿ ದೊರಕಲಿ.‌

ನಟ ಜಗ್ಗೇಶ್:

ತುಂಬ ದುಃಖವಾಯಿತು.. ಕಳೆದ ಗುರುವಾರ ಕರೆ ಮಾಡಿದ್ದೆ.. ದೂರವಾಣಿ ಕನೆಕ್ಟ್ ಆಗಲಿಲ್ಲ.. ಅಂಬಿ ಸಾರ್ ದೇವರ ಬಳಿಯೇ ಹೋಗಿಬಿಟ್ಟರು.. ರಾಯರಲ್ಲಿ ಲೀನವಾದರು. ಓಂಶಾಂತಿ.

Leave a Reply