ಅಂಬಿ ಅಂತಿಮ ಯಾತ್ರೆಗೆ ಹೇಗಿದೆ ತಯಾರಿ?

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರರಂಗ ಕಂಡ ಗಂಡೆದೆಯ ನಾಯಕ ರೆಬೆಲ್ ಸ್ಟಾರ್ ಅಂಬರೀಶ್ ಈಗಾಗಲೇ ನಮ್ಮನ್ನು ಅಗಲಿದ್ದು, ಇಂದು ನಮ್ಮನ್ನು ಬಿಟ್ಟು ಅಂತಿಮ ಯಾತ್ರೆ ನಡೆಸಲಿದ್ದಾರೆ. ಈಗಾಗಲೇ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಹಾಗೂ ಹುಟ್ಟೂರು ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಲಕ್ಷ ಲಕ್ಷ ಅಭಿಮಾನಿಗಳು‌ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕಂಬನಿಯ ವಿದಾಯ ಹೇಳಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರಕ್ಕೆ ಎಲ್ಲಾ ತಯಾರಿಯೂ ನಡೀತಿದೆ. ಡಾ ರಾಜ್​ ಸ್ಮಾರಕ ಇರುವ ಕಂಠೀರವ ಸ್ಟೂಡಿಯೋದಲ್ಲಿ ಪೂರ್ಣ ತಯಾರಿ ನಡೆದಿದೆ..

ಮಂಡ್ಯದಿಂದ ಬೆಳಗ್ಗೆ 9 ಗಂಟೆಗೆ ಪಾರ್ಥಿವ ಶರೀರ ಹೊತ್ತ ಸೇನಾ ಹೆಲಿಕಾಪ್ಟರ್ ಹೆಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಮದ ಕಂಠೀರವ ಸ್ಟೇಡಿಯಂಗೆ ಅಲ್ಲಿಂದ ಕಂಠೀರವ ಸ್ಟುಡಿಯೋಗೆ ಸಾಗಲಿದೆ.. ಅಂಬರೀಶ್ ಪಾರ್ಥಿವ ಶರೀರದ ಮೆರವಣಿಗೆ ಮೂಲಕ ಸಾಗುವ ಹಿನ್ನೆಲೆಯಲ್ಲಿ ಪೊಲೀಸರು ಮೂರು ರಸ್ತೆಗಳ ಸಂಚಾರ ಮಾರ್ಪಾಡು ಮಾಡಿದ್ದಾರೆ.. ಟ್ರಾಫಿಕ್ ಜಾಮ್ ಹಾಗೂ ಗಣ್ಯ ವ್ಯಕ್ತಿಗಳ ಸಂಚರಿಸಲಿರುವ ಪ್ರಯುಕ್ತ ಮಾರ್ಗ ಬದಲಾವಣೆ ಮಾಡಿದ್ದಾರೆ.

ಬೆಂಗಳೂರಿನ ಔಟರ್ ರಿಂಗ್ ರೋಡ್​ನ ಸುಮನಹಳ್ಳಿ‌ ಜಂಕ್ಷನ್​ನಿಂದ ಗೊರಗುಂಟೆಪಾಳ್ಯಕ್ಕೆ ಬರುವ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸುಮನಹಳ್ಳಿಯಿಂದ ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ವೆಸ್ಟ್​ ಆಫ್​ ಕಾರ್ಡ್ ರೋಡ್​ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.. ಇನ್ನು ಗೊರಗುಂಟೆಪಾಳ್ಯದಿಂದ ಎಂಇಎ ಜಂಕ್ಷನ್, ಆರ್​ಎಂಸಿ ಯಾರ್ಡ್, ಸೋಪ್ ಫ್ಯಾಕ್ಟರಿ ಮೂಲಕ ಸುಮನಹಳ್ಳಿ ರಸ್ತೆಗೆ ವ್ಯವಸ್ಥೆ ಮಾಡಲಾಗಿದೆ..

ಇನ್ನು ಮಲ್ಲೇಶ್ವರಂನ ಸ್ಯಾಂಕಿ ರಸ್ತೆ, ಮಾರಮ್ಮ ಸರ್ಕಲ್ ಮೂಲಕ ಯಶವಂತಪುರಕ್ಕೆ ತೆರಳುವ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, ಮೇಕ್ರಿ ಸರ್ಕಲ್, ಸಿವಿ ರಾಮನ್ ರಸ್ತೆ, ಸದಾಶಿವನಗರ ಠಾಣೆ, ಬಿಎಎಲ್ ರಸ್ತೆ, ಗಂಗಮ್ಮ ಸರ್ಕಲ್​ನಿಂದ ತುಮಕೂರು ರಸ್ತೆಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ..

ಅಂಬಿಯಾತ್ರೆ ಸಾಗುವ ಮಾರ್ಗ ನೋಡೋದಾದ್ರೆ, ಕಂಠೀರವ ಸ್ಟೇಡಿಯನಿಂದ ಹಡ್ಸನ್ ಸರ್ಕಲ್, ಹಲಸೂರು ಗೇಟ್ ಪೊಲೀಸ್​ ಸ್ಟೇಷನ್​, ಕೆ.ಜಿ ರೋಡ್, ಮೈಸೂರು ಬ್ಯಾಂಕ್ ಸರ್ಕಲ್, ಸಿಐಡಿ ಜಂಕ್ಷನ್ ಬಸವೇಶ್ವರ ಸರ್ಕಲ್, ವಿಂಡ್ಸರ್ ಮ್ಯಾನರ್ ಮೂಲಕ ಕಾವೇರಿ ಜಂಕ್ಷನ್ ತಲುಪಿ ಅಲ್ಲಿಂದ ಸ್ಯಾಂಕಿ ರೋಡ್, ಮಾರಮ್ಮ ಸರ್ಕಲ್ ಮೂಲಕ ಯಶವಂತಪುರ ಮೇಲ್ಸೇತುವೆ, ಗೋವರ್ಧನ್, ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆ, ಗೊರಗುಂಟೆಪಾಳ್ಯ ಜಂಕ್ಷನ್, ಕಂಠೀರವ ಸ್ಟುಡಿಯೋ ತಲುಪಲಿದೆ.

ಇನ್ನು ನಗರದಾದ್ಯಂತ ಭಾರಿ ಬಂದೋಬಸ್ತ್ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆಗಾಗಿ 11 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. 4 ಸಾವಿರ ಸಂಚಾರಿ ಪೊಲೀಸರು, 30 ಕೆಎಸ್ಆರ್​ಪಿ ತುಕಡಿ, 34 ಸಿಎಆರ್ ತುಕಡಿ, 3 ಱಪಿಡ್​ ಆಕ್ಷನ್ ಫೋರ್ಸ್​, 5 ಆರ್​ಐವಿ ಪಡೆ ಜೊತೆಗೆ 4 ಹೆಚ್ಚುವರಿ ಪೊಲೀಸ್ ಆಯುಕ್ತರು, 15 ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಒಟ್ಟು ಭದ್ರತೆಗಾಗಿ 15 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ..

Leave a Reply