ಅಭಿಮಾನದ ಅಶ್ರುತರ್ಪಣದ ನಡುವೆ ಅಂಬರ ದಾಟಿದ ಅಂಬಿ!

ಡಿಜಿಟಲ್ ಕನ್ನಡ ಟೀಮ್:

ಕರುನಾಡು ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದರು.

ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟೂಡಿಯೋ ತನಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅಂಬಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯ್ತು. ಈ ವೇಳೆ ಸಹಸ್ರ, ಸಹಸ್ರ ಜನರು ಕಲಿಯುಗದ ಕರ್ಣನ ಹಿಂದೆ ಹೆಜ್ಜೆ ಹಾಕಿದರು.

ಬೆಳಗ್ಗೆ 12.30ಕ್ಕೆ ಶುರುವಾದ ಅಂತಿಮ ಯಾತ್ರೆ ಮಧ್ಯಾಹ್ನ 2.45 ಕ್ಕೆ ಕಂಠೀರವ ಸ್ಟೂಡಿಯೋ ತಲುಪಿತು. ಲಕ್ಷಾಂತರ ಜನ ಅಭಿಮಾನಿಗಳು ಅಂಬಿ ಅಂತಿಮ ಪಯಣಕ್ಕೆ ಪ್ರೀತಿಯ ವಿದಾಯ ಹೇಳಲು ಆಗಮಿಸಿದ್ರು. ಕಂಠೀರವ ಸ್ಟೂಡಿಯೋ ಸುತ್ತಮುತ್ತಲಿನ ರಸ್ತೆ, ಕಟ್ಟಡಗಳು, ಮರಗಳ ಮೇಲೆ ಜನಸಾಗರ ಸೇರಿತ್ತು.

ಅಂಬರೀಶ್ ಜೊತೆಗಿನ 37 ವರ್ಷದ ಗೆಳೆತನವನ್ನು ಬಿಟ್ಟುಕೊಡಲಾಗದ ತೆಲುಗು ನಟ ಮೋಹನ್ ಬಾಬು ಕಣ್ಣೀರ ಕೋಡಿ ಹರಿಸಿದ್ರು. ಪಾರ್ಥಿವ ಶರೀರ ಕಂಠೀರವ ಸ್ಟೂಡಿಯೋ ತಲುಪುತ್ತಿದ್ದ ಹಾಗೆ ಪತ್ನಿ‌ ಸುಮಲತಾ ಕುಸಿದು ಬಿದ್ರು. ಈ ವೇಳೆ ರಾಕ್‌ಲೈನ್ ವೆಂಕಟೇಶ್ ಹಾಗೂ ನಟ ಯಶ್ ಉಪಚರಿಸಿದ್ರು. ಪೊಲೀಸರು ಎಷ್ಟೇ ಭದ್ರತೆ ಕೈಗೊಂಡರೂ ಜನರು ಮಾತ್ರ ಬ್ಯಾರಿಕೇಡ್ ಹತ್ತಿ ಸಮಾಧಿ ಸ್ಥಳಕ್ಕೆ ನುಗ್ಗಲೆತ್ನಿಸುತ್ತಿದ್ರು.

ಕಂಠೀರವ ಸ್ಟೂಡಿಯೋದಲ್ಲಿ ಸಿಎಂ ಕುಮಾರಸ್ವಾಮಿ ಅಂತಿಮ ನಮನ ಸಲ್ಲಿಕೆ ಮಾಡಿದ್ರು. ಬಳಿಕ ಡಿಸಿಎಂ ಪರಮೇಶ್ವರ್ ಗೌರವ ಸಲ್ಲಿಸಿದ್ರೆ, ಸಚಿವ ಡಿ.ಕೆ.‌ ಶಿವಕುಮಾರ್ ಸಹಾಯದೊಂದಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನಮನ ಸಲ್ಲಿಸಿದ್ರು. ಬಳಿಕ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ, ಬಿಜೆಪಿ ‌ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ರಾಹುಲ್ ಗಾಂಧಿ ಪರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಒಕ್ಕಲಿಗರ ಮಠ ಆದಿಚುಂಚನಗಿರಿ ಮಠದ ನಿರ್ಮಾಲನಂದ ಶ್ರೀಗಳು, ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಸಚಿವರಾದ ಹೆಚ್ ಡಿ ರೇವಣ್ಣ, ಕೆ ಜೆ ಜಾರ್ಜ್‌, ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಸೇರಿದಂತೆ ಹಲವಾರು ನಾಯಕರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು.

ಹಿರಿಯ ನಟ ನಟಿಯರು ಅಂಬರೀಶ್‌ಗೆ ಪುಷ್ಪ ನಮನ ಸಲ್ಲಿಸಿದ ನಂತರ ಮತ್ತಷ್ಟು ನಟರಿಗೆ ಅವಕಾಶ ಸಿಗಲಿಲ್ಲ ಅನ್ನೋ ಕಾರಣಕ್ಕೆ ಗೋಲ್ಡನ್ ಸ್ಟಾರ್ ಗಣೇಶ್, ರಂಗಾಯಣ ರಘು, ರವಿ ಶಂಕರ್, ಜೈ ಜಗದೀಶ್ ಸೇರಿದಂತೆ ಹಲವರು ಪೊಲೀಸರ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ರು. ಈ ವಿಚಾರ ತಿಳಿದ ಸಚಿವ ಡಿ.ಕೆ ಶಿವಕುಮಾರ್, ಪಾರ್ಥಿವ ಶರೀರದ ಮೇಲಿಂದ ರಾಷ್ಟ್ರಧ್ವಜ ತೆಗೆದು ಕುಟುಂಬಕ್ಕೆ ಹಸ್ತಾಂತರ ಮಾಡಿದ ಬಳಿಕ ಅವಕಾಶ ಕಲ್ಪಿಸಿಕೊಟ್ಟರು. ಅಂತಿಮ ಸಂಸ್ಕಾರ ವಿದಿವಿಧಾನದ ಪ್ರಕ್ರಿಯೆಯ ಆರಂಭದಿಂದ ಅಂತ್ಯದವರೆಗೆ ಶಿವಕುಮಾರ್ ವಹಿಸಿದ ಮುತುವರ್ಜಿ, ನೀಡಿದ ಸಲಹೆ, ಸೂಚನೆ ಗಮನ ಸೆಳೆಯುವಂತಿತ್ತು.

ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೌನಚಾರಣೆ ಮೂಲಕ ಅಂಬರೀಶ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು.. ಈ ವೇಳೆ ಅಂಬಿ ಪಾರ್ಥಿವ ಶರೀರವನ್ನೇ ನೋಡುತ್ತಿದ್ದ ಪತ್ನಿ ಸುಮಲತಾ ಕಣ್ಣೀರುಡುತ್ತಾ ತನ್ನನ್ನು ಬಿಟ್ಟು ಹೋಗುವೆ ಕರ್ಣ ಎಂದು ಕೇಳುತ್ತಿರಯವಂತೆ ಭಾಸವಾಯ್ತು. ಅಂತಿಮವಾಗಿ ಅವರು ಅಂಬಿಗೆ ಅತೀವ ದುಃಖದೊಂದಿಗೆ ಚುಂಬಿಸಿ ವಿದಾಯ ಹೇಳಿದ್ದು, ನೆರೆದವರ ಕಣ್ಣಾಲಿಗಳಲ್ಲಿ ನೀರಾಡುವಂತೆ ಮಾಡಿತ್ತು. ಸರ್ಕಾರಿ ಗೌರವಗಳೊಂದಿಗೆ ಗೌರವ ಸಲ್ಲಿಸುವ ಮೂಲಕ ಅಂತ್ಯಕ್ರಿಯೆಗೆ ಚಾಲನೆ ಸಿಕ್ತು. ಒಕ್ಕಲಿಗ ಸಂಪ್ರದಾಯದಂತೆ ಪೂಜೆ ಪುನಸ್ಕಾರಗಳು ನಡೆದ ಬಳಿಕ ಮುಖದ ಮೇಲೆ ಕಟ್ಟಿಗೆ ಇಡಲು ಮಗ ಅಭಿಷೇಕ್ ಭಾವೋದ್ವೇಗದಿಂದ ನಿರಾಕರಿಸಿದ ಘಟನೆಯೂ ನಡೀತು. ನಂತ್ರ ವಿಧಿ ವಿಧಾನಕ್ಕೆ ಪೊಡಮಡಿದರು. ಅಂಬಿ ಚಿತೆಗೆ ಹಿಮ್ಮುಖವಾಗಿಅಗ್ನಿ ಸ್ಪರ್ಶ ಮಾಡಿದರು. ಅಂಬರೀಶ್ ಚಿತೆಗೆ ಅಗ್ನಿಸ್ಪರ್ಶ ಆಗ್ತಿದ್ದಂತೆ ಆಕಾಶದಲ್ಲಿ ನೂರಾರು ಹಕ್ಕಿಗಳು ಹಾರಾಡುವ ಮೂಲಕ ಅಂಬರೀಶ್ ಅಂತಿಮ ವಿದಾಯ ಹೇಳಿದವು..!

Leave a Reply