ಡಿಕೆಶಿ ಭೇಟಿ ನಂತರ ಯಡಿಯೂರಪ್ಪನವರು ಬಿಟ್ಟ ‘ಹುಳ’ಏನು?

ಡಿಜಿಟಲ್ ಕನ್ನಡ ಟೀಮ್:

ರಾಜಕೀಯ ‘ಪರಮ ಹಿತಶತ್ರು’ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಅವರ ಗೃಹಕಚೇರಿಗೆ ಬುಧವಾರ ಪುತ್ರಸಮೇತರಾಗಿ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಮಾಧ್ಯಮಗಳಿಗೆ ಒಂದು ‘ಹುಳ’ ಬಿಟ್ಟು ಹೋದರು. ಅವರು ಹಾರಿಸಿದ ಚಟಾಕಿ ಮಾಧ್ಯಮಗಳಿಗೆ ರಾಜಕೀಯ ಪಟಾಕಿ ಆಗಿ ಪರಿವರ್ತನೆ ಆಗಿಹೋಯಿತು.

ಇಡೀ ದೇಶದಲ್ಲೇ ಅತಿ ಉದ್ದ ಮತ್ತು ಎತ್ತರದ ಸಿಗಂಧೂರು-ಕಳಸವಳ್ಳಿ ಸೇತುವೆ ನಿರ್ಮಾಣ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ನಾನಾ ನೀರಾವರಿ ಯೋಜನೆಗಳಿಗೆ ಇರುವ ಅಡೆತಡೆಗಳ ನಿವಾರಣೆ ಸಂಬಂಧ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಜತೆ ಯಡಿಯೂರಪ್ಪನವರು ಸುಮಾರು ಒಂದು ತಾಸು ಸಮಾಲೋಚನೆ ನಡೆಸಿದರು. ಅಲ್ಲಿಂದ ಹೊರಡುವ ಮೊದಲು ಸುದ್ದಿಗಾರರ ಜತೆ ಮಾತಾಡಿದ ಸಂದರ್ಭ ನೀರಾವರಿ ಬಿಟ್ಟು ರಾಜಕೀಯ ಕುರಿತು ಚರ್ಚೆ ಮಾಡಲಿಲ್ಲವೇ ಎಂಬ ಪ್ರಶ್ನೆ ಎದುರಾಯಿತು.

ಕೊಂಚವೂ ತಡಮಾಡದೆ, ತಡವರಿಸದೆ ಯಡಿಯೂರಪ್ಪನವರು, ಅದೆಲ್ಲವನ್ನು ಮಾಧ್ಯಮದವರಿಗೆ ಹೇಳಲು ಸಾಧ್ಯವೇ ಎಂದು ನಗುತ್ತಾ, ಕಣ್ಮಿಟುಕಿಸಿ ಕೇಳಿದರು. ಅವರು ಇಷ್ಟು ಹೇಳಿದ್ದು ಅವರವರ ಭಾವಕ್ಕೆ ತಕ್ಕಂತೆ ರಸಗವಳ ಒದಗಿಸಿದೆ.

ಹಿಂದೆ ನೀವು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಶಿವಕುಮಾರ್ ಅವರನ್ನು

ಖಳನಾಯಕ ಎಂದು ಬಣ್ಣಿಸಿದ್ದಿರಿ. ಆದರೆ ಈಗ ಖಳನಾಯಕನ ಮನೆಗೇ ಬಂದೀದ್ದಿರಲ್ಲಾ ಎಂಬ ಪ್ರಶ್ನೆಗೂ ನಗುತ್ತಲೇ ಉತ್ತರಿಸಿದ ಯಡಿಯೂರಪ್ಪನವರು, ಅದೆಲ್ಲ ಈಗ ಅಪ್ರಸ್ತುತ. ಮುಗಿದು ಹೋದ ಕತೆ. ರಾಜಕೀಯ ಬೇರೆ. ಸ್ನೇಹ ಬೇರೆ. ನಾನು ಅವರ ಮನೆಗೆ ಹೋಗುತ್ತೇನೆ. ಅವರು ನನ್ನ ಮನೆಗೆ ಬರುತ್ತಾರೆ. ಇದರಲ್ಲೇನು ವಿಶೇಷವಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲಕ್ಕಿಂತ ಮಿಗಿಲಾಗಿ ಶಿವಕುಮಾರ್ ಸಚಿವರು. ನನಗೆ ಆಗಬೇಕಿರುವುದು ಸರಕಾರಿ ಕೆಲಸ. ಅವರನ್ನು ಕಾಣಲು ಸರಕಾರಿ ಬಂಗಲೆಗೆ ಬಂದಿದ್ದೇನೆ. ನೀರಾವರಿ ಯೋಜನೆಗಳಿಗೆ ಇರುವ ಅಡೆತಡೆಗಳ ಸಂಬಂಧ ಅರಣ್ಯ ಸಚಿವರು, ಇಲಾಖೆ ಅಧಿಕಾರಿಗಳನ್ನು ಕರೆಸಿ ಶಿವಕುಮಾರ್ ಅವರು ನಮ್ಮ  ಸಮ್ಮುಖದಲ್ಲೇ ಚರ್ಚಿಸಿದ್ದಾರೆ. ಅವರ ಜತೆ ನಡೆಸಿದ ಮಾತುಕತೆ ಸಮಾಧಾನ ತಂದಿದೆ ಎಂದೂ ಹೇಳಿದರು. ಸಚಿವ ಆರ್. ಶಂಕರ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಮಹಂತೇಶ ಕವಟಗಿಮಠ ಮತ್ತಿತರರು ಹಾಜರಿದ್ದರು.

Leave a Reply