ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಯಡಿಯೂರಪ್ಪ ಹಿರಿಯರು. ನಾನೂ ಅವರು ಆತ್ಮೀಯ ಗೆಳೆಯರು. ರಾಜಕೀಯ ಮೀರಿದ ಸ್ನೇಹ ನಮ್ಮದು. ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಅವರು ಅಧಿಕಾರದಲ್ಲಿ ಇದ್ದಾಗ ನನ್ನ ಕ್ಷೇತ್ರಕ್ಕೂ ಬಹಳಷ್ಟು ಕೆಲಸ ಮಾಡಿಕೊಟ್ಟಿದ್ದಾರೆ. ಇಷ್ಟರಲ್ಲೇ ಅವರ ಕ್ಷೇತ್ರಕ್ಕೆ ಹೋಗಿ ಸಮಸ್ಯೆ ಪರಿಶೀಲಿಸುತ್ತೇನೆ. ಅವರ ಆತಿಥ್ಯವನ್ನೂ ಸ್ವೀಕರಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕ್ರೆಸೆಂಟ್ ರಸ್ತೆಯಲ್ಲಿರುವ ಸರಕಾರಿ ಬಂಗಲೆಗೆ ಬುಧವಾರ ಆಗಮಿಸಿದ ಯಡಿಯೂರಪ್ಪ ಅವರನ್ನು ಹೂಗುಚ್ಛ ನೀಡಿ. ಆತ್ಮೀಯವಾಗಿ ಅಪ್ಪಿ ಬರಮಾಡಿಕೊಂಡ ಶಿವಕುಮಾರ್ ಅವರು ಶಿವಮೊಗ್ಗದ ನೀರಾವರಿ ಯೋಜನೆಗಳ ಬಗ್ಗೆ ಅವರು ಹಾಗೂ ಪುತ್ರ ಬಿ.ವೈ. ರಾಘವೇಂದ್ರ ಕೊಟ್ಟ ಮನವಿ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತಾಡಿದರು.

ದೇವರು ಯಡಿಯೂರಪ್ಪನವರಿಗೆ ಸಾಕಷ್ಟು ಅಧಿಕಾರ, ಅವಕಾಶಗಳನ್ನು ಕೊಟ್ಟಿದ್ದಾನೆ. ಅವರು ಅಧಿಕಾರದ ಅವಧಿಯಲ್ಲಿ ನನಗೂ ಸಾಕಷ್ಟು ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಈಗ ಶಿವಮೊಗ್ಗದಲ್ಲಿ ಕೃಷ್ಣಾ, ಕಾವೇರಿಯಂಥ ಅಂತಾರಾಜ್ಯ ಜಲ ಸಮಸ್ಯೆಗಳೇನೂ ಇಲ್ಲ. ಅದೆಲ್ಲ ನಮ್ಮ ಸುಪರ್ದಿಯಲ್ಲಿ ಇರುವಂಥದ್ದೇ. ಈಗ ಹಿರಿಯ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ. ಅದನ್ನು ಆದಷ್ಟು ಶೀಘ್ರ ಬಗೆಹರಿಸಲಾಗುವುದು ಎಂದರು.

ರಾಜಕೀಯಯೇನಾದರೂ ಚರ್ಚೆ ಆಯಿತೇ ಎಂದು ಕೇಳಿದ ಪ್ರಶ್ನೆಗೆ ನೀರಾವರಿ ವಿಷಯ ಬಿಟ್ಟು ಬೇರೇನೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ವಿಷ್ಣುವರ್ಧನ್ ಸ್ಮಾರಕದ ವಿಷಯ ಪ್ರಸ್ತಾಪ ಮಾಡಿದಾಗ ಈಗ ಆ ವಿಷಯ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

ಇದಕ್ಕೂ ಮೊದಲು ನಡೆದ ಸಭೆಯಲ್ಲಿ, ಸಿಗಂಧೂರು ಸೇತುವೆ ನಿರ್ಮಾಣ ಸೇರಿ ನಾನಾ ಯೋಜನೆಗಳಿಗೆ ಇರುವ ಅಡೆತಡೆಗಳ ಅದರಲ್ಲೂ ವಿಶೇಷವಾಗಿ ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ ಬಾಕಿ ಹಾಗೂ ಕಾಮಗಾರಿ ಆರಂಭ ಆಗಬೇಕಿರುವ ಯೋಜನೆಗಳ ಬಗ್ಗೆ ವಿವರ ಪಡೆದ ಶಿವಕುಮಾರ್ ಅದನ್ನು ಶೀಘ್ರ ಪರಿಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆರಣ್ಯ ಸಚಿವ ಆರ್. ಶಂಕರ್, ಶಾಸಕ ಹರತಾಳು ಹಾಲಪ್ಪ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಮಹಂತೇಶ ಕವಟಗಿಮಠ ಮತ್ತು ಅಧಿಕಾರಿಗಳ ಹಾಜರಿದ್ದರು.

Leave a Reply