ಅಧಿಕಾರಿಗಳನ್ನು ಹಿಡಿತಕ್ಕೆ ತಂದ ಮುಖ್ಯಮಂತ್ರಿ..!

ಡಿಜಿಟಲ್ ಕನ್ನಡ ಟೀಮ್:

ಅಂಬರೀಶ್ ವಿಧಿವಶರಾದ ಬಳಿಕ ಸರ್ಕಾರ ಎಲ್ಲಾ ಕಾರ್ಯಗಳನ್ನು ತುಂಬಾ ಜಾಣ್ಮೆಯಿಂದ ನಿಭಾಯಿಸಿತು. ಶನಿವಾರ ರಾತ್ರಿಯಿಂದ ಭಾನುವಾರ ಕಂಠೀರವ ಸ್ಟೇಡಿಯಂನಲ್ಲಿ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಬೆಂಗಳೂರಿನಿಂದ ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ಏರ್‌ಲಿಫ್ಟ್ ಮಾಡಿ ಹುಟ್ಟೂರಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಇಡೀ ರಾಜ್ಯಾದ್ಯಂತ ಪ್ರಶಂಸೆಗೆ ಕಾರಣವಾಗಿದೆ.

ಕುಮಾರಸ್ವಾಮಿ ಸರ್ಕಾರ ಅಂಬರೀಶ್‌ಗೆ ಅತ್ಯಂತ ಗೌರವಯುತ ಬೀಳ್ಕೊಡಿಗೆ ಕೊಟ್ಟಿದೆ ಎಂದು ಜನರೇ ಮಾತನಾಡಿಕೊಳ್ತಿದ್ದಾರೆ. ಈ ಜನಪ್ರಿಯತೆ ಇಂದು ಹುರುಪು ಪಡೆದುಕೊಂಡಿರುವ ಸಿಎಂ ಕುಮಾರಸ್ವಾಮಿ, ಅಧಿಕಾರಿಗಳಿಗೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಲ್ಲಿ ಬೆಂಗಳೂರು ಮತ್ತು ಮಂಡ್ಯ ಭಾಗದ ಅಧಿಕಾರಿಗಳ ಕಾರ್ಯವನ್ನು ಮೆಚ್ಚಿಕೊಂಡ ಮುಖ್ಯಮಂತ್ರಿ, ಅಧಿಕಾರಿಗಳ ಕಾರ್ಯವೈಖರಿ ಅಭಿನಂದನಾರ್ಹ ಎಂದರು. ನಂತರ ಅಧಿಕಾರಿಗಳು ಮನಸ್ಸು ಮಾಡಿದ್ರೆ ಸರ್ಕಾರಕ್ಕೆ ಒಳ್ಳೆ ಹೆಸರು ತರಬಹುದು ಎಂದಿದ್ದಾರೆ. ಜೊತೆಗೆ 2019ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಬಹುದು. ಅಭಿವೃದ್ಧಿ ಕೆಲಸ ಮಾಡಲು ಇರುವುದು ಕೇವಲ ಮೂರ್ನಾಲ್ಕು ತಿಂಗಳ ಅವಧಿ ಮಾತ್ರ. ಇಷ್ಟು ಕಡಿಮೆ ಸಮಯವನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಂಡು ಯೋಜನೆ ಅನುಷ್ಠಾನ, ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸತತ 7 ಗಂಟೆಗಳ ಕಾಲ ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ಸಭೆ ನಡೆಡಿದ ಸಿಎಂ ಕುಮಾರಸ್ವಾಮಿ, ರೈತರ ಸಾಲ ಮನ್ನಾಗೆ ಹಣದ ಕೊರತೆ ಇಲ್ಲ, ಬ್ಯಾಂಕ್‌ಗಳಿಂದ ಮಾಹಿತಿ ಪಡೆಯೋದ್ರಲ್ಲಿ ಎಷ್ಟು ಸಫಲ ಆಗಿದ್ದೀರಿ ಅನ್ನೋದು ಮುಖ್ಯ ಎಂದು ಪ್ರಶ್ನಿಸಿದ್ದಾರೆ. ರೈತರಿಗೆ ಸಾಲ ಮನ್ನಾ ಮಾಹಿತಿ ಕೊಡೋದ್ರಲ್ಲಿ ಏನ್ ಕ್ರಮ ತೆಗೆದುಕೊಂಡಿದ್ದೀರಿ ಅನ್ನೋದ್ರ ಮಾಹಿತಿ ನೀಡಬೇಕು. ಬಡವರ ಬಂಧು ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಅದನ್ನ ಯಾವ ರೀತಿ ಅನುಷ್ಠಾನಗೊಳಿಸಿದ್ದೀರಿ. ಬಡ್ಡಿ ಗೂಂಡಾಗಳಿಂದ ಬೀದಿ ವ್ಯಾಪಾರಿಗಳನ್ನು ರಕ್ಷಣೆ ಮಾಡಿದ್ದೀರಾ..? ಈ ಎಲ್ಲಾ ಯೋಜನೆಗಳ ಯಶಸ್ವಿಯಾದ ಬಗ್ಗೆ ಮಾಹಿತಿ ನೀಡಬೇಕು ಅಂತ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ಕೊಟ್ಟಿದ್ದಾರೆ. ‌ಇನ್ನು 100 ತಾಲೂಕುಗಳನ್ನ ಬರ ಪೀಡಿತ ಪ್ರದೇಶಗಳು ಅಂತ ಘೋಷಣೆ ಮಾಡಲಾಗಿದೆ, ಕುಡಿಯುವ ನೀರು, ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ರಮದ ಬಗ್ಗೆಯೂ ಮಾಹಿತಿ ನೀಡಬೇಕು. ನೀವು ಒಳ್ಳೆಯ ಕೆಲಸ ಮಾಡಿದಾಗ ಅಭಿನಂದಿಸೋದು ನನ್ನ ಕರ್ತವ್ಯ ಎಂದು ಅಧಿಕಾರಿಗಳನ್ನು ಹುರಿದುಂಬಿಸಿದ್ದಾರೆ.

ಜಲಾಶಯಗಳು ಭರ್ತಿಯಾದ್ರೂ ಬರಗಾಲ ತಲೆದೋರಿದೆ, ಆದ್ದರಿಂದ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗಬಹುದು. ಕೇಂದ್ರದ ಅನುದಾನ ಬಳಕೆ ಬಗ್ಗೆ ಯಾವ ಯೋಜನೆಗಳನ್ನ ಹಾಕಿಕೊಂಡಿದ್ದೀರಿ? ಕೊಡಗು ಜಿಲ್ಲೆಯಲ್ಲಿ ಯಾವ ಪರಿಹಾರೋಪಾಯಗಳನ್ನ ಕೈಗೊಳ್ಳಲಾಗಿದೆ ಅನ್ನೋದ್ರ ಬಗ್ಗೆ ತಿಳಿಸಿ. ಕೊಡಗಿನಲ್ಲಿ ಪುನರ್ವಸತಿಗೆ ಮನೆ ನಿರ್ಮಾಣ ಕಾಮಗಾರಿ ವೇಗಗೊಳಿಸಬೇಕು. ಮನೆ ರಹಿತರಿಗೆ ಮನೆ ಮತ್ತು ನಿವೇಶನ ಹಂಚಿಕೆ ಯೋಜನೆ ದುರುಪಯೋಗವಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ. ನಿರುದ್ಯೋಗದಿಂದ ಗುಳೆ ಹೋಗೋದನ್ನ ತಪ್ಪಿಸಬೇಕಿದ್ದು, ನರೇಗಾ ಯೋಜನೆ ಜಾರಿ ಬಗ್ಗೆ ಮಾಹಿತಿ ಕೊಡಿ ಎಂದಿರುವ ಸಿಎಂ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ನಮಗೆ ಸಂಕಷ್ಟದ ಪರಿಸ್ಥಿತಿ ಎದುರಾಗಬಹುದು. ಜಲಾಶಯಗಳು ಭರ್ತಿಯಾಗಿವೆ. ಆದರೂ‌ ಬರ ಪರಿಸ್ಥಿತಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಮ್ಮೆದುರಿಗೆ ದೊಡ್ಡ ಸವಾಲು ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಹಣ ಸದ್ಬಳಕೆ ಮಾಡಬೇಕು. ಜನ ಗುಳೆ ಹೋಗದಂತೆ ಯೋಜನೆಗಳನ್ನು ರೂಪಿಸಬೇಕು. ಜಿಲ್ಲಾಧಿಕಾರಿಗಳೇ ಖುದ್ದು ಪಂಚಾಯ್ತಿ ಮಟ್ಟಕ್ಕೆ ಹೋಗಿ ಕಾಮಗಾರಿಗಳ ಪರಿಶೀಲಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ.

Leave a Reply