ಕಾಂಗ್ರೆಸ್ ಅನ್ನು ಧಿಕ್ಕರಿಸಿದ ರಾಜ್ಯಗಳು ಉದ್ಧಾರವಾಗುತ್ತಿವೆ: ರಾಜಸ್ಥಾನದಲ್ಲಿ ಮೋದಿ ಕಿಡಿ

ಡಿಜಿಟಲ್ ಕನ್ನಡ ಟೀಮ್:

ರಾಜಸ್ಥಾನದಲ್ಲಿ ಮತ್ತೇ ಬಿಜೆಪಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ಬುಧವಾರ ಇಲ್ಲಿನ ಭಾರತಪುರ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ ಕಾಂಗ್ರೆಸ್ ವಿರುದ್ಧ ಪ್ರಯೋಗಿಸಿದ ಟೀಕಾಸ್ತೃಗಳು ಹೀಗಿದ್ದವು…

ಕಾಂಗ್ರೆಸ್ ಧಿಕ್ಕರಿಸಿದರೆ ಅಭಿವೃದ್ಧಿ

ಕಾಂಗ್ರೆಸ್ ನಲ್ಲಿರುವ ಹಿರಿಯ ನಾಯಕರ ಪೈಕಿ ಹಲವರು ಉತ್ತರ ಪ್ರದೇಶದ ಮೂಲದವರು. ಆ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಕಿತ್ತು ಹಾಕಲಾಗಿದೆ. ಈಗ ಉತ್ತರ ಪ್ರದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಕೇವಲ ಉತ್ತರ ಪ್ರದೇಶ ಮಾತ್ರವಲ್ಲ ತಮಿಳುನಾಡು, ಛತ್ತೀಸ್‌ಗಡ, ಮಧ್ಯ ಪ್ರದೇಶ, ಬಿಹಾರ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ. ಕಾಂಗ್ರೆಸ್ ಅನ್ನು ಕಿತ್ತೊಗೆದಿರುವ ರಾಜ್ಯಗಳು ಪ್ರಗತಿಯ ಹಾದಿಯಲ್ಲಿ ಸಾಗಲು ಆರಂಭಿಸಿವೆ.

ಗುರಿನಿರ್ದಿಷ್ಟ ದಾಳಿ

ಭಾರತ ಭಯೋತ್ಪಾದಕ ದಾಳಿಯಿಂದ ತೊಂದರೆ ಅನುಭವಿಸುತ್ತಿದ್ದಾಗ ಉಗ್ರರ ನೆಲಕ್ಕೆ ಹೋಗಿ ಅವರನ್ನು ಹೊಡೆದು ಹಾಕಿದೆವು. ಯೋಧರ ಗುರಿನಿರ್ದಿಷ್ಟ ದಾಳಿಯನ್ನು ಕೇವಲ ಕಾಂಗ್ರೆಸ್ ಮಾತ್ರ ಪ್ರಶ್ನಿಸಿ ಸಾಕ್ಷಿ ಕೇಳಿದೆ.

ಕುಟುಂಬ ರಾಜಕಾರಣ
ಕಾಂಗ್ರೆಸ್‌ನಲ್ಲಿ ಒಂದು ಕುಟುಂಬದ ಸದಸ್ಯರನ್ನೇ ನಾಯಕರನ್ನಾಗಿ ಬೆಳೆಸಿ ವಂಶಪಾರಂಪರಿಕ ಆಡಳಿತಕ್ಕೆ ಒತ್ತು ನೀಡಿ ಆಂತರಿಕ ಪ್ರಜಾಪ್ರಭುತ್ವ ಮರೆತಿದೆ.

ಪಟೇಲರು ಪ್ರಧಾನಿಯಾಗಿದ್ದರೆ!
ದೇಶದ ಮೊದಲ ಪ್ರಧಾನಿಯಾಗಿ ಸರ್ದಾರ್ ವಲ್ಲಭಭಾಯಿ ಪಟೇಲರು ಆಯ್ಕೆಯಾಗಿದ್ದರೆ, ಇಂದು ರೈತರ ಪರಿಸ್ಥಿತಿ ಇಷ್ಟು ಶೋಚನೀಯವಾಗಿರುತ್ತಿರಲಿಲ್ಲ. ಸ್ವಾಮಿನಾಥನ್ ಸಮಿತಿಯು ಬೆಂಬಲ ಬೆಲೆ ನೀಡುವಂತೆ ಶಿಫಾರಸ್ಸು ನೀಡಿ 10 ವರ್ಷಗಳೇ ಕಳೆದಿದ್ದವು. ಆದರೆ ಮೇಡಂ (ಸೋನಿಯಾ ಗಾಂಧಿ) ಅವರಿಂದ ಪರೋಕ್ಷ ನಿಯಂತ್ರಣದಲ್ಲಿದ್ದ ಸರಕಾರ ಇದರ ಕಡೆ ಗಮನ ಹರಿಸಲಿಲ್ಲ. ಗಮನ ಹರಿಸಿದ್ದರೆ ಇಂದು ರೈತರು ಸಾಲದಿಂದ ಸೊರಗುತ್ತಿರಲಿಲ್ಲ.

Leave a Reply