ಕನ್ನಡ ಚಿತ್ರರಂಗದ ಯಜಮಾನಿಕೆ, ಅಂಬಿ ಸ್ಥಾನ ತುಂಬೋರು ಯಾರು?!

ಡಿಜಿಟಲ್ ಕನ್ನಡ ವಿಶೇಷ:

ಭಾರತೀಯ ಚಿತ್ರರಂಗದಲ್ಲಿ ಕನ್ನಡದ್ದು ಅರ್ಥಾತ್ ಸ್ಯಾಂಡಲ್‌ವುಡ್ ಪ್ರಮಾಣದಲ್ಲಿ ಸ್ವಲ್ಪ ಚಿಕ್ಕದೇ. ಆದರೆ ಬೇರೆ ಚಿತ್ರರಂಗಕ್ಕೆ ಹೋಲಿಸಿದರೆ ಗುಣಮಟ್ಟದಲ್ಲಿ ವಿಭಿನ್ನ. ಇಲ್ಲಿನ ನಾಯಕತ್ವ ಕೂಡ ಅಷ್ಟೇ. ಒಂದು ಕಾಲದಲ್ಲಿ ಡಾ. ರಾಜ್‌ಕುಮಾರ್ ಇದ್ದಾರೆಂದರೆ ಸಾಕು. ಎಲ್ಲರೂ ಅವರಿಗೆ ಗೌರವ ಕೊಟ್ಟು ತುಟಿಕ್-ಪಿಟಿಕ್ ಎನ್ನದೆ ಸೈಲೆಂಟ್ ಆಗಿ ಇರುತ್ತಿದ್ರು. ಡಾ. ರಾಜ್‌ಕುಮಾರ್ ಬಂದರು ಅಂದರೆ ಇಡೀ ಕಲಾವಿದರೇ ಎದ್ದುನಿಂತು ಗೌರವ ಕೊಡುತ್ತಿದ್ರು. ಅವರ ನಾಯಕತ್ವದಲ್ಲಿ ಗೋಕಾಕ್ ಚಳುವಳಿ ನಡೆದಾಗ ಇಡೀ ಸ್ಯಾಂಡಲ್‌ವುಡ್ ಟೊಂಕಕಟ್ಟಿ ನಿಂತಿದ್ದೇ ಇದಕ್ಕೆ ಸಾಕ್ಷಿ. ಆದರೆ ಡಾ. ರಾಜ್‌ಕುಮಾರ್ ಬಳಿಕ ಸಿನಿಮೋದ್ಯಮದ ಹೊಣೆ ಡಾ. ಅಂಬರೀಶ್ ಹೆಗಲಿಗೆ ಬಿದ್ದಿತ್ತು. ಅದನ್ನವರು ತಮ್ಮದೇ ಆದ ಗತ್ತು-ಗೈರತ್ತಿನಿಂದಲೇ ನಿಭಾಯಿಸಿದ್ದರು.

ಅಂಬರೀಶ್ ಸಮಕಾಲಿನರೇ ಆದ ಡಾ. ವಿಷ್ಣುವರ್ಧನ್ ಆಗ ಇದ್ದರೂ ಸಹ ಅವರಿಗೆ ಅಂಬರೀಶ್ ರೀತಿಯ ಛಾತಿ, ಎದೆಗಾರಿಕೆ ಇರಲಿಲ್ಲ. ಸ್ವಲ್ಪ ಹೆಚ್ಚೇ ಎನಿಸುವಷ್ಟು ಮೌನಿಯಾಗಿದ್ದ ವಿಷ್ಣುವರ್ಧನ್, ಎಷ್ಟು ಬೇಕೋ ಅಷ್ಟನ್ನೇ ಮಾತನಾಡುವ ಮಿತಭಾಷಿ. ಆದರೆ ಸ್ಯಾಂಡಲ್‌ವುಡ್‌ನ ಹಲವು ವಿಚಾರಗಳ ಬಗ್ಗೆ ಆಪ್ತ ಸ್ನೇಹಿತ ಅಂಬರೀಶ್ ಬಳಿ ಚರ್ಚಿಸುತ್ತಿದ್ದರು. ತಮಗೆ ಅನ್ನಿಸಿದ್ದನ್ನು ಹೇಳಿಕೊಳ್ಳುತ್ತಿದ್ದರು. ಆದರೆ ನೇರವಾಗಿ ಯಾವತ್ತೂ ಫೀಲ್ಡಿಗೆ ಇಳಿದವರಲ್ಲ. ಅಂಬರೀಶ್ ಮಾತ್ರ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಈ ಇಬ್ಬರಿಗಿಂತಲೂ ವಿಭಿನ್ನ. ಇಡೀ ಸ್ಯಾಂಡಲ್‌ವುಡ್ ಇವರಿಗೆ ಮರ್ಯಾದೆ ಕೊಡುತ್ತಿತ್ತು. ಯಾರಿಂದಲೂ ಏನನ್ನೂ ಬೇಡದ, ಬೇರೆಯವರಿಗೆ ಎಲ್ಲವನ್ನೂ ಮಾಡಿಕೊಡುವ ಆ ಒಳ್ಳೆತನವೇ ಅಂಬರೀಶ್ ಅವರನ್ನು ಚಿತ್ರರಂಗದ ಹಿರಿಯಣ್ಣನ ಸ್ಥಾನಕ್ಕೆ ಏರಿಸಿತ್ತು. ಯಾವುದಾದರೂ ಒಂದು ಸಮಸ್ಯೆಗೆ ಅಂಬರೀಶ್ ಪರಿಹಾರ ಹೇಳಿದ್ರು ಅಂದ್ರೆ ಮುಗೀತು. ಯಾರೂ ಉಸಿರೆತ್ತುತ್ತಿರಲಿಲ್ಲ. ಸುಮ್ಮನೆ ‌ಒಪ್ಪಿಕೊಳ್ಳುತ್ತಿದ್ದರು. ಇದೀಗ ಮಳವಳ್ಳಿ‌ ಹುಚ್ಚೇಗೌಡರ ಪುತ್ರ ರತ್ನ ಅಮರನಾಥ, ಅಮರರಾಗಿದ್ದು ಸಮರ್ಥ ನಾಯಕತ್ವ, ದಿಕ್ಕು-ದೆಸೆಯಿಲ್ಲದ ಕನ್ನಡ ಚಿತ್ರರಂಗ ಹೋಳಾಗುವ ಭೀತಿ ಎದುರಸುತ್ತಿದೆ.

ಮೊನ್ನೆ ಮೊನ್ನೆಯಷ್ಟೇ ಚಿತ್ರರಂಗ, ರಾಜಕೀಯ ಸೇರಿದಂತೆ ಎಲ್ಲಾ ಕಡೆ ತನ್ನ ರುದ್ರ ನರ್ತನ ಮಾಡಿದ #MeToo ಪ್ರಕರಣದಲ್ಲಿ (ಶೃತಿ ಹರಿಹರನ್-ಅರ್ಜುನ್ ಸರ್ಜಾ) ಅಂಬರೀಶ್ ಕೊನೆಯ ಸಾರ್ವಜನಿಕ ಸಂಧಾನ ಸಭೆ ನಡೆಸಿದರು. ಅಂಬರೀಶ್ ಅಖಾಡಕ್ಕೆ ಇಳಿದರು ಎಂದ ಮೇಲೆ ಸಮಸ್ಯೆ ಪರಿಹಾರ ಸಿಗುತ್ತೆ ಅನ್ನೋ ಮಾತು ಕನ್ನಡ ಚಿತ್ರರಂಗದಲ್ಲಿ ಮಾಮೂಲಿ. ಸ್ವತಃ ಅಂಬರೀಶ್ ಅವರೇ ಈ ಮಾತನ್ನು ಹಲವಾರು ಬಾರಿ ಹೇಳಿದ್ದರು.‘ನಾವೆಲ್ಲ ಇದ್ದೀವಿ, ಮಾತಾಡಿ ಬಗೆಹರಿಸ್ತೀವಿ. ನಾವೆಲ್ಲ ಏನ್ ಸತ್ತೋಗ್ಬಿಟ್ಟಿದ್ದೀವಾ’ ಎಂದು ರೇಗಿದ ಪ್ರಕರಣಗಳೂ ಸಾಕಷ್ಟಿವೆ. ಅಂದರೆ ಅಂಬರೀಶ್ ಮಾತುಗಳಿಗೆ ಅಷ್ಟು ತಾಕತ್ತು ಇತ್ತು. ಆದರೆ ಅಂಬರೀಶ್‌ ಕೊನೆಯ ಸಂಧಾನಸಭೆ ಮಾತ್ರ ವಿಫಲವಾಗಿ ಹೋಯ್ತು.

ಆದರೆಇದೀಗ ಅಂಬರೀಶ್ ಸ್ಥಾನವನ್ನು ತುಂಬ ಬಲ್ಲವರನ್ನು ಕನ್ನಡ ಚಿತ್ರರಂಗ ಹುಡುಕಬೇಕಿದೆ. ಹಿರಿಯ ನಟರು ಎನಿಸಿಕೊಂಡವರು ಸಾಕಷ್ಟು‌ ಜನರಿದ್ದಾರೆ. ಆದರೆ ಅವರಿಗೆ ಯಜಮಾನಿಕೆ ತೆಗೆದುಕೊಳ್ಳುವ ತಾಕತ್ತು, ಗತ್ತು ಇದೆಯಾ ಅಂದರೆ ಉತ್ತರ ಸ್ವಲ್ಪ ಕಷ್ಟ ಅಂತಲೇ ಬರುತ್ತದೆ. ಒಂದು ವೇಳೆ ಯಾರಾದರೂ ಮುಂದೆ ಬಂದರೂ ಅವರ ಮಾತನ್ನು ಇಡೀ ಚಿತ್ರರಂಗ ಒಪ್ಪುತ್ತದಾ ಅನ್ನೋ ಪ್ರಶ್ನೆ ಇಡೀ ಗಾಂಧಿ ನಗರವನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಸಿಗುತ್ತದಾ ಅನ್ನೋದು ಕೂಡ ಯಕ್ಷಪ್ರಶ್ನೆಯೇ?

Leave a Reply