ಸಾಹಸಸಿಂಹನ ಸ್ಮಾರಕಕ್ಕೆ ಇನ್ನೆಷ್ಟು ಸಾಹಸ ಬೇಕೋ.?!

ಡಿಜಿಟಲ್ ಕನ್ನಡ ಟೀಮ್:

ಸಾಹಸಸಿಂಹ ವಿಷ್ಣುವರ್ಧನ್ ಆತ್ಮ ಅದೆಷ್ಟು ಗೋಳಾಡುತ್ತಿದೆಯೋ ಗೊತ್ತಿಲ್ಲ!

ಕನ್ನಡ ಚಿತ್ರರಸಿಕರ ಹೃದಯ ಸಿಂಹಾಸನ ಗೆದ್ದಿದ್ದ ಈ ಸಾಹಸಸಿಂಹ ನಿಧನರಾಗಿ ಒಂಬತ್ತು ವರ್ಷವಾಗುತ್ತಾ ಬಂದರೂ ಅವರ ಸ್ಮಾರಕ ಮಾತ್ರ ಮೇಲೆದ್ದಿಲ್ಲ. ಅವರು ಮೃತಪಟ್ಟ ದಿನದಿಂದಲೂ ಇವತ್ತಿನವರೆಗೆ ಸ್ಮಾರಕ ನಿರ್ಮಾಣ ಸ್ಥಳ ಆಯ್ಕೆ ವಿಚಾರವೇ ಭಾರತ ಮತ್ತು ಪಾಕಿಸ್ತಾನದ ಗಡಿವಿವಾದಕ್ಕಿಂತಲೂ ದೊಡ್ಡ ಸಮಸ್ಯೆಯಾಗಿ ಕುಳಿತಿದೆ. ತ್ರಿಶಂಕು ಸ್ವರ್ಗ ಸ್ಥಿತಿಯಲ್ಲೇ ಇರುವ ಸ್ಮಾರಕ ನಿರ್ಮಾಣ ವಿಚಾರ ಸರಕಾರ ಮತ್ತು ಕುಟುಂಬ ಸದಸ್ಯರ ನಡುವೆ ವಿರಸವೆಂಬ ವಿಷಬೀಜ ಬಿತ್ತಿದೆ.

ಅಭಿಮಾನ್ ಸ್ಟುಡಿಯೋ, ಎದುರಿನ ಅರಣ್ಯ ಪ್ರದೇಶ, ಬೆಂಗಳೂರು, ಮೈಸೂರು ಸುತ್ತ ಇನ್ನೂ ಗಿರಕಿ ಹೊಡೆಯುತ್ತಲೇ ಇರುವ ಸ್ಮಾರಕ ನಿರ್ಮಾಣ ವಿಚಾರ ಪ್ರತಿವರ್ಷ ವಿಷ್ಣುವರ್ಧನ್ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆ ದಿನದಂದು ಮಿಂಚುಹುಳುವಿನಂತೆ ಮಿನುಗಿ ಮಾಯವಾಗುತ್ತಿತ್ತು. ಅವತ್ತು ಆ ಬಗ್ಗೆ ಒಂದಷ್ಟು ಮಾತುಕತೆ, ಚರ್ಚೆ ಆಗುತ್ತಿದ್ದುದನ್ನೂ ಬಿಟ್ಟರೆ ಮತ್ತೆ ಆ ವಿಚಾರ ಮತ್ತೆ ವಿಷ್ಣು ಸಮಾಧಿ ಸೇರುತ್ತಿತ್ತು. ಮತ್ತೆ ಒಂದು ವರ್ಷದವರೆಗೆ ವಿಚಾರ ವಿಶ್ರಾಂತಿ.

ಇದೀಗ ವಿಷ್ಣವರ್ಧನ್ ಸಮಕಾಲೀನ ಹಿರಿಯ ನಟ ಅಂಬರೀಶ್ ಅವರ ನಿಧನ ಸಂದರ್ಭದಲ್ಲಿ ಮತ್ತೆ ಈ ವಿಚಾರ ಸಮಾಧಿಯಿಂದ ಮೇಲೆದ್ದು ಬಂದಿದೆ. ಸರಕಾರ ನೀರಿಗೆಳೆದರೆ, ವಿಷ್ಣುವರ್ಧನ್ ಕುಟುಂಬದವರು ಏರಿಗೆಳೆಯುತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿಯವರು ಮತ್ತೊಂದು ದಾರಿಗೆ ಎಳೆಯುತ್ತಿದ್ದಾರೆ. ಹೀಗಾಗಿ ಈಗಲೂ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಬದಲಿಗೆ ವಿವಾದವನ್ನು ಮತ್ತಷ್ಟು ಬಗ್ಗಡ ಮಾಡಿಟ್ಟಿದೆ.

ಭಾರತಿ ವಿಷ್ಣುವರ್ಧನ್ ಅವರು ಚನ್ನಸಂದ್ರ-ಕೆಂಗೇರಿ ನಡುವಣ ಮತ್ತೊಬ್ಬ ಹಿರಿಯ ನಟ ದಿವಂಗತ ಬಾಲಕೃಷ್ಣ ಅವರ ಕುಟುಂಬ ವರ್ಗದವರಿಗೆ ಸೇರಿದ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣವಾಗಬೇಕೆಂದರೆ, ಅದಕ್ಕೆ ವ್ಯತಿರಿಕ್ತವಾಗಿ ಅಳಿಯ ಅನಿರುದ್ಧ ಮೈಸೂರಿನಲ್ಲಿ ನಿರ್ಮಿಸಿ ಎನ್ನುತ್ತಿದ್ದಾರೆ. ಆಡಳಿತ ಪಕ್ಷದವರು ಜಾಗ ನಿಶ್ಚಯ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದರೆ, ಪ್ರತಿಪಕ್ಷ ಬಿಜೆಪಿ ನಾಯಕ ಯಡಿಯೂರಪ್ಪನವರು ರಾಜಕುಮಾರ್, ಅಂಬರೀಶ್ ಸ್ಮಾರಕದ ಜತೆಗೆ ಕಂಠೀರವ ಸ್ಟುಡಿಯೋದಲ್ಲಿ ಮಾಡಿ. ಮೂವರೂ ಕನ್ನಡದ ಪ್ರಖ್ಯಾತ ನಟರು. ಅಲ್ಲಿ ಸ್ಮಾರಕ ನಿರ್ಮಾಣ ಮಾಡುವುದರಿಂದ ವಿಷ್ಣುವರ್ಧನ್ ಅವರಿಗೂ ನ್ಯಾಯ ಒದಗಿಸಿದಂತಾಗುತ್ತದೆ ಎನ್ನುತ್ತಿದ್ದಾರೆ. ಇನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರು ಭಾರತಿ ವಿಷ್ಣುವರ್ಧನ್ ಕುಟುಂಬ ಸದಸ್ಯರು ಹಾಗೂ ಸರಕಾರ ಸಮಾಲೋಚನೆ ನಡೆಸಿ ಸ್ಥಳ ಆಯ್ಕೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಈ ಮಧ್ಯೆ, ಭಾವೋದ್ವೇಗಕಕ್ಕೆ ಒಳಗಾಗಿರುವ ಅನಿರುದ್ಧ ಅವರು ಸರಕಾರ ಇನ್ನು ವಿಳಂಬ ಮಾಡಿದರೆ ವಿಷ್ಣುವರ್ಧನ್ ಅಭಿಮಾನಿಗಳು ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ. ಸರಕಾರದ ಮೇಲೆ ಸಿಡಿದು ಬೀಳಬೇಕಾಗುತ್ತದೆ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂಥ ದರ್ಪ, ದೌಲತ್ತಿನ ಮಾತುಗಳಿಂದ ಏನೂ ನಡೆಯುವುದಿಲ್ಲ. ಶಾಂತಿಭಂಗ ಮಾತುಗಳನ್ನು ಸಹಿಸುವುದಿಲ್ಲ. ಸ್ಮಾರಕ ಎಲ್ಲಿ ನಿರ್ಮಿಸಬೇಕು ಎನ್ನುವ ವಿಚಾರದಲ್ಲಿ ಅವರ ಕುಟುಂಬ ಸದಸ್ಯರಲ್ಲೇ ಒಮ್ಮತ ಇಲ್ಲ. ಸಹನೆಯಿಂದ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆ ಎಂದು ಹೇಳಿದ್ದಾರೆ. ಅಲ್ಲಿಗೆ ವಿಷ್ಣುವರ್ಧನ್ ಸ್ಮಾರಕ ವಿಚಾರ ಶುರುವಾದ ಜಾಗವನ್ನೇ ಬಂದು ತಲುಪಿದೆ. ಅಂಬರೀಶ್ ನೆಪದಲ್ಲಾದರೂ ಈ ವಿಚಾರಕ್ಕೆ ಅಂತಿಮ ತೆರೆ ಬೀಳುವುದೇ ಕಾಯ್ದು ನೋಡಬೇಕಿದೆ.

Leave a Reply