ಸಿಎಂ ಕುಮಾರಸ್ವಾಮಿ ಅವರನ್ನು ಅಂಬಿ ಕೊನೆವರೆಗೂ ಯಾಕೆ ಕಾಡುತ್ತಾರೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

‘ಸ್ನೇಹಿತನಾಗಿ, ಅಣ್ಣನಾಗಿ, ತಂದೆಯಾಗಿದ್ದರು ಅಂಬಿ…’ ಇದು ಸಿಎಂ ಕುಮಾರಸ್ವಾಮಿ ಅವರು ದಿವಂಗತ ಅಂಬರೀಶ್ ಅವರಿಗೆ ಸಲ್ಲಿಸಿದ ನುಡಿ ನಮನ.

ಶುಕ್ರವಾರ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಕನ್ನಡ ಚಿತ್ರೋದ್ಯಮದ ಗಣ್ಯರು ಕಲಾವಿದರು ತಂತ್ರಜ್ಞರು ನಿರ್ದೇಶಕರು ಸೇರಿದಂತೆ ಪ್ರಮುಖ ರಾಜಕೀಯ ನಾಯಕರುಗಳು ಭಾಗಿಯಾಗಿ ಅಜಾತಶತ್ರುವಿಗೆ ತಮ್ಮ ನುಡಿ ನಮನ ಅರ್ಪಿಸಿದರು. ಈ ವೇಳೆ ಕುಮಾರಸ್ವಾಮಿ ಹೇಳಿದ್ದಿಷ್ಟು….

‘ಸ್ನೇಹಿತನಾಗಿ, ಅಣ್ಣನಾಗಿ, ತಂದೆಯಾಗಿದ್ದರು ಅಂಬಿ. ಅವರು ಎಲ್ಲಿದ್ದರೂ ಚೆನ್ನಾಗಿ ಇರ್ಲಿ.
ಅವರಿಗೊಂದು ಆಸೆಯಿತ್ತು. ಅಭಿ ಮೊದಲ ಸಿನಿಮಾ ನೋಡುವ ಕನಸಿತ್ತು. ಅಭಿ ಮೇಲೆ ನಿಮ್ಮ ಆಶೀರ್ವಾದ ಇರಲಿ.
ಸ್ನೇಹ ಅಂದರೆ ಏನು ಅಂತಾ ನನಗೆ ಗೊತ್ತಾಗಿದ್ದು ಅಂಬಿಯಿಂದ.
ಅವರ ಅಂತಿಮ ಸಂಸ್ಕಾರವು ನನ್ನ ಸಂದರ್ಭದಲ್ಲಿ ಆದದ್ದು, ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ. ಅವ್ರ ಅಂತ್ಯಕ್ರಿಯೆ ವ್ಯವಸ್ಥಿತವಾಗಿ ನಡೆಯಿತು.ಡಾ ರಾಜ್ ಸಂದರ್ಭದಲ್ಲಿ ಈ ರೀತಿ ಆಗಿರಲಿಲ್ಲ. ಅಂಬಿ ಒರಟುತನ ಅವ್ರ ಮಂಡ್ಯದ‌ ಮಣ್ಣಿನಿಂದ ಬಂದದ್ದು. ನೋಡೋಕೆ ಒರಟು ಆದ್ರು ಒಳಗೆ ತುಂಬಾ ಮೃದು. ಅವ್ರ ಎದುರು ನಿಂತ್ರೆ ಸಾಕು ಎಂತಹ ಕಲ್ಲು ಹೃದಯವೂ ಕರಗುತ್ತಿತ್ತು. ಒಂದು ರೀತಿಯ ಐಯಸ್ಕಾಂತದ ಹಾಗೆ ಎಲ್ಲರನ್ನ ಸೆಳೆಯುತ್ತಿದ್ರು.
ಅವ್ರ ಹುಟ್ಟು ಗುಣ ಅವ್ರು ಬಿಡಲಿಲ್ಲ. ಯಾವುತ್ತೂ ಕಾಂಪ್ರಮೈಸ್ ಆಗದ ವ್ಯಕ್ತಿ. ಒಂದು ಅಪರೂಪದ ವ್ಯಕ್ತಿತ್ವ ಅಂಬಿಯದ್ದು. ಅಂತಿಮ ಸಂಸ್ಕಾರದಲ್ಲಿ ಮಂಡ್ಯ ಜನತೆ ಸಹಕಾರ ನೀಡಿದ್ರು ಅವರಿಗೂ ಹಾಗು ಅವ್ರ ಅಭಿಮಾನಿಗಳಿಗೂ ನನ್ನ ಕೃತಜ್ಞತೆ.
ಅಂಬರೀಶ್ ಜೊತೆ ನನ್ನ ಮಗನ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದ್ರೆ ನೆರವೇರಲಿಲ್ಲ. ತೆಲುಗು ರೆಬಲ್ ಸಿನಿಮಾವನ್ನ‌ ಕನ್ನಡದಲ್ಲಿ ಮಾಡಬೇಕು. ಅದ್ರಲ್ಲಿ ಅಂಬಿ ಹಾಗು‌ ನಿಖಿಲ್ ಮಾಡಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಚಿತ್ರದ ರೈಟ್ಸ್ ಪಡೆದುಕೊಂಡಿದ್ದೆ. ಆದ್ರೆ ಅದು ಕೊನೆಗೂ ನೆರವೇರಲಿಲ್ಲ. ಆ ಕೊರಗು ನನ್ನನ್ನ‌ ಕಾಡುತ್ತೆ. ವಿಶೇಷ ಹಾಗು ಬಹಳ ಅಪರೂಪದ ವ್ಯಕ್ತಿ. ಇವತ್ತು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದ್ರೆ ನೆನಪಿನಲ್ಲಿ ನಮ್ಮ‌ ಜೊತೆ ಇದ್ದಾರೆ. ಆ ಭಗವಂತ ಅವ್ರ ಆತ್ಮಕ್ಕೆ ಶಾಂತಿ‌ ನೀಡಲಿ.
ಹಾಗೆ ನನ್ನ‌ ಸಹೋದರಿ ಸುಮಲತಾ ಗೆ ನೋವನ್ನ ಭರಿಸೋ‌ ಶಕ್ತಿ ನೀಡಲಿ. ಅಭಿಷೇಕ್ ನಲ್ಲಿ ಅಂಬಿಯನ್ನ ಕಾಣೋಣ.

ರಾಜಕೀಯ ಜೀವನಕ್ಕೆ‌ ನಾನು ಬರುವುದಕ್ಕೂ ಮುನ್ನ ಅವ್ರು ನನಗೆ ಪರಿಚಯ. ಅವ್ರು ಯಾರಿಗೂ ದಾರಿ ತಪ್ಪಿಸುತ್ತಿರಲಿಲ್ಲ‌. ಒಳ್ಳೆ ಸಲಹೆ ನೀಡುತ್ತಿದ್ರು. ಸಾವಿಗೂ ಒಂದು ವಾರದ ಮುಂಚೆ‌ ನನಗೆ ಪೋನ್ ಮಾಡಿ ಆರೋಗ್ಯ‌ ಸರಿಯಾಗಿ ನೋಡ್ಕೋ ಎಂದು ಹೇಳಿದ್ರು ಆಗ ನಾನು ನಿಮ್ಮ ಆರೋಗ್ಯ ಚೆನ್ನಾಗಿ‌ ನೋಡಿಕೋ ಎಂದಿದ್ದೇ. ಆಗ ಅಂಬಿ ನಂದು ಬಿಡಿ ಎಲ್ಲ ಮುಗೀತು ಎಂದಿದ್ರು.
ಎಲ್ಲ‌‌ ಕೆಲಸವನ್ನು ತುಂಬಾ ಪ್ರೀತಿಯಿಂದ ಮಾಡಬೇಕು. ನನಗೆ ಯಾರ ಮೇಲೂ ವೈಯಕ್ತಿಕ‌ ದ್ವೇಷ ಇಲ್ಲ. ಅಂಬಿ, ವಿಷ್ಣು. ನಾನು‌ ಒಟ್ಟಿಗೆ ಊಟ ಮಾಡಿದ್ದೀವಿ. ಅದನ್ನೆಲ್ಲ ಮರೆತಿಲ್ಲ.’

ಮಾಜಿ ಸಿಎಂ ಸಿದ್ದರಾಮಯ್ಯ:
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ‌ ಒಳ್ಳೆಯ‌ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಎಲ್ಲರಿಗೂ ಅಂಬಿಯನ್ನು‌ ನೆನೆಯೋ ಅವಕಾಶ ಕಲ್ಪಿಸಿದ್ದಾರೆ.
ಅಂಬಿಯನ್ನು ಬಹಳ ವರ್ಷಗಳಿಂದ ಹಾಗು ಹತ್ತಿರದಿಂದ ನೋಡಿದ್ದೀನಿ.
ನನಗೆ 1973ರಲ್ಲಿ ಅಂಬಿ ನನಗೆ ಹೋಟೇಲ್ ಒಂದರಲ್ಲಿ ಪರಿಚಯವಾದ್ರು, ಆಗ ನಾನು ವಕೀಲನಾಗಿದ್ದೆ.
ಆತನ ಮಾತು ಒರಟು ಆದ್ರೆ ಆತನ‌ಜೊತೆ ಸಮಯ‌ ಕಳೆದ್ರೆ ಗೊತ್ತಾಗುತ್ತೆ ಆತ ಎಷ್ಟು‌ ಮೃದು ಮನಸ್ಸಿನವರು ಎಂದು. ಸ್ನೇಹಜೀವಿಯಾಗಿದ್ದ ಅವ್ರು ಎಲ್ಲರನ್ನೂ‌ ಒಂದೇ ರೀತಿ‌ ನೋಡುತ್ತಿದ್ರು. ಅಂತಹ ಗುಣ ಎಲ್ಲರಿಗೂ ಬರೋದಿಲ್ಲ.

ಉಮಾಶ್ರೀ:
ಅಪ್ರತಿಮ ಹೃದಯವಂತ ಅಂಬಿ. ಹುಡುಗಾಟದ ವ್ಯಕ್ತಿತ್ವ ಹಿಂದೆ ಅದೆಷ್ಟೋ ಅಳವಡಿಸಿಕೊಳ್ಳೋ‌‌ ವಿಚಾರಗಳಿದ್ವು. ಮಾನವೀಯತೆಯ ಸಹಕಾರ‌ಮೂರ್ತಿ. ಸಂಪೂರ್ಣ ಮನುಷ್ಯನಾಗಿ‌ ಬದುಕಿ ಹೋಗಿದ್ದಾರೆ. ಅವ್ರ ಜೊತೆ‌ ನಾನು ನಟಿಸಿದ್ದೇನೆ .ಅವ್ರಿಂದ‌ ನಾನು ಕಲಿತಿದ್ದು ಪ್ರೀತಿಯನ್ನ. ಬೇರೆಯವರನ್ನ ಹೇಗೆ ಪ್ರೀತಿಸಬೇಕು ಎಂಬುದು ಆತನಿಗೆ ತಿಳಿದಿತ್ತು. ದ್ವೇಷ ಅನ್ನೋದು‌ ಜೀವನಕ್ಕೆ ಒಳ್ಳೇಯದಲ್ಲ ಎಂದು ತೋರಿಸಿಕಟ್ಟವರು. ಅವ್ರು ಇದ್ದಲ್ಲಿ ನಗು, ತರಲೆ, ಹುಡುಗಾಟ ಇತ್ತು. ಬಡವ ಶ್ರೀಮಂತ ಎಂಬ ಭೇದ ಇರಲಿಲ್ಲ. ಸಮಾನತೆಯಿಂದ ಎಲರನ್ನ‌‌ ಕಾಣುತ್ತಿದ್ರು.

ದಿನೇಶ್ ಗುಂಡೂರಾವ್:
ಅಂಬರೀಶ್ ಅವರು ಜೀವನಕ್ಕಿಂತ ದೊಡ್ಡ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಅವರು ನೇರ ನುಡಿಯ ಸ್ನೇಹ ಜೀವಿ. ಅವರ ಪ್ರತಿಭೆ ಅಪಾರವಾದುದು. ಅವರ ವ್ಯಕ್ತಿತ್ವವೇ ಅವರು ಈ ಮಟ್ಟಕ್ಕೆ ಬೆಳೆಯಲು ಕಾರಣ. ರಾಜಕಾರಣದಲ್ಲಿ ಕೇಂದ್ರ ಸಚಿವರಾಗಿ, ರಾಜ್ಯ ಸಚಿವರಾಗಿ ಜನಪ್ರಿಯರಾದರು. ರಾಜಕಾರಣದಲ್ಲಿ ಇನ್ನೂ ಎತ್ತರಕ್ಕೆ ಏರಬಹುದಿತ್ತು. ಆದರೆ ಅವರ ನೇರ ನಡೆ ಅವರಿಗೆ ರಾಜಕಾರಣದಲ್ಲಿ ಸ್ವಲ್ಪ ತೊಡಕಾಯ್ತೇನೋ ಎನಿಸುತ್ತದೆ. ಆದರೆ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಾನು ಇರೋದೆ ಹೀಗೆ ಎನ್ನುತ್ತಿದ್ದರು. ಅವರ ನೆನಪು ಸದಾ ನಮ್ಮೊಂದಿಗಿರುತ್ತದೆ. ದೇಶದಲ್ಲೆಡೆ ಅವರನ್ನು ಹಲವುರು ನೆನೆಯುತ್ತಿದ್ದಾರೆ.

ಮುನಿರತ್ನ:
ಕಲಾವಿದರು ವಿಧಿವಶರಾದಾಗ ಈ ರೀತಿ ರಾಜ್ಯಸರ್ಕಾರ ಮುಂದೆ ನಿಂತು ಅವರೆ ಜಾಗ ಕೊಟ್ಟು ಗೌರವದಿಂದ ಅಂತ್ಯಸಂಸ್ಕಾರ ಮಾಡಿರುವುದು ಇದೇ ಮೊದಲು. ನನ್ನ ಸಿನಿಮಾ ಅವರ ಕೊನೆ ಸಿನಿಮಾ ಆಗಬಹುದೆಂದು ನಾನು ಊಹಿಸಿರಲಿಲ್ಲ. ಅವರು ಆ ಪಾತ್ರ ಮಾಡಲಾಗುವುದಿಲ್ಲ ಎಂದಿದ್ದರು. ಕೊನೆಗೆ ಒಂದು ತಿಂಗಳು ಸಮಯ ತೆಗೆದುಕೊಂಡು ಒಪ್ಪಿಕೊಂಡರು.

Leave a Reply