ರೈತರ ಮುಷ್ಕರ: ಸುಲಭ ಉದ್ಯಮ ಜತೆಗೆ ಸುಲಭ ಕೃಷಿಗೂ ಗಮನಹರಿಸಿ, ಮೋದಿಗೆ ಗೌಡರ ಬುದ್ಧಿಮಾತು

ಡಿಜಿಟಲ್ ಕನ್ನಡ ಟೀಮ್:

ಸಾಲ ಮನ್ನಾ, ಬೆಂಬಲ ಬೆಲೆ ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ದೆಹಲಿಯಲ್ಲಿ ನಡೆದ ಎರಡು ದಿನಗಳ ಪ್ರತಿಭಟನೆಗೆ ಸಾಥ್ ನೀಡಿದ ವಿರೋಧ ಪಕ್ಷಗಳು ಒಟ್ಟಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಮಧ್ಯೆ ಕೇವಲ ಉದ್ಯಮಗಳತ್ತ ಮಾತ್ರವಲ್ಲದೆ ಕೃಷಿ ಕ್ಷೇತ್ರದತ್ತಲೂ ಗಮನ ಹರಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಮೋದಿಗೆ ಬುದ್ಧಿವಾದ ಹೇಳಿದ್ದಾರೆ.

ಪ್ರತಿಭಟನೆಯ ಎರಡನೇ ದಿನವಾದ ಶುಕ್ರವಾರ ಸಾವಿರಾರು ರೈತರು ಸಂಸತ್ ರಸ್ತೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ತಮಿಳುನಾಡಿನಿಂದ ಆಗಮಿಸಿದ್ದ ಸಾವಿರಾರು ರೈತರಲ್ಲಿ ಕೆಲವರು ತಮ್ಮ ಬಟ್ಟೆ ತೆಗೆದು ತಲೆ ಬುರುಡೆ ಹಾಗೂ ಅಸ್ತಿಪಂಜರದ ಮೂಳೆಗಳಿಂದ ತಮ್ಮ ಅಂಗಾಂಗ ಮುಚ್ಚಿ ಪ್ರತಿಭಟನೆ ನಡೆಸಿದರು. ಇನ್ನು ಕೆಲವರು ಡೈರಿ ಉತ್ಪನ್ನಗಳನ್ನು ಹಿಡಿದು ಪ್ರತಿಭಟನೆ ನಡೆಸಿದರೆ, ರೈತ ಮಹಿಳೆಯರು ಸಾಲ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ತಮ್ಮ ಪತಿಯರ ಫೋಟೋ ಹಿಡಿದು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಪ್ರತಿಭಟನಾ ನಿರತ ರೈತರನ್ನು ವಿರೋಧ ಪಕ್ಷಗಳ ನಾಯಕರು ಸಾಲು ಸಾಲಾಗಿ ಭೇಟಿ ಮಾಡಿ ಕೇಂದ್ರದ ವಿರುದ್ಧ ಗುಡುಗಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಪ್ರಧಾನಿ ನರೇಂದ್ರ ಮೋದಿಯವರು ದೇಶದ ಯುವಕರು ಹಾಗೂ ರೈತರನ್ನು ಕಡೆಗಣಿಸಿದ್ದಾರೆ. ಮೋದಿ ಅವರು ಉದ್ಯಮಿಗಳ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರ ಸಾಲ ಮನ್ನಾ ವಿಚಾರ ಬಂದರೆ ಮೌನ ವಹಿಸುತ್ತಾರೆ. ಕೈಗಾರಿಕೆಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ ರೈತರ ಸಾಲ ಏಕೆ ಮನ್ನಾ ಮಾಡುತ್ತಿಲ್ಲ? ಈ ದೇಶ ಯಾವುದೋ ಒಬ್ಬ ವ್ಯಕ್ತಿ ಅಥವಾ ಪಕ್ಷದಿಂದ ನಡೆಯುತ್ತಿಲ್ಲ. ಬದಲಿಗೆ ದೇಶದ ರೈತರು ಹಾಗೂ ಯುವಕರಿಂದ ನಡೆಯುತ್ತಿದೆ’ ಎಂದರು.

ಇನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಟ್ವಿಟ್ಟರ್ ಮೂಲಕ ಕೇಂದ್ರದ ವಿರುದ್ಧ ಟೀಕೆ ಮಾಡಿದ ಗೌಡರು ಹೇಳಿದ್ದಿಷ್ಟು…

‘ಸುಲಭ ಉದ್ಯಮ’ ಸೂಚ್ಯಂಕದಲ್ಲಿ ಭಾರತ ಉತ್ತಮ ಸ್ಥಾನಗಳಿಸಿ ಮೇಲಕ್ಕೆ ಬಂದಿದೆ ಎಂಬುದನ್ನು ಮೋದಿ ಸರ್ಕಾರ ಮತ್ತು ಬಿಜೆಪಿ ಭಾರಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ ಭಾರತ ‘ಸುಲಭ ಉದ್ಯಮ’ದ ಜೊತೆಗೆ ‘ಸುಲಭ ಕೃಷಿ’ಯಲ್ಲಿ ಸಾಧನೆ ಮಾಡಬೇಕು ಎಂಬುದು ಅತೀ ಮುಖ್ಯ ಸಂಗತಿ. ಭಾರತ ಮೂಲತಃ ಕೃಷಿ ಪ್ರಧಾನ ದೇಶ. ‘ಸುಲಭ ಕೃಷಿ’ ಕಡೆಗೂ ಗಮನ ಹರಿಸಿದರೆ ಆಹಾರ, ಉದ್ಯೋಗ, ಗ್ರಾಮೀಣಾಭಿವೃದ್ಧಿ ಎಲ್ಲವೂ ಸಾಧ್ಯ‌. ಸುಲಭ ಉದ್ಯಮ ಸ್ನೇಹಿ ವಾತಾವರಣ ಕಡೆಗಷ್ಟೇ ಗಮನಕೊಟ್ಟರೆ ಉದ್ಯಮಿಗಳಿಗಷ್ಟೇ ಅನುಕೂಲ‌. ರೈತರ ಬೆಳೆ ಸಾಲ ಮನ್ನಾ ಮೂಲಕ ಕರ್ನಾಟಕ ಸುಲಭ ಕೃಷಿಯ (Ease of Doing Agriculture) ಕಡೆಗೆ ಸಾಗುತ್ತಿದೆ. ಪ್ರಧಾನಿ ಮೋದಿ ಅವರಿಗೆ ಕರ್ನಾಟಕ ಮಾದರಿಯಾಗಲಿ. ಅದೇ ಹೊತ್ತಿನಲ್ಲಿ ಸಾಲ ಮರು ಪಾವತಿಗಾಗಿ ರೈತರಿಗೆ ನೋಟಿಸ್ ಕೊಡುತ್ತಿರುವ ದೇಶದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರಧಾನಿ ಬುದ್ಧಿ ಹೇಳಲಿ.’

Leave a Reply