ಅವರನ್ನು ಗಂಡ ಎನ್ನಲೋ, ಗೆಳೆಯ ಎನ್ನಲೋ, ತಂದೆ ಎನ್ನಲೋ: ಅಂಬಿ ಗುಣಗಾನ ಮಾಡುತ್ತಾ ಕಣ್ಣೀರಿಟ್ಟ ಸುಮಲತಾ

ಡಿಜಿಟಲ್ ಕನ್ನಡ ಟೀಮ್:

ಕಲಿಯುಗ ಕರ್ಣ ದಿವಂಗತ ಅಂಬರೀಶ್ ಅವರಿಗೆ ಇಂದು ಚಂದನವನ ನಮಿಸಿದೆ.

ಶುಕ್ರವಾರ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಕನ್ನಡ ಚಿತ್ರೋದ್ಯಮದ ಗಣ್ಯರು ಕಲಾವಿದರು ತಂತ್ರಜ್ಞರು ನಿರ್ದೇಶಕರು ಸೇರಿದಂತೆ ಪ್ರಮುಖ ರಾಜಕೀಯ ನಾಯಕರುಗಳು ಭಾಗಿಯಾಗಿ ಅಜಾತಶತ್ರುವಿಗೆ ತಮ್ಮ ನುಡಿ ನಮನ ಅರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಪತ್ನಿ ಸುಮಲತಾ ಹಿರಿಯ ನಟ ಜಗ್ಗೇಶ್ ಶಿವರಾಜಕುಮಾರ್ ಹಿರಿಯ ನಟಿ ಜಯಂತಿ ಬಿ ಸರೋಜಾದೇವಿ ಸಿಎಂ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಅಂಬಿಯ ಗುಣಗಾನ ಮಾಡಿದರು. ಅಂಬರೀಷ್ ಜೀವನ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಈ ಗಣ್ಯರು ಹೇಳಿದ್ದಿಷ್ಟು….

ಸುಮಲತಾ:
ಅವರನ್ನ ನಟರಾಗಿ‌ ಮೇರು ನಟನಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟ‌ ನಿರ್ದೇಶಕರು. ಕಲಾವಿದರು ಹಾಗೂ ಅವ್ರ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ಭಗವದ್ಗೀತೆ ಯಲ್ಲಿ ಹೇಳಿದಂತೆ ಬರುವಾಗ ಎನೂ ತರೋದಿಲ್ಲ ಹೋಗುವಾಗ ಏನು ತರೋದಿಲ್ಲ. ಆದ್ರೆ ಅಂಬರೀಶ್ ಹೋಗುವಾಗ ಕೋಟ್ಯಾಂತರ ಹೃದಯದಲ್ಲಿ ನೆಲೆಸಿ ಹೋಗಿದ್ದಾರೆ. ಅವರನ್ನು ಗಂಡ ಎನ್ನಲೋ, ಗೆಳೆಯ ಎನ್ನಲೋ, ತಂದೆ ಎನ್ನಲೋ. ಅಂಬಿ ಬಗ್ಗೆ ನಾನು ಏನು ಅಂತ ಹೇಳಲಿ. ನನ್ನ ಬಳಿ ಪದಗಳಿಲ್ಲ. ತಂದೆಯಾಗಿ ಮಗನಾಗಿ ನಟನಾಗಿ ಸಮಾಜಸೇವಕನಾಗಿ, ಗಂಡನಾಗಿ ಎಲ್ಲ ರೀತಿಯೂ ಅವ್ರು ತುಂಬು ಬದುಕು‌ ನಡೆಸಿದ್ರು. ಕೊನೆವರೆಗೆ‌ ಮನುಷ್ಯ ನಾಗಿ ಬದುಕಿದ್ರು. ರಾಜನ ಹಾಗೆ ಬಾಳಿ ಬದುಕಿದ್ರು. ಅವ್ರ ಅಂತಿಮ ಯಾತ್ರೆಯಲ್ಲೂ ಅವರನ್ನ ರಾಜನಾಗಿಯೇ ಕಳಿಸಿಕೊಟ್ಟಿದ್ದಾರೆ. ಇದಕ್ಕೆ ಸಿಎಂ‌ ಕುಮಾರಸ್ವಾಮಿಗೆ ಧನ್ಯವಾದ ಹೇಳುತ್ತೇನೆ. ಪೋಲೀಸ್ ಇಲಾಖೆಗೂ, ಮಾಧ್ಯಮಕ್ಕೆ ಎಲ್ಲರಿಗೂ ಧನ್ಯವಾದ. ಅವರು ನನ್ನ ಅಂಬರೀಶ್ ಆಗಿರದೇ ಎಲ್ಲರ ಪ್ರೀತೀಯ ಅಂಬರೀಷ್ ಆಗಿದ್ರು. ಅವರಿಗೆ‌ ಅಭಿಷೇಕ್‌ ಮೊದಲ ಸಿನಿಮಾ‌ ನೋಡಬೇಕು ಎಂಬ ಆಸೆ ಇತ್ತು. ಅಭಿಷೇಕ್ ಮೇಲೆ ನಿಮ್ಮ ಸಹಕಾರ ಇರಲಿ.

ಜಗ್ಗೇಶ್:
ಅಂಬರೀಶ್ ಗೆ ಯಾವ ರಾಜನಿಗೂ ಸಿಗದ ಯೋಗ ಇತ್ತು. ಯಾರಿಗೂ ನೋವು ಕೊಡದೆ ನಿರ್ಗಮಿಸಿದ್ರು. ನನಗೆ ನಾಯಕನಾಗು ಎಂದು ಹುರಿದುಂಬಿಸಿದವ್ರು ಅಂಬಿ. ಕಲಾವಿದರರ ಸಂಘ ನಿರ್ಮಾಕ್ಕೆ ಟೊಂಕ‌ಕಟ್ಟಿ ನಿಂತವರು ಅಂಬಿ ಹಾಗು ರಾಕ್ ಲೈನ್ ವೆಂಕಟೇಶ್. ರಾಕ್ ಲೈನ್ ನಂತ ತಮ್ಮ ಅಂಬಿಗೆ ಮತ್ತೊಬ್ಬ ಸಿಗಲ್ಲ. ಅಭಿಷೇಕ್ ನಾವೆಲ್ಲರೂ ನಿನ್ನ‌ ಜೊತೆ ಇದ್ದೇವೆ. ಅಂಬಿಗೆ ಅವ್ರ ಮಗನ ಸಿನಿಮಾ ನೋಡಬೇಕು ಎಂಬ ಆಸೆ ಇತ್ತು‌. ಆಗಲಿಲ್ಲ. ಎಲ್ಲರೂ ಅಭಿಷೇಕ್ ಪರವಾಗಿ ನಿಲ್ಲಿ. ಅಂಬಿ ಸ್ಥಾನಕ್ಕೆ‌ ಅಭಿಯನ್ನ ಕೂರಿಸಿ. ಆತನನ್ನು‌ ಸಿನಿಮಾರಂಗದಲ್ಲಿ‌ ಬೆಳೆಸಿ.

ಶಿವರಾಜ್ ಕುಮಾರ್:
ಅಂಬಿ‌ಮಾವ ಗುಣ ಯಾರಿಗೂ ಬರಲ್ಲ. ಅಪ್ಪಾಜಿ ಹಾಗೂ ಅಂಬಿ ಮಾಮನ‌ ಒಡನಾಟ‌ ಹತ್ತಿರದಿಂದ‌ ಕಂಡಿದ್ದೇವೆ. ಅವ್ರ ಜೊತೆ‌ ಕಳೆದ ದಿನಗಳು‌ ಎಂದಿಗೂ ಮರೆಯಲ್ಲ. ಚಿತ್ರರಂಗದ ಕೊಂಡಿಯಾಗಿದ್ರು. ಚಿತ್ರರಂಗದಲ್ಲಿ ಯಾವುದೇ ಕಾರ್ಯಕ್ರಮ ಆದ್ರೂ ನನ್ನನ್ನು‌ ಫೋನ್ ಮಾಡಿ‌ ಕರೆಯೋರು. ನಾವೆಲ್ಲರೂ ಸುಮಲತಾ ಹಾಗು ಅಭಿ ಜೊತೆ ಇರ್ತೀವಿ. ಅವ್ರ ಗುಣಗಳನ್ನು‌ ನಾವೆಲ್ಲರೂ ಅಳವಡಿಸಿಕೊಳ್ಳೋಣ.

ಬಿ.ಸರೋಜಾದೇವಿ:
ಆತ ದಾನಶೂರ ಕರ್ಣ. ಕಲಾವಿದರಿಗಾಗಿ ಅಂಬಿ ಅದ್ಭುತವಾದ ಕಲಾವಿದರ ಸಂಘ ಕಟ್ಟಿದ್ದಾರೆ. ಕಲಾವಿದರ ಸಂಘದ ಮುಂದೆ ಅಂಬಿ ಸ್ಟ್ಯಾಚು ಆಗಬೇಕು. ನನಗೇನು ಸಮಸ್ಯೆ ಆದರೆ ಆತನೇ ಮನೆಗೆ ಬರ್ತಿದ್ದ‌. ಅಂಬಿ ಇಲ್ಲದೇ ಚಿತ್ರರಂಗ, ಬೆಂಗಳೂರು ಡಲ್ ಆಗಿದೆ.

ಜಯಂತಿ:
ನನ್ನ ಹಾಗು ಅಂಬಿಯದ್ದು ನಲವತ್ತು ವರ್ಷಗಳ ಸ್ನೇಹ. ನನ್ನ ತಾಯಿಗೆ ಅಂಬಿ ಅಂದ್ರೆ ತುಂಬಾ ಇಷ್ಟ. ಅಮ್ಮ ಅಂಬಿಯನ್ನ ಸ್ವಂತ ತಮ್ಮ ಅಂತ ಕರಿತಾ ಇದ್ರು. ಬಾರೋ ಹೋಗೋ ಅಂತನೇ ಮಾತನಾಡ್ತ ಇದ್ವಿ. ಏನು ಅವಸರ ಇತ್ತೋ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ. ನನಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ‌. ಕೂತ್ರು ಎದ್ರು ನಿಂತ್ರು ಅವನ ನೆನಪು ಇರುತ್ತೆ‌. ಎಲ್ಲರ ಆರ್ಶೀವಾದ ಅಂಬಿ ಕುಟುಂಬದ ಮೇಲೆ ಇರಲಿ.

Leave a Reply