ವಿಷ್ಣು ಸಮಾಧಿ ಅಖಾಡಕ್ಕೆ ಕಿಚ್ಚ ಸುದೀಪ್..!

ಡಿಜಿಟಲ್ ಕನ್ನಡ ಟೀಮ್:

ಡಾ. ವಿಷ್ಣುವರ್ಧನ್ ನಿಧನರಾಗಿ ಬರೋಬ್ಬರಿ ೯ ವರ್ಷಗಳಾಗುತ್ತಾ ಬಂದಿದೆ. ಬೆಂಗಳೂರಿನ ಅಭಿಮಾನ್ ಸ್ಟೂಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಅಲ್ಲಿಂದ ಇಲ್ಲೀವರೆಗೂ ಸ್ಯಾಂಡಲ್‌ವುಡ್ ಯಜಮಾನನಿಗೆ ಸ್ಮಾರಕ ಮಾಡಲು ಸಾಧ್ಯವಾಗಿಲ್ಲ. ಇದೀಗ ವಿಷ್ಣು ಕುಚಿಕು ಗೆಳಯ ರೆಬಲ್ ಸ್ಟಾರ್ ಅಂಬರೀಶ್ ನಿಧನದ ಬಳಿಕ ವಿಷ್ಣ ಸ್ಮಾರಕ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಡಾ. ರಾಜ್, ಡಾ. ಅಂಬಿ, ಡಾ. ವಿಷ್ಣು ಅವರ ಸಮಾಧಿ ಒಟ್ಟಿಗೆ ಒಂದೇ ಕಡೆ ಇರಲಿ ಅನ್ನೋದು ಸಾಕಷ್ಟು ಅಭಿಮಾನಿಗಳ ಮಾತು. ಇದಕ್ಕೆ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದ ಇಡೀ ಕುಟುಂಬ ಬೆಂಗಳೂರೇ ಆಗಲಿ, ಮೈಸೂರಲ್ಲೇ ಆಗಲಿ ವಿಷ್ಣುವರ್ಧನ್‌ಗೆ ಸ್ಮಾರಕ ಆಗಲಿ ಎಂದಿದ್ರು ಭಾರತಿ ವಿಷ್ಣುವರ್ಧನ್. ಆದ್ರೆ ಗುರುವಾರ ಮತ್ತೆ ಉಲ್ಟಾ ಹೊಡೆದಿದ್ದಾರೆ.

ವಿಷ್ಣು ಕುಟುಂಬ ಉಲ್ಟಾ ಹೊಡೆದಿದ್ದು ಯಾಕೆ..?

ಬೆಂಗಳೂರೋ.. ಮೈಸೂರೋ ಒಟ್ಟಾರೆ ಸ್ಮಾರಕ ಆಗಲಿ ಅಂತಾ ಹೇಳಿದ್ದ ಮಾತಿನಂತೆ ಕುಟುಂಬಸ್ಥರಿಂದ ಒಂದು ಮನವಿ ಪತ್ರ ಪಡೆದುಕೊಂಡು ಸ್ಮಾರಕಕ್ಕೆ ಚಾಲನೆ ಕೊಡೋಣ ಅನ್ನೋದು ನಿರ್ಮಾಪಕ ಮುನಿರತ್ನ ಅವರ ಉದ್ದೇಶವಾಗಿತ್ತು. ಇದೇ ಕಾರಣಕ್ಕಾಗಿ ಇವತ್ತು ವಿಷ್ಣು ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ರು. ಆದ್ರೆ ಮೊದಲು ನೀಡಿದ್ದ ಹೇಳಿಕೆಗೆ ಉಲ್ಟಾ ಹೊಡೆದ ವಿಷ್ಣು ಕುಟುಂಬಸ್ಥರು ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ನಮ್ಮ ಕುಟುಂಬ ಒಪ್ಪುವುದಿಲ್ಲ. ಸ್ಮಾರಕ ಎಂದು ಮಾಡುವುದೇ ಆದರೆ ಕೇವಲ ಮೈಸೂರಿನಲ್ಲಿ ಮಾತ್ರ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದ್ರೆ ಏನು ಹೇಳಬೇಕು ಅನ್ನೋದನ್ನು ತಿಳಿಯದ ನಿರ್ಮಾಪಕ ಕಂ ಶಾಸಕ ಮುನಿರತ್ನ ಸಿಎಂ ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡ್ತೇನೆ. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಮುಟ್ಟಿಸ್ತೇನೆ ಅಂತೇಳಿ ವಾಪಸ್ ಬಂದಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಜಾಗ ನೀಡಿದ್ದು, ಅದೇ ಜಾಗ ಪಡೆಯಬೇಕು ಅನ್ನೋ ಉದ್ದೇಶದಿಂದ ಕುಟುಂಬ ಈ ರೀತಿ ರಚ್ಚೆ ಹಿಡಿದಿದೆ ಎನ್ನಲಾಗ್ತಿದೆ.

ವಿಷ್ಣುವರ್ಧನ್ ಅಭಿಮಾನಿ ಆಗಿರುವ ಕಿಚ್ಚ ಸುದೀಪ್ ವಿಷ್ಣು ಸ್ಮಾರಕ ವಿಚಾರದಲ್ಲಿ ಅಖಾಡಕ್ಕೆ ಧುಮುಕಿದ್ದು, ಯಾವುದೇ ಕಾರಣಕ್ಕೂ ವಿಷ್ಣು ಸಮಾಧಿ ಸ್ಥಳಾಂತರ ಮಾಡಬಾರದು ಎಂದು ಆಗ್ರಹ ಮಾಡ್ತಿರೋ ವಿಷ್ಣು ಅಭಿಮಾನಿ ಬಳಗದ ಪರ ಅಖಾಡಕ್ಕೆ ಎಂಟ್ರಿ ಕೊಡಲಿದ್ದು, ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ವಿಷ್ಣು ಸ್ಮಾರಕ ಮೈಸೂರಿನಲ್ಲೇ ಆಗಬೇಕು ಅನ್ನೋದು ಕುಟುಂಬಸ್ಥರ ವಾದವಾಗಿದ್ದು, ಸರ್ಕಾರ ಕೂಡ ಮನ್ನಣೆ ಕೊಡುವುದಾದರೆ ಅಲ್ಲಿ ಸ್ಮಾರಕ ನಿರ್ಮಾಣವಾಗಲಿ, ಆದರೆ ಅಭಿಮಾನ್ ಸ್ಟೂಡಿಯೋದಲ್ಲಿ ಇರುವ ಸಮಾಧಿಯನ್ನು ಯಾವುದೇ ಕಾರಣಕ್ಕೂ ಮುಟ್ಟಲು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಒಂದು ವೇಳೆ ಸರ್ಕಾರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸ್ಮಾರಕ ಮಾಡದೆ ಹೋದರೆ ನಾವೇ ಜಾಗ ಖರೀದಿ ಮಾಡಿ ಯಜಮಾನರಿಗೆ ದೇಗುಲ ಕಟ್ತೇವೆ ಎಂದಿದ್ದಾರೆ. ಇದೀಗ ನಾಳೆ ಸುದೀಪ್ ಅಖಾಡಕ್ಕೆ ಎಂಟ್ರಿ ಕೊಟ್ರೆ ಯಾವುದಾದರೂ ಒಂದು ಹಂತ ತಲುಪುವುದು ಗ್ಯಾರಂಟಿ. ಏನಾಗಲಿದೆ ಅನ್ನೋದನ್ನು ಕಾದು ನೋಡುವುದಷ್ಟೇ ಅಭಿಮಾನಿಗಳ ಪಾಲಿಗೆ ಉಳಿದಿರುವ ದಾರಿ.

Leave a Reply