ಜಿ-20 ಶೃಂಗಸಭೆಯಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಮೋದಿ ಕಂಡುಕೊಂಡ ‘ಜೈ’ ಮತ್ತು ‘ರಿಕ್’ ಸೂತ್ರವೇನು?

ಡಿಜಿಟಲ್ ಕನ್ನಡ ಟೀಮ್:

ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿರುವ ಮೋದಿ ಸಾಲುಸಾಲಾಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತಿದ್ದು ದ್ವಿಪಕ್ಷೀಯ ಸಂಬಂಧದ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯವನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದಾರೆ. ಮೋದಿ ಜಾಗತಿಕ ಸ್ನೇಹ ಸಂಬಂಧದಲ್ಲಿ ‘ಜೈ’ ಹಾಗೂ ‘ರಿಕ್’ ಎಂಬ ಹೊಸ ಸೂತ್ರ ಕಂಡುಕೊಂಡಿದ್ದಾರೆ. ಜೈ ಎಂದರೆ ಜಪಾನ್- ಅಮೇರಿಕ- ಇಂಡಿಯಾ (JAI) ಹಾಗೂ ರಿಕ್ ಎಂದರೆ ರಷ್ಯಾ- ಇಂಡಿಯಾ- ಚೀನಾ (RIC).

ಪ್ರಧಾನಿ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಪಕ್ಷಿಯ ಸಭೆ ನಡೆಸಿದ್ದು ಅಂತರಾಷ್ಟ್ರೀಯ ಶಾಂತಿ ಸ್ಥಾಪನೆ ಕುರಿತು ಚರ್ಚೆ ನಡೆಸಿದ್ದಾರೆ.

ಶುಕ್ರವಾರ ಸೌದಿ ಅರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆ ಮಾತುಕತೆ ನಡೆಸಿದ ಮೋದಿ ತೈಲ ತಂತ್ರಜ್ಞಾನ ನವೀಕರಿಸಬಹುದಾದ ಇಂಧನ ಆಹಾರ ಭದ್ರತೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ನಡೆಸಿದ್ದರು. ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅವರು ಮೋದಿ ಅವರನ್ನು ಭೇಟಿ ಮಾಡಿ ಹವಮಾನ ವೈಪರಿತ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದದ ಕುರಿತು ಚರ್ಚೆ ನಡೆಸಿದರು. ಮುಂದಿನ ವಾರ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ವಿಚಾರ ಸಂಕಿರಣ ನಡೆಯಲಿದ್ದು ಇದರ ಬೆನ್ನಲ್ಲೇ ಗುಟೆರಸ್ ಅವರು ಮೋದಿಯನ್ನು ಭೇಟಿ ಮಾಡಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಇದು ಜಾಗತಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಭಾರತದ ಮುಂದಾಳತ್ವದ ಸಂಕೇತವಾಗಿ ಗೋಚರಿಸಿತ್ತು.

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿರುವ ಬೆನ್ನಲ್ಲೇ ಭಾರತ ಅಮೆರಿಕ ಜಪಾನ್ ನಾಯಕರ ಭೇಟಿ ಹೆಚ್ಚು ಗಮನ ಸೆಳೆದಿದೆ. ಇಂಡೋ ಫೆಸಿಫಿಕ್ ವಿಚಾರವಾಗಿ ಈ ನಾಯಕರುಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಪ್ರಾದೇಶಿಕ ಶಾಂತಿ ಸಮೃದ್ಧಿ ಮುಕ್ತವಾದ ಹಾಗೂ ನಿಯಮಿತ ವ್ಯವಸ್ಥೆ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಪ್ರಧಾನಿ ಮೋದಿ ಇಂಡೋ ಫೆಸಿಫಿಕ್ ಪರಿಕಲ್ಪನೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಾಹಿತಿ ನೀಡಿದ್ದಾರೆ.

ಹೀಗೆ ಅಮೆರಿಕ ಜಪಾನ್ ಜೊತೆಗಿನ ಸಂಬಂಧ ವೃದ್ಧಿಸಿಕೊಳ್ಳುವ ಭಾರತ ಮತ್ತೊಂದೆಡೆ ಇವರ ಕಡು ವೈರಿಗಳಾದ ಚೀನಾ ಜೊತೆಗಿನ ಸ್ನೇಹವನ್ನು ಗಟ್ಟಿ ಮಾಡಿಕೊಳ್ಳುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಹಾಗೂ ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಜೊತೆಗೆ ತ್ರಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಮೂರು ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ‘ರಿಕ್’ ಎಂದು ಹೆಸರಿಟ್ಟಿದ್ದಾರೆ.

Leave a Reply