ಅತ್ಯಾಚಾರ, ಸಾವನ್ನು ಸಂಘ ಸಂಭ್ರಮಿಸುತ್ತಾ..? ಭಜರಂಗ ದಳದ ಮಾಜಿ ರಾಜ್ಯಾಧ್ಯಕ್ಷರ ಆಘಾತಕಾರಿ ಹೇಳಿಕೆ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದ ಕರಾವಳಿ ಅಂದ್ರೆ ಕೋಮು ಸಂಘರ್ಷದ ಪ್ರದೇಶ ಎಂಬ ಕುಖ್ಯಾತಿ ಪಡೆದಿದೆ. ಹಿಂದೂ ಮುಸ್ಲಿಂ ಗಲಾಟೆ ನಡೆಯುತ್ತಿದೆ ಅಂದ್ರೆ ಕರಾವಳಿಗೆ ಹೋಗಲು ಜನರು ಹೆದರುವ ಪರಿಸ್ಥಿತಿ ಇದೆ. ಈ ರೀತಿ ಇರುವಾಗ ಕರಾವಳಿಯಲ್ಲಿ ಬಿಜೆಪಿ ಯಾವ ರೀತಿ ರಾಜಕೀಯ ಮಾಡುತ್ತದೆ ಅನ್ನೋ ಬಗ್ಗೆ ಭಜರಂಗ ದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್​ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ಜನನುಡಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಹೇಂದ್ರಕುಮಾರ್, ‘ಕರಾವಳಿಯಲ್ಲಿ ಹಿಂದೂ ಹುಡುಗಿ ಮೇಲೆ ಅತ್ಯಾಚಾರವಾದರೆ ಸಂಘಕ್ಕೆ ಖುಷಿಯಾಗುತ್ತದೆ. ಅತ್ಯಾಚಾರ ಘಟನೆ ಸಂಘಕ್ಕೆ ಆಗುವಷ್ಟು ಖುಷಿ ಯಾರಿಗೂ ಆಗಲ್ಲ, ಸಂಘಕ್ಕೆ ಬೇಳೆ ಬೇಯಿಸಲು ಅನುಕೂಲ ಅಂತಾರೆ. ಮುಸಲ್ಮಾನರನ್ನು ಧರ್ಮದ ಕಾರಣಕ್ಕಾಗಿ ದ್ವೇಷ ಮಾಡುತ್ತಾರೆ, ಇದು ನಿಜವಾದ ದೇಶದ್ರೋಹ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಬತ್ತಳಿಕೆಯಲ್ಲಿ ಎಲ್ಲವೂ ಖಾಲಿಯಾದಾಗ ಅಯೋಧ್ಯೆ ವಿಚಾರ ಮುನ್ನೆಲೆಗೆ ಬರುತ್ತದೆ, ಸಂಘಪರಿವಾರದಲ್ಲಿ ಜಾತಿ ಅಸ್ಪೃಶ್ಯತೆ ಹೆಚ್ಚಾಗಿರುವುದೇ ನಾನು ಸಂಘ ಸಿದ್ಧಾಂತದಿಂದ ವಿಮುಖನಾಗಲು ಕಾರಣ ಎಂದಿರುವ ಮಹೇಂದ್ರ ಕುಮಾರ್​, ‘ಚರ್ಚ್ ದಾಳಿ ಪದ ಬಳಸಲು ಮಹೇಂದ್ರ ಕುಮಾರ್ ನಿರಾಕರಿಸಿದ್ದು, ಚರ್ಚ್ ದಾಳಿಯನ್ನು 2008ರಲ್ಲಿ ನಡೆದ ಘಟನೆ ಎನ್ನುತ್ತೇನೆ ಎಂದಿದ್ದಾರೆ. 2008ರ ಚರ್ಚ್ ದಾಳಿ ಸೂತ್ರಧಾರರಾಗಿದ್ದರು, ಅವರ ಧೋರಣೆ ಬದಲಿಸಲು ಪ್ರಯತ್ನಪಟ್ಟಿದ್ದೆ. ಅದಕ್ಕಾಗಿ ಭಜರಂಗದಳದ ಕ್ಯಾಂಪ್​ಗಳನ್ನು ನಡೆಸಿದ್ದೆ. ಆದ್ರೆ ಚರ್ಚ್ ದಾಳಿ ಘಟನೆ ಮುಂದಿಟ್ಟು ನನ್ನನ್ನು ಹೊರಗಿಡಲಾಯಿತು. ಸಂಘಟನೆಯಿಂದ ಹೊರಗಿಡಲು ಚರ್ಚ್ ದಾಳಿಯನ್ನೇ ಸಂಘ ಅಸ್ತ್ರವನ್ನಾಗಿಸಿತ್ತು ಎಂದಿದ್ದಾರೆ.

ಹಿಂದೂ ಕಾರ್ಯಕರ್ತ ಗೋಕುಲ್ ಕೊಲೆಯಾಗಿತ್ತು, ಅನ್ಯಕೋಮಿನವರಿಂದ ಗೋಕುಲ್ ಹತ್ಯೆಯಾಗಿದ್ದಾಗ ಅವರ ಮನೆಯವರು ಗೊಳೋ ಎಂದು ಅಳುತ್ತಿದ್ರು. ಅವರ ಕುಟುಂಬ ನೋಡಿ ನನ್ನ ಕರುಳು ಚುರುಕ್ ಎಂದಿತ್ತು. ಆ ಸಂದರ್ಭವನ್ನು ಬಳಸಿಕೊಳ್ಳಲು ಈಶ್ವರಪ್ಪ ಪ್ರಯತ್ನಿಸಿದ್ರು.. ಭೂಮಿ ಫಲವತ್ತಾಗಿದೆ, ಒಳ್ಳೇ ಫಸಲು ತೆಗೀಬಹುದುಎಂದು ಪರೋಕ್ಷವಾಗಿ ಸಂಘದ ಹಿರಿಯರು ಹಾಗೂ ಈಶ್ವರಪ್ಪ ನನ್ನ ಬಳಿ ಹೇಳಿದ್ರು. ಅವರ ಮಾತುಗಳನ್ನು ಕೇಳಿ ನಾನು ಬೆಚ್ಚಿಬಿದ್ದಿದ್ದೆ, ಎಂತಹ ಮನುಷ್ಯರಿವರು ಅಂದುಕೊಂಡಿದ್ದೆ. ಸಾವಿನಲ್ಲೂ ಹೇಗೆ ಲಾಭ ತೆಗೆಯುತ್ತಾರೆ ಅನ್ನೋದು ನನಗೆ ಅರ್ಥವಾಯ್ತು ಎಂದಿದ್ದಾರೆ ಮಹೇಂದ್ರ ಕುಮಾರ್​.

ಸಂಘ ಪರಿವಾರದ ಬೆಂಬಲದಿಂದಲೇ ಬೆಳೆದು ಬಂದ ನಾಯಕ ಇಂದು ಅವರ ಮೇಲೇ ಈ ರೀತಿಯ ಆರೋಪ ಮಾಡಿರೋದು ಕೇವಲ ಕರಾವಳಿ ಮಾತ್ರವಲ್ಲ ರಾಜ್ಯದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

Leave a Reply