ಹೆರಿಗೆಯ ಬಳಿಕ ಅಧಿಕ ರಕ್ತಸ್ರಾವ ಪರಿಣಾಮಗಳೇನು?

ಡಾ.ಬಿ.ರಮೇಶ್

ಹೆರಿಗೆಯ ಬಳಿಕ ರಕ್ತಸ್ರಾವ ಸಾಮಾನ್ಯ ಸಂಗತಿ. ಗರ್ಭಕೋಶದ ಪದರನ್ನು (ಲೈನಿಂಗ್) ನೈಸರ್ಗಿಕವಾಗಿ ಗುಣಪಡಿಸಲು ಈ ಪ್ರಕ್ರಿಯೆ ಅತ್ಯವಶ್ಯ. ಸಾಮಾನ್ಯ ಹೆರಿಗೆ ಹಾಗೂ ಸಿಸೇರಿಯನ್ ಹೆರಿಗೆ ಎರಡರಲ್ಲೂ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ.

ಎಷ್ಟು ದಿನ ರಕ್ತಸ್ರಾವ ಸಾಮಾನ್ಯ?
ಹೆರಿಗೆಯಾದ ಬಳಿಕ ಮೊದಲ 24 ಗಂಟೆಗಳ ಕಾಲ ಗರ್ಭಕ್ಕೆ ಸಂಬಂಧಪಟ್ಟ (ಅಂದರೆ ಮಾಸಿಗೆ ಸಂಬಂಧಪಟ್ಟ) ಯಾವುದೇ ಭಾಗಗಳು ರಕ್ತಸ್ರಾವದ ಮೂಲಕ ಹೊರಗೆ ಹೋಗುತ್ತವೆ. ಆ ಬಳಿಕ 5 ದಿನಗಳ ಕಾಲ ಕಂದು ಬಣ್ಣದ ರಕ್ತಸ್ರಾವ ಆಗುತ್ತದೆ. ಇದು ಗರ್ಭಕೋಶದ ಪದರು ರೂಪುಗೊಳ್ಳುವಂಥ ಪ್ರಕ್ರಿಯೆ. ಇದಾದ 4 – 5 ದಿನಗಳ ಕಾಲ ಮುಟ್ಟಿನಂಥದು ಹೋಗುತ್ತದೆ. ಹೀಗೆ 15 – 20 ದಿನಗಳ ಕಾಲ ರಕ್ತಸ್ರಾವ ಆಗುವುದು ಸಾಮಾನ್ಯ ಪ್ರಕ್ರಿಯೆ.

ಎಷ್ಟು ರಕ್ತಸ್ರಾವ ಸಾಮಾನ್ಯ?
ಸಾಮಾನ್ಯವಾಗಿ 24 ಗಂಟೆಯೊಳಗೆ 500ಎಂಎಲ್ ಅಥವಾ ಅದಕ್ಕೂ ಕಡಿಮೆ ಪ್ರಮಾಣದಲ್ಲಿ ರಕ್ತಸ್ರಾವ ಆದರೆ ಅದು ಸಾಮಾನ್ಯ ರಕ್ತಸ್ರಾವ. ಒಂದು ವೇಳೆ ರಕ್ತಸ್ರಾವದ ಪ್ರಮಾಣ 500ಎಂ.ಎಲ್. ಗಿಂತ ಜಾಸ್ತಿ ಆದರೆ ಅದನ್ನು `ಅಧಿಕ ರಕ್ತಸ್ರಾವಅಥವಾ ವೈದ್ಯಭಾಷೆಯಲ್ಲಿ ಪೋಸ್ಟ್ ಪಾರ್ಟಮ್ ಹ್ಯಾಮರೇಜ್” (PPH) ಎಂದು ಕರೆಯಲಾಗುತ್ತದೆ.

ಹೆರಿಗೆಯಾದ 24 ಗಂಟೆಯೊಳಗೆ ಆಗುವ ರಕ್ತಸ್ರಾವವನ್ನು ಪ್ರೈಮರಿ ಪೋಸ್ಟ್ ಪಾರ್ಟಮ್ ಹ್ಯಾಮರೇಜ್ಹಾಗೂ ಆ ಬಳಿಕ ಬಳಿಕ 6 ವಾರಗಳ ತನಕ ಆಗುವ ರಕ್ತಸ್ರಾವವನ್ನು `ಸೆಕೆಂಡರಿ ಪೋಸ್ಟ್ ಪಾರ್ಟಮ್ ಹ್ಯಾಮರೇಜ್ಎಂದು ಕರೆಯುತ್ತಾರೆ.

ಕಡಿಮೆ ಪ್ರಮಾಣದಲ್ಲಿ ರಕ್ತಸ್ರಾವ ಉಂಟಾದಾಗ್ಯೂ ಕೂಡ ಸುಸ್ತಾಗುವಿಕೆ, ಬಿಳಿಚಿಕೊಂಡಿರುವುದು ಹಾಗೂ ರಕ್ತಹೀನತೆಯ ಲಕ್ಷಣಗಳೇನಾದರೂ ಕಂಡುಬಂದರೆ ಅದನ್ನು ಅಸಾಮಾನ್ಯ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ಏನು ಕಾರಣ?
ಹೆರಿಗೆಯ ಬಳಿಕ ಅಧಿಕ ರಕ್ತಸ್ರಾವ ಉಂಟಾಗಲು ಅನೇಕ ಕಾರಣಗಳನ್ನು ಪಟ್ಟಿ ಮಾಡಬಹುದು.

  • ಗರ್ಭಕೋಶದ ಗಾತ್ರ ಅಗತ್ಯಕ್ಕಿಂತ ಹೆಚ್ಚು ದೊಡ್ಡದಾಗಿದ್ದಾಗ
  • ಗರ್ಭದಲ್ಲಿ 3-4 ಕಿಲೋ ತೂಕದ ಮಗು ಇದ್ದಾಗ ರಕ್ತನಾಳಗಳು ಕುಗ್ಗುವ ಸಾಮಥ್ರ್ಯ ಕಡಿಮೆಯಾಗುತ್ತದೆ.
  • 3ಕ್ಕಿಂತ ಹೆಚ್ಚು ಹೆರಿಗೆ ಆದವರಲ್ಲಿ ಹೀಗಾಗಬಹುದು.
  • ನೋವು ಶುರುವಾಗಿ ಕಡಿಮೆ ಅವಧಿಯಲ್ಲಿ ಹೆರಿಗೆ ಆದಾಗ ಅಥವಾ ನೋವು ಶುರುವಾಗಿ ತುಂಬಾ ತಡವಾಗಿ ಹೆರಿಗೆ ಆದಾಗಲೂ ಕೂಡ ರಕ್ತಸ್ರಾವ ಉಂಟಾಗಬಹುದು.
  • ಸಹಜ ಹೆರಿಗೆ ಆದವರಲ್ಲಿ ಪ್ಲಾಸೆಂಟಾ ಅಥವಾ ಮಾಸಿನ ಅಲ್ಪಸ್ವಲ್ಪ ಭಾಗ ಹಾಗೆಯೇ ಉಳಿದಿದ್ದರೆ ರಕ್ತಸ್ರಾವದ ಪ್ರಮಾಣ ಹೆಚ್ಚು.
  • ಮಗುವನ್ನು ಹೊರ ತೆಗೆಯಲು ಇಕ್ಕುಳದಂತಹ ಉಪಕರಣಗಳನ್ನು ಬಳಸಿದಾಗ ಕೂಡ ಒಮ್ಮೊಮ್ಮೆ ರಕ್ತಸ್ರಾವ ಕಾಣಿಸಿಕೊಳ್ಳಬಹುದು.
  • ಹೆರಿಗೆ ಸಮಯದಲ್ಲಿ ಸೋಂಕು, ಜ್ವರ ಇರುವವರಲ್ಲಿ ಹೀಗಾಗಬಹುದು.

 ಏನೇನು ಲಕ್ಷಣಗಳು?
ರಕ್ತಸ್ರಾವ ಇದರ ಮುಖ್ಯ ಲಕ್ಷಣ. ನಲ್ಲಿ ತಿರುಗಿಸಿದಾಗ ನೀರು ಸರಾಗವಾಗಿ ಹರಿದು ಹೋಗುವಂತೆ ರಕ್ತಸ್ರಾವ ಆಗುತ್ತಿರುತ್ತದೆ. ರಕ್ತ ಗರಣೆ ಗರಣೆ ಥರ ಹೋಗುತ್ತಿರುತ್ತದೆ. ಅದರ ಜತೆಗೆ ಸುಸ್ತಾಗುವಿಕೆ, ಕಣ್ಣು ಮಂಜು ಮುಂಜಾಗುವುದು, ಉಸಿರಾಟಕ್ಕೆ ತೊಂದರೆ, ಅಧಿಕ ರಕ್ತಸ್ರಾವದಿಂದ ಒಮ್ಮೊಮ್ಮೆ ಮಹಿಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಬಹುದು.

ಯಾವ ಯಾವ ಪರೀಕ್ಷೆ?
ರಕ್ತಸ್ರಾವದ ಸಾಮಾನ್ಯ ಲಕ್ಷಣಗಳನ್ನು ಮೊದಲು ಗಮನಿಸಲಾಗುತ್ತದೆ. ರಕ್ತ ಹೊರಹೋದ ಪ್ರಮಾಣ ಎಷ್ಟು ಎಂದು ಕಂಡುಕೊಳ್ಳಲಾಗುತ್ತದೆ. ಗರ್ಭಕೋಶದ ಗಾತ್ರ ಎಷ್ಟಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಹೆರಿಗೆಯ ಬಳಿಕ ಗರ್ಭಕೋಶ ಒಂದು ಚೆಂಡಿನಂತೆ ಗಟ್ಟಿಯಾಗಿ ಕೂತಿರುತ್ತದೆ. ಆರು ವಾರದಲ್ಲಿ ಅದು ವಾಸ್ತವ ಸ್ಥಿತಿಗೆ ಮರಳಬೇಕು. ಪೂರ್ಣಾವಧಿ ಗರ್ಭಾವಸ್ಥೆಯಲ್ಲಿ ಅದರ ಗಾತ್ರ 35 ಸೆಂ.ಮಿನಷ್ಟು ಇರುತ್ತದೆ. ವಾಸ್ತವ ಗಾತ್ರಕ್ಕೆ ಮರಳಿದಾಗ ಅದು 5 – 6ಸೆಂ.ಮೀ.ನಷ್ಟು ಆಗುತ್ತದೆ. ಗರ್ಭಾವಸ್ಥೆ ವಾಸ್ತವ ಸ್ಥಿತಿಗೆ ಬರಲು ಎಷ್ಟು ರಕ್ತ ಚಲನೆ ಇರಬೇಕೋ ಅಷ್ಟೇ ಇರಬೇಕು. ಒಂದು ವೇಳೆ ಅದು ಹೆಚ್ಚಾದರೆ ಅಧಿಕ ರಕ್ತಸ್ರಾವವಾಗುತ್ತದೆ.

ಏನು ಪರಿಹಾರ?
ಅಧಿಕ ರಕ್ತಸ್ರಾವಕ್ಕೆ ತುತ್ತಾದ ಮಹಿಳೆಯೊಬ್ಬಳ ಸ್ಥಿತಿ ತುರ್ತುಸ್ಥಿತಿಯ ನಿರ್ವಹಣೆಯ ರೀತಿಯಲ್ಲಿ ಮಾಡಬೇಕು. ನಿರಂತರ ರಕ್ತಸ್ರಾವ ಆಗುತ್ತಿದ್ದರೆ ಹೃದಯ, ಶ್ವಾಸಕೋಶ ಹಾಗೂ ಮಿದುಳಿಗೆ ತೊಂದರೆ ಉಂಟುಮಾಡಬಹುದು. ಹೀಗಾಗಿ ಸಕಲ ವ್ಯವಸ್ಥೆ ಅಂದರೆ ಐಸಿಯುಓ.ಟಿ. ಹಾಗೂ ರಕ್ತಪೂರೈಕೆ ವ್ಯವಸ್ಥೆ ಇರುವ ಆಸ್ಪತ್ರೆಯಲ್ಲಷ್ಟೇ ಈ ರೀತಿಯ ಚಿಕಿತ್ಸೆ ಸಾಧ್ಯ. ಗರ್ಭಕೋಶವನ್ನು ಗಟ್ಟಿಗೊಳಿಸಲು ಹೊಟ್ಟೆಯ ಮೇಲೆ ನಿಧಾನವಾಗಿ ಮಸಾಜ್ ಮಾಡುತ್ತಿರಬೇಕು.

ಮಹಿಳೆಯ ದೇಹದಲ್ಲಿ ರಕ್ತದ ಪ್ರಮಾಣ ತೀರಾ ಕಡಿಮೆ ಇದ್ದರೆ, ಬ್ಲಡ್ ಬ್ಯಾಂಕಿನಿಂದ ಆಕೆಗೆ ರಕ್ತ ತರಿಸಿ ಹಾಕುವ ವ್ಯವಸ್ಥೆ ಮಾಡಬೇಕಾಗುತ್ತದೆ. ರಕ್ತಸ್ರಾವ ನಿಲ್ಲದೇ ಹೋದಲ್ಲಿ ವೈದ್ಯರು ಅಂತಿಮ ಉಪಾಯವೆಂಬಂತೆ ಶಸ್ತ್ರಚಿಕಿತ್ಸೆಗೆ ಸಜ್ಜಾಗುತ್ತಾರೆ. ಅದರ ಮುಖಾಂತರ ಗರ್ಭಕೋಶದ ಗಾತ್ರವನ್ನು ಚಿಕ್ಕದುಗೊಳಿಸಲು ಹೊಲಿಗೆ ಹಾಕಿ ಕಟ್ಟುವರು. ಅದರ ಜತೆಗೆ ಕೆಲವು ರಕ್ತನಾಳಗಳನ್ನು ಕಿರಿದುಗೊಳಿಸಲು ಕೂಡ ಶಸ್ತ್ರಚಿಕಿತ್ಸೆ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಕೆಲವೊಂದು ರಕ್ತನಾಳಗಳನ್ನು ಕ್ಷಕಿರಣಗಳ ಮೂಲಕ ಬ್ಲಾಕ್ ಮಾಡಿ ರಕ್ತದ ಹರಿವಿನ ಪ್ರಮಾಣವನ್ನು ನಿಯಂತ್ರಿಸಲಾಗುತ್ತದೆ.

ರಕ್ತಸ್ರಾವ ನಿಲ್ಲದೆ ಹೋದಲ್ಲಿ ವೈದ್ಯರು ಮಹಿಳೆಯ ಗರ್ಭಕೋಶವನ್ನೇ ತೆಗೆದುಹಾಕುವ ನಿರ್ಧಾರ ಮಾಡುತ್ತಾರೆ. ಮಹಿಳೆಯ ಜೀವ ಉಳಿಸುವ ನಿಟ್ಟಿನಲ್ಲಿ ವೈದ್ಯರು ಈ ಅನಿವಾರ್ಯ ನಿರ್ಧಾರಕ್ಕೆ ಬರಬೇಕಾಗಿ ಬರಬಹುದು.

ಹೆಚ್ಚಿನ ಮಾಹಿತಿಗೆ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್ ವಿಳಾಸ: altiushospital@yahoo.com, www.altiushospital.com

Leave a Reply