ಸರ್ಕಾರಿ ಯೋಜನೆ ಪೂರ್ಣಗೊಳ್ಳಲು ಬಡ್ಡಿ ಇಲ್ಲದೆ ಸಾಲ ಕೊಟ್ಟ ಶಿರಡಿ ಸಾಯಿಬಾಬಾ..!

ಡಿಜಿಟಲ್ ಕನ್ನಡ ಟೀಮ್:

ವೈಕುಂಠ ನಿವಾಸಿ, ಲಕ್ಷ್ಮೀ ತನಯ ಶ್ರೀಮನ್ ನಾರಾಯಣನಿಗೆ ಕುಭೇರ ಸಾಲ ಕೊಟ್ಟಿದ್ದ, ಆ ಬಳಿಕ ಸಾಲ ತೀರಿಸಲಾಗದ ಶ್ರೀ ವೆಂಕಟೇಶ್ವರ ತಿರುಪತಿಯಲ್ಲಿ ನೆಲೆಸಿ ಭಕ್ತರಿಂದ ಹಣ ಸಂಗ್ರಹ ಮಾಡ್ತಿದ್ದಾನೆ. ಸಾಲ ವಾಪಸ್​ ಪಡೆಯುವ ಸಲುವಾಗಿ ಕಭೇರ ಕೂಡ ತಿರುಪತಿಯಲ್ಲೇ ವಾಸವಾಗಿದ್ದು, ಏಳುಕೊಂಡಲವಾಡ ವೆಂಕಟೇಶ್ವರನ ಬಳಿಯೇ ಉಳಿದಿದ್ದಾನೆ ಅನ್ನೋದು ಜಾನಪದ ಪ್ರತೀತಿ. ಆದ್ರೀಗ ಸಾಕ್ಷತ್​ ದೇವರೇ ಸರ್ಕಾರಕ್ಕೆ 500 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ನೀಡಿದ್ದಾನೆ. ಅದೂ ಕೂಡ ಬಡ್ಡಿ ಇಲ್ಲದೆ ಹಾಗೂ ಸಾಲ ಮರುಪಾವತಿ ಮಾಡಲು​ ಸಮಯದ ವಾಯಿದೆಯೂ ಇಲ್ಲದೆ.

ಹೌದು, ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ದೇವಾಲಯ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಅವರ ಸರ್ಕಾರಕ್ಕೆ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಲು 500 ಕೋಟಿ ಸಾಲ ನೀಡಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇವರು ಎಂದು ಕರೆಸಿಕೊಳ್ಳುವ ಶಿರಡಿ ಸಾಯಿ ಬಾಬಾ ದೇವಾಲಯದ ಟ್ರಸ್ಟ್ ಅಹಮದ್​ನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ನಿಲ್​ವಾಂಡೆ ನೀರಾವರಿ ಯೋಜನೆ ಸಾಕಷ್ಟು ವರ್ಷಗಳಿಂದ ಸ್ಥಗಿತಗೊಂಡಿದ್ದು, ಈ ಯೋಜನೆ ಪೂರ್ಣ ಮಾಡಲು ಸರ್ಕಾರ ಸಾಲಕ್ಕಾಗಿ ಯಾಚಿಸಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್​ ಮನವಿಯನ್ನು ಒಪ್ಪಿಕೊಂಡಿರುವ ಶಿರಡಿ ಸಾಯಿ ಬಾಬಾ ಟ್ರಸ್ಟ್​, 500 ಕೋಟಿ ರೂಪಾಯಿ ಹಣವನ್ನು ಯಾವುದೇ ವಾಯಿದೆ ಇಲ್ಲದೆ, ಬಡ್ಡಿಯೂ ಇಲ್ಲದೆ ಬಿಟ್ಟಿಯಾಗಿ ನೀಡಿದೆ.

ಪ್ರತಿದಿನ ಶಿರಡಿ ದೇವಸ್ಥಾನಕ್ಕೆ 70 ಸಾವಿರ ಭಕ್ತರು ಆಗಮಿಸಲಿದ್ದು, ವಿಶೇಷ ದಿನಗಳಲ್ಲಿ ಮೂರೂವರೆ ಲಕ್ಷ ಭಕ್ತರು ಆಗಮಿಸಿ ಶಿರಡಿ ಸಾಯಿ ಬಾಬಾನ ದರ್ಶನ ಪಡೆಯುತ್ತಾರೆ. ಪ್ರತಿದಿನ 2 ಕೋಟಿ ಆದಾಯ ಬರುತ್ತಿದ್ದು, ವಾರ್ಷಿಕ 700 ಕೋಟಿ ರೂಪಾಯಿ ಆದಾಯವಿದೆ. ಪ್ರವರ ನದಿಯಿಂದ ಕುಡಿಯುವ ನೀರಿನ ಯೋಜನೆಗೆ 500 ಕೋಟಿ ರೂಪಾಯಿ ಅನುದಾನ ನೀಡಿದ್ದು, ಈ ಯೋಜನೆಯಿಂದ 182 ಹಳ್ಳಿಗಳಿಗೆ ಕುಡಿಯುವ ನೀರು ಸಿಗಲಿದೆ. ನೀಲ್​ವಾಂಡೆ ಬಲ ಹಾಗೂ ಎಡದಂಡೆ ನಾಲೆಯಿಂದ ಕೃಷಿ ಚಟುವಟಿಕೆಗೂ ನೀರು ಸಿಗಲಿದೆ. ಈಗಾಗಲೇ ಕಳೆದ ಜೂನ್​ನಲ್ಲಿ ಪ್ರಧಾನ ಮಂತ್ರಿ ಕೃಷಿ ಸಂಜೀವಿನಿ ಯೋಜನೆ ಮೂಲಕ 2,232 ಕೋಟಿ ಅನುದಾನ ಪಡೆದುಕೊಂಡಿದ್ದು, ಇದೀಗ ಶಿರಡಿ ದೇವಸ್ಥಾನ ಟ್ರಸ್ಟ್​ ಕೂಡ 500 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಅಂದಹಾಗೆ, ಮಹಾರಾಷ್ಟ್ರ ಬಿಜೆಪಿ ನಾಯಕ ಸುರೇಶ್ ಹವಾರೆ,ಈ ದೇವಾಲಯದ ಟ್ರಸ್ಟಿನ ಮುಖ್ಯಸ್ಥರಾಗಿದ್ದು, ಸರ್ಕಾರದ ಮನವಿಗೆ ಒಪ್ಪಿಗೆ ಸಿಕ್ಕಿ ಸಾಲ ನೀಡಲಾಗಿದೆ.

Leave a Reply