ಬಿಜೆಪಿ ನಾಯಕರು ಏನು ಮಾಡುತ್ತಾರೋ ಮಾಡಲಿ, ನಾವು ಕಣ್ಣು ಮುಚ್ಚಿ ಕೂತಿಲ್ಲ: ಗುಡುಗಿದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

‘ರೆಡ್ಡಿ ಜಿಂದಾಲ್‌ಗೆ ಯಾಕೆ ಹೋಗಿದ್ದಾರೆ, ಅಶ್ವಥ್ ನಾರಾಯಣ ಯಾರನೆಲ್ಲಾ ಭೇಟಿಯಾಗಿದ್ದಾರೆ ಎಂಬುದು ಗೊತ್ತಿದೆ, ನಾವೂ ಕಣ್ಣು ಮುಚ್ಚಿ ಕೂತಿಲ್ಲ…’ ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಆಪರೇಷನ್ ಕಮಲ ವಿಚಾರವಾಗಿ ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಪರಿ.

ಇಂದು ಬೆಳಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಪರೇಷನ್ ಕಮಲ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಹೇಳಿದ್ದಿಷ್ಟು…

‘ನಿನ್ನೆ ಆಡಿಯೋ ವಿಚಾರವಾಗಿ ನನ್ನ ಬಗ್ಗೆ ಆರೋಪ ಮಾಡುತ್ತಾರೆ. ಸುಜಿತ್ ಎಂಬುವವರು ನನ್ನ ಪಿಎ ಅಲ್ಲ, ಶ್ರೀರಾಮುಲು ಅಣ್ಣ ಅವರ ಪಿಎ. ಸುಜಿತ್ ಅವರು ಪಿಎ ಅಲ್ಲವಾದರೆ ಸದಾ ಶ್ರೀರಾಮುಲು ಜತೆಯಲ್ಲಿರುವುದೇಕೆ?

ರೆಡ್ಡಿ ಜಿಂದಾಲ್‌ಗೆ ಯಾಕೆ ಹೋಗಿದ್ದಾರೆ, ಅಶ್ವಥ್ ನಾರಾಯಣ ಯಾರನೆಲ್ಲಾ ಭೇಟಿಯಾಗಿದ್ದಾರೆ ಎಲ್ಲವೂ ನಮಗೆ ಗೊತ್ತಿದೆ, ನಾವೂ ಕಣ್ಣು ಮುಚ್ಚಿ ಕೂತಿಲ್ಲ.

ಜನಾರ್ಧನ ರೆಡ್ಡಿ ನಿನ್ನೆ ಯಾರನ್ನು ಯಾಕೆ ಭೇಟಿ ಮಾಡಿದರು ಎಂದು ಕೇಳಿ. ನಾವು ಸರ್ಕಾರ ನಡೆಸುತ್ತಿದ್ದೇವೆ. ನಮಗೆ ಎಲ್ಲವೂ ತಿಳಿಯುತ್ತದೆ. ಬಿಜೆಪಿಯ ಒಂದು ಕ್ಯಾಂಪ್ ಬಗ್ಗೆ ತಿಳಿದುಕೊಂಡು ಮಾತನಾಡುತ್ತಿರುವ ಪಾಪ ಸಿಟಿ ರವಿ, ಜಗದೀಶ್ ಶೆಟ್ಟರ್ ಅವರಿಗೆ ಎಲ್ಲವು ಗೊತ್ತಿಲ್ಲ. ಮತ್ತೊಂದು ಕ್ಯಾಂಪ್ ಅಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲ.

ಬಿಜೆಪಿ ನಾಯಕರು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಬೆಂಕಿ ಇಲ್ಲದೆ ಹೊಗೆಯಾಡಲ್ಲ. ಅವರ ಪ್ರಯತ್ನವನ್ನು ತಡೆಯುವ ಶಕ್ತಿ ನಮಗಿದೆ. ಎನೇನಾಗಬೇಕೊ ಆಗುತ್ತೆ, ಅದಕ್ಕೆಲ್ಲ ಗಳಿಗೆ ಕೂಡಿ ಬರಬೇಕು.

ನಮ್ಮ ಬಳಿ ಕೇಂದ್ರದ ಸಂಸ್ಥೆಗಳಿಲ್ಲ. ಮಾಧ್ಯಮದವರು ತಮ್ಮ ಬಳಿ ಇರುವ ಸಂಪರ್ಕ ಹಾಗೂ ಮೂಲಗಳಿಂದ ಬಂದ ಮಾಹಿತಿಯನ್ನು ಅವರು ಜನರಿಗೆ ತಿಳಿಸಿದ್ದಾರೆ. ಅವರ ಕೆಲಸ ಅವರು ಮಾಡಿದ್ದಾರೆ. ಇದರಲ್ಲಿ ತಪ್ಪಿಲ್ಲ.

ಕೋಟ ಶ್ರೀನಿವಾಸ ಪೂಜಾರಿ ಅವರು ಅವರಿಗೆ ತಿಳಿದಂತೆ ಮಾತನಾಡಿದ್ದಾರೆ. ಆಡಿಯೋದಲ್ಲಿ ಹೆಸರಿಸಿರುವ ಕಾಂಗ್ರೆಸ್ ನಾಯಕರು ದಡ್ಡರಲ್ಲ. ಬಿಜೆಪಿಯವರು ಎಷ್ಟೇ ಪ್ರಯತ್ನಿಸಿದರೂ ಯಾರೂ ಹೋಗುವುದಿಲ್ಲ. ಇನ್ನು ನೂರು ಜನರನ್ನು ಬಿಜೆಪಿ ಸಂಪರ್ಕಿಸಲಿ ಆದರೆ ಯಾರೂ ಬಿಜೆಪಿಗೆ ಹೋಗಲ್ಲ.’

ಇನ್ನು ಹಂಪಿ ಉತ್ಸವದ ಕುರಿತು ಮಾತನಾಡಿದ ಸಚಿವರು, ಉತ್ಸವ ಮಾಡುವುದು ಸುಲಭವಲ್ಲ. ಸುಮ್ಮನೆ ಒಂದು ದಿನ ಹೋಗಿ ಮಾಡುವ ಕಾರ್ಯಕ್ರಮವಲ್ಲ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಭೀಕರ ಬರಗಾಲ ಎದುರಾಗಿದೆ. ನಾವು ಜನರ ರಕ್ಷಣೆಗೆ ಬದ್ಧರಾಗಿದ್ದೇವೆ. ಉತ್ಸವ ಆಚರಣೆಗೆ ಸಿದ್ಧತೆ ಮತ್ತು ಅಗತ್ಯ ಕ್ರಮಗಳ ಕುರಿತು ವರದಿ ನೀಡುವಂತೆ ಹೇಳಿದ್ದೇವೆ. ಅವರು ಸದ್ಯದಲ್ಲೇ ವರದಿ ನೀಡಲಿದ್ದು ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡಬಾರದು.’

Leave a Reply