ಡಿಜಿಟಲ್ ಕನ್ನಡ ಟೀಮ್:
ಇಂದು ಮುಂಜಾನೆ ತೆಲಂಗಾಣ ಪೊಲೀಸರು ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರ ಮನೆ ಮೇಲೆ ದಾಳಿ ಮಾಡಿ ವಿನಾ ಕಾರಣ ಅವರನ್ನು ಬಂಧಿಸಿದ್ದಾರೆ. ಇದರೊಂದಿಗೆ ತೆಲಂಗಾಣದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ತೆಲಂಗಾಣ ವಿಧಾನಸಭೆ ಚುನಾವಣೆ ಉಸ್ತುವಾರಿ ಹೊತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಟೀಕಿಸಿದ್ದಾರೆ.
ತೆಲಂಗಾಣದ ರಾಜಕೀಯ ಬೆಳವಣಿಗೆ ಕುರಿತು ಮಂಗಳವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು ಹೇಳಿದ್ದಿಷ್ಟು…
‘ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಐನೂರು ಪೊಲೀಸರು ಬೆಳಗಿನ ಜಾವ ಅರೆಸ್ಟ್ ಮಾಡಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆಗೆ ರೇವಂತ್ ರೆಡ್ಡಿ ಪತ್ನಿ ನನಗೆ ಕರೆ ಮಾಡಿ ವಿಚಾರ ತಿಳಿಸಿದರು. ರೇವಂತ್ ರೆಡ್ಡಿ ಅವರನ್ನು ಅಮಾನುಷವಾಗಿ ನಡೆಸಿಕೊಂಡಿದ್ದಾರೆ.
ಈ ಬೆಳವಣಿಗೆ ಮೂಲಕ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಅಧಿಕಾರ ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ.
ಕಾಂಗ್ರೆಸ್ ಪರವಾಗಿ ನಾನು ಇದನ್ನು ಖಂಡಿಸುತ್ತೇನೆ. ಚುನಾವಣಾ ಪ್ರಚಾರಕ್ಕೆ ಇನ್ನು ಕೇವಲ 48 ಗಂಟೆ ಕಾಲಾವಕಾಶ ಇದೆ. ಇಂತಹ ಸಂದರ್ಭದಲ್ಲಿ ನಮ್ಮ ಪಕ್ಷದ ನಾಯಕರನ್ನು ಬಂಧಿಸಲಾಗಿದೆ. ತೆಲಂಗಾಣ ದಲ್ಲಿ ಕಾಂಗ್ರೆಸ್ ಗೆ ಬಹುಮತ ಬರಲಿದೆ. ಅದನ್ನು ತಡೆಯಲು ಈ ರೀತಿ ಮಾಡಿದ್ದಾರೆ.
ನಾವು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಕೂಡಲೇ ರೇವಂತ್ ರೆಡ್ಡಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು.
ಈಗಾಗಲೇ ಕೆಸಿಆರ್ ಅವರು ತಮ್ಮ ಭಾಷಣದಲ್ಲಿ ‘ನೀವು ಮತ ಹಾಕದೇ ಇದ್ದರೆ ತಾವು ರೆಸ್ಟ್ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ತಮ್ಮ ಟಿಆರ್ ಎಸ್ ಸೋಲು ನಿಶ್ಚಿತ ಎಂದು ಒಪ್ಪಿಕೊಂಡಿದ್ದಾರೆ. ಅವರು ಚುನಾವಣೆ ನಡೆಯುವ ಮುನ್ನವೇ ಬೇಕಾದರೆ ತಮ್ಮ ತೋಟದ ಮನೆಗೆ ಹೋಗಿ ವಿಶ್ರಾಂತಿ ಪಡೆಯಲಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸರ್ಕಾರ ನಡೆಸಲಿದೆ.’