ಮೈತ್ರಿ ಮುರಿಯಲು ಪರಯತ್ನಿಸುತ್ತಿರೊ ಬಿಜೆಪಿಗೆ ರಾಜ್ಯ ಸರ್ಕಾರದಿಂದ ವಾರ್ನಿಂಗ್..!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಉರುಳಿಸಬೇಕು ಅನ್ನೋದು ಕಮಲ ಪಾಳಯದ ಅಜೆಂಡಾ. ಅದರಲ್ಲೂ ಬೆಳಗಾವಿ ಅಧಿವೇಶನದ ಒಳಗಾಗಿ ಆಪರೇಷನ್​ ಕಮಲ ಮಾಡುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಶಾಕ್​ ಕೊಡಲು ಕಸರತ್ತು ನಡೆಸಿದೆ ಅನ್ನೋ ಮಾಹಿತಿ ಸಿಕ್ಕಿದೆ. ಆದ್ರೆ ಬಲಾಢ್ಯ ವಿರೋಧ ಪಕ್ಷವಾಗಿರುವ ಬಿಜೆಪಿಗೆ ಟಾಂಗ್​ ಕೊಡಲು ರಾಜ್ಯ ಸರ್ಕಾರ ಕೂಡ ಟೊಂಕ ಕಟ್ಟಿ ನಿಂತಿದ್ದು, ಯಾವುದೇ ಕಾರಣಕ್ಕೂ ಸರ್ಕಾರ ಉರುಳಿಸುವ ಕಮಲ ಕಸರತ್ತು ಯಶಸ್ವಿಯಾಗಲು ಬಿಡಲ್ಲ ಎನ್ನುತ್ತಿವೆ ಸರ್ಕಾರದ ಮೂಲಗಳು.

ಬಿಜೆಪಿ ನಾಯಕರು ಒಂದೇ ಒಂದು ಹೆಜ್ಜೆ ಮುಂದಿಟ್ಟರೆ, ರಾಜ್ಯ ಸರ್ಕಾರ ಕೂಡ ಪ್ರಬಲ ಅಸ್ತ್ರ ಪ್ರಯೋಗ ಮಾಡಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಅದೇ ಕಾರಣಕ್ಕಾಗಿ ರಾಜ್ಯ ಸರ್ಕಾರವೇ ಆಪರೇಷನ್​ ಕಮಲದ ಆಡಿಯೋ ರಿಲೀಸ್​ ಮಾಡಿದೆ ಎನ್ನಲಾಗ್ತಿದೆ. ಈ ಆಡಿಯೋ ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಒಂದು ವೇಳೆ ಬಿಜೆಪಿ ಆಪರೇಷನ್​ ಕಮಲ ಪ್ರಕ್ರಿಯೆ ನಿಲ್ಲಿಸದೇ ಇದ್ದರೆ, ಉಳಿದ ನಾಯಕರ ಆಡಿಯೋ ಕೂಡ ರಿಲೀಸ್​ ಆಗಲಿದೆಯಂತೆ. ಬಿಜೆಪಿಯ ಸಣ್ಣಪುಟ್ಟ ನಾಯಕರ ಆಡಿಯೋಗಳನ್ನೇ ಸರ್ಕಾರ ಹಿಡಿದಿಟ್ಟುಕೊಂಡಿದೆ ಅಂದರೆ, ಘಾಟಾನುಘಟಿ ನಾಯಕರ ಆಡಿಯೋ ನಮ್ಮ ಬಳಿ ಇರುವುದಿಲ್ಲವೇ ಎಂದು ಪ್ರಶ್ನಿಸುವಂತಿದೆ ನಾಯಕರ ಮಾತು.

ದುಬೈ ಉದ್ಯಮಿ ಜೊತೆ ಶ್ರೀರಾಮುಲು ಆಪ್ತ ಮಾತನಾಡಿದ್ದಾನೆ ಅನ್ನೋ ಹೇಳಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಆಪರೇಷನ್ ಕಮಲ ಮಾಡೋದು ಬಿಜೆಪಿಯವರ ಹಕ್ಕು, ಅವರು ಆಪರೇಷನ್ ಕಮಲ ಮಾಡಲಿ ಬಿಡಿ. ಅದಕ್ಕೆ ನಾನ್ಯಾಕೆ ಅಡ್ಡಿ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ. ಒಂದು ವೇಳೆ ಬಿಜೆಪಿ ಇದೇ ರೀತಿ ಮುಂದುವರಿಸಿದ್ರೆ ನಾವೂ ಕೂಡ ಬಿಜೆಪಿ ಶಾಸಕರ ರಾಜೀನಾಮೆ ಕೊಡಿಸೋದು ಗೊತ್ತಿದೆ ಎಂದು ಮಂಡ್ಯದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್​ ಪುಟ್ಟರಾಜು ನೇರವಾಗಿಯೇ ಹೇಳಿದ್ದಾರೆ. ಒಟ್ಟಾರೆ ಲೋಕಸಭಾ ಚುನಾವಣೆ ಒಳಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಅನ್ನೋದು ಕಮಲ ನಾಯಕರ ಪ್ಲಾನ್​. ಆದ್ರೆ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡೋದಿಲ್ಲ ಅನ್ನೋದು ಕಾಂಗ್ರೆಸ್​, ಜೆಡಿಎಸ್​ ನಾಯಕರ ದಿಟ್ಟ ನುಡಿಯಾಗಿದೆ.

Leave a Reply