ಜಿಂದಾಲ್​ ಹಾಸ್ಪಿಟಲ್​ನಲ್ಲಿ​ ಆಪರೇಷನ್​ ಕಮಲ..!?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್​ ಶಾಸಕರನ್ನು ಸೆಳೆಯಲು ಬಿಜೆಪಿ ಸಾಕಷ್ಟು ಶ್ರಮವಹಿಸುತ್ತಿದ್ದು, ದುಬೈ ಮೂಲದ ಉದ್ಯಮಿ ಜೊತೆ ಶ್ರೀರಾಮುಲು ಆಪ್ತ ಚರ್ಚೆ ನಡೆಸಿದ್ದಾರೆ ಅನ್ನೋ ಆಡಿಯೋ ವೈರಲ್​ ಆಗಿತ್ತು. ಸರ್ಕಾರ ಅಭಿವೃದ್ಧಿ ಕೆಲಸ ಮಾಡಲು ಬಿಡಬಾರದು ಎಂಬ ಕಾರಣಕ್ಕೆ ಬಿಜೆಪಿ ಈ ಪ್ರಯತ್ನ ಪಡುತ್ತಿದೆ ಅನ್ನೋದು ಸಚಿವ ಕೆ.ಜೆ ಜಾರ್ಜ್​ ಮಾತಾದ್ರೆ, ತಲಾ ಹತ್ತು ಶಾಸಕರಿಗೆ 25 ಕೋಟಿ ರೂಪಾಯಿ ರೀತಿ ಕೊಡಲು 250 ಕೋಟಿ ರೂಪಾಯಿ ಎಲ್ಲಿಂದ ಬರುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಜೊತೆಗೆ ಆಪರೇಷನ್​ ಕಮಲ ಮಾಡಿ, ವಾಮಮಾರ್ಗದಲ್ಲಿ ಅಧಿಕಾರ ಹಿಡಿಯೋಕೆ ಯತ್ನಿಸಿ ಈಗಾಗಲೇ ಬಿಜೆಪಿಯವರು ಒಂದು ಬಾರಿ ಸೋತಿದ್ದಾರೆ. ಭ್ರಷ್ಟಾಚಾರದ ಹಣ ಬಳಸಿ ಸರ್ಕಾರ ಬೀಳಿಸ್ತೇನೆ ಅನ್ನೋದಕ್ಕೆ ನಾಚಿಕೆಯಾಗಲ್ವಾ ಎಂದು ಕಿಡಿ ಕಾರಿದ್ದಾರೆ.

ಈ ನಡುವೆ ಕಾಂಗ್ರೆಸ್​ ಶಾಸಕರನ್ನು ಬಿಜೆಪಿಯ ನಾಯಕ ಜನಾರ್ದನ ರೆಡ್ಡಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ.. ಬೆಂಗಳೂರಿನ ಜಿಂದಾಲ್ ಆಸ್ಪತ್ರೆಗೆ ಮಧ್ಯಾಹ್ನ 3.30ಕ್ಕೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ, ಸಂಜೆ 5.30ರ ತನಕ ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ರು.. 2 ಗಂಟೆಗಳ ಕಾಲ ಜಿಂದಾಲ್​ನಲ್ಲೇ ಬೀಡು ಬಿಟ್ಟಿದ್ದ ಗಣಿಧಣಿ ಜನಾರ್ದನ ರೆಡ್ಡಿ, ಆ ಬಳಿಕ ಜಿಂದಾಲ್​ ಆಸ್ಪತ್ರೆಯಿಂದ ಹೊರಬಂದಿರೋದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಚಿಕಿತ್ಸೆ ನೆಪದಲ್ಲಿ ಈಗಾಗಲೇ ಕಾಂಗ್ರೆಸ್​ನ ಇಬ್ಬರು ಶಾಸಕರು ಜಿಂದಾಲ್​ ಆಸ್ಪತ್ರೆಗೆ ದಾಖಲಾಗಿದ್ದು, ರಾಜಕೀಯ ಮೇಲಾಟಕ್ಕಾಗಿಯೇ ಆಸ್ಪತ್ರೆಗೆ ದಾಖಲಾಗಿದ್ದಾರಾ ಅನ್ನೋ ಅನುಮಾನವೂ ಮೂಡಿದೆ.

ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಸರ್ಕಾರದ ವಿರುದ್ಧ ಛಾಟಿ ಬೀಸುತ್ತಲೇ ಇದ್ದು, ಜರ್ನಾದನ ರೆಡ್ಡಿ ಭೇಟಿ ಮಾಡಿದ್ದರೂ ಮಾಡಿರಬಹುದು ಎನ್ನುವ ಮಾತುಗಳು ಕೇಳಿಬಂದಿವೆ. ಆದ್ರೆ ಈ ಬಗ್ಗೆ ಮಾತನಾಡಿರುವ ಡಾ ಸುಧಾಕರ್​, ನಾನು ಆರೋಗ್ಯ ಸರಿ ಇಲ್ಲದ ಕಾರಣ ಜಿಂದಾಲ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಯಾವುದೇ ನಾಯಕರನ್ನು ಭೇಟಿ ಮಾಡಿಲ್ಲ, ಇದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ.. ಆದ್ರೆ ದುಬೈ ಮೂಲದ ಉದ್ಯಮಿ ಜೊತೆ ಬಿಜೆಪಿ ನಾಯಕ ಎಂದು ಹೇಳಿಕೊಳ್ಳುವ ವ್ಯಕ್ತಿ ಯಾರು ಅನ್ನೋದು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಯಾವುದೇ ದೂರು ದಾಖಲಾಗಿಲ್ಲ. ಸರ್ಕಾರದ ವಿರುದ್ಧ ಬಿಜೆಪಿಯವರು ಹಾಗೂ ವಿರೋಧ ಪಕ್ಷದ ವಿರುದ್ಧ ಆಡಳಿತ ಪಕ್ಷದವರು ವಾಗ್ದಾಳಿ ಮಾಡುತ್ತಲೇ ಕಾಲ ತಳ್ಳುತ್ತಿದ್ದಾರೆ.

Leave a Reply