ಸಮನ್ವಯದ ಸೂತ್ರ ಹುಡುಕಾಟದಲ್ಲಿ ಮೈತ್ರಿ ಸರ್ಕಾರ!?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ದೋಸ್ತಿ ಸರ್ಕಾರ ಸುಗಮ ಆಡಳಿತಕ್ಕಾಗಿ ಸಮನ್ವಯ ಸಮಿತಿ ರಚಿಸಿಕೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ನೇತೃತ್ವದ ಸಮನ್ವಯ ಸಮಿತಿ ಸಭೆ ಇಂದು ನಿಗದಿಯಾಗಿದ್ದು, ಮಹತ್ವದ ಮಾತುಕತೆ ನಡೆಯಲಿದೆ. ಈ ಸಭೆಯಲ್ಲಿ ಚರ್ಚೆಗೆ ಬರಲಿರುವ ಮಹತ್ವದ ಅಂಶಗಳು ಎಂದರೆ.

ಕಾಂಗ್ರೆಸ್ ಅಜೆಂಡಾ

* ಸಂಪುಟ ವಿಸ್ತರಣೆ ಬೇಕಾ..? ಬೇಡ್ವಾ..?
* ವಿಸ್ತರಣೆ ಮಾಡುವುದಾದರೆ ಯಾವ ದಿನ..?
* ಅಧಿವೇಶನಕ್ಕೂ ಮುನ್ನ/ನಂತರ ವಿಸ್ತರಣೆಯ ಸಾಧಕ ಬಾಧಕ ಏನು..?
* ಸಚಿವ ರೇವಣ್ಣ ವಿರುದ್ಧ ಹಾಸನ ಕಾಂಗ್ರೆಸ್ ನಾಯಕರ ದೂರು.
* ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಆಗಿರುವ ಅನುದಾನ ಕೊರತೆ.

ಜೆಡಿಎಸ್ ಅಜೆಂಡಾ

* ಕಾಂಗ್ರೆಸ್ ಶಾಸಕರು, ಸಚಿವರು ಇರುವ ಕಡೆ ಜೆಡಿಎಸ್ ಕಾರ್ಯಕರ್ತರ ನಿರ್ಲಕ್ಷ್ಯ.
* ಸಣ್ಣಪುಟ್ಟ ವಿಚಾರಕ್ಕೂ ಮಾಧ್ಯಮ ಎದುರು‌ ಹೇಳಿಕೆ ವಿಚಾರ.
* ಪದೇ ಪದೇ ಸರ್ಕಾರದ ವಿರುದ್ಧವೇ ‘ಕೈ’ ಶಾಸಕರ ಮಾತು.
* ಸಚಿವ ಸಂಪುಟ ವಿಸ್ತಾರಣೆ, ನಿಗಮ ಮಂಡಳಿ ನೇಮಕ.

ಹೀಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಕಡೆಯಿಂದಲೂ ಹಲವಾರು ವಿಚಾರಗಳ ಬಗ್ಗೆ ಇವತ್ತು ಮಹತ್ವದ ಚರ್ಚೆ ನಡೆಯಲಿದ್ದು, ಕೆಲವೊಂದು ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಅದರಲ್ಲೂ ಸಂಪುಟ ವಿಸ್ತರಣೆ ಬಗ್ಗೆ ತೆಗೆದು ಕೊಳ್ಳುವ ನಿರ್ಧಾರ ಹೊರಬಿದ್ದರೆ ಅದರಿಂದ ಆಗುವ ಲಾಭ ನಷ್ಟದ ಬಗ್ಗೆ ಚರ್ಚೆ ಆಗಲಿದ್ದು, ಯಾವುದೇ ನಿರ್ಧಾರ ಹೊರಬಿದ್ದರೂ ಲಾಭ ಮಾಡಿಕೊಳ್ಳಲು ಕಮಲಪಾಳಯ ಸಜ್ಜಾಗಿದೆ ಎನ್ನಲಾಗಿದೆ.

ಒಂದು ವೇಳೆ ಅಧಿವೇಶನದ ಒಳಗೆ ಸಚಿವ ಸಂಪುಟ ವಿಸ್ತರಣೆಯಾದರೂ ಮೈತ್ರಿ ಸರ್ಕಾರಕ್ಕೆ ಆಪತ್ತು ಎದುರಾಗಲಿದ್ದು, ಸಂಪುಟ ವಿಸ್ತರಣೆ ಮಾಡದಿದ್ದರೂ ದೋಸ್ತಿ ಸರ್ಕಾರಕ್ಕೆ ಇಕ್ಕಟ್ಟು ತಲೆದೋರಿದೆ. ಸಂಪುಟ ವಿಸ್ತರಣೆಯಾಗದಿದ್ದರೆ ಅತೃಪ್ತರ ಬಂಡಾಯ ತೀವ್ರಗೊಳ್ಳುವ ಸಾಧ್ಯತೆ ಇದ್ದು, ವಿಸ್ತರಣೆಯಾಗಿ ಮಂತ್ರಿ ಸ್ಥಾನ ಸಿಗದಿದ್ದರೂ ಅತೃಪ್ತರು ಆಪರೇಶನ್ ಕಮಲಕ್ಕೆ ತುತ್ತಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಗಾಗಿ ಕಾದು ಕುಳಿತಿರುವ ಬಿಜೆಪಿ, ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವ ಲೆಕ್ಕಾಚಾರದಲ್ಲಿ ಮುಳುಗಿದೆ. ಯಾವುದೇ ಕಾರಣಕ್ಕೂ ಅಪಸ್ವರ ಏಳಬಾರದು ಆ ರೀತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿ ಮುಗಿಸಬೇಕು ಅನ್ನೋದು ಸಮನ್ವಯ ಸಮಿತಿ ಸಭೆಯ ಮುಖ್ಯ ಅಜೆಂಡಾ.

ಜೆಡಿಎಸ್‌ ಪಾಲಿನ ಎರಡು ಸ್ಥಾನಗಳು ಹಾಗೂ ಕಾಂಗ್ರೆಸ್ ಪಾಲಿನ 6 ಸಚಿವ ಸ್ಥಾನಗಳು ಭರ್ತಿಯಾದರೆ ಸಚಿವ ಸಂಪುಟ ಜಂಜಾಟ ನಿಲ್ಲಲಿದೆ. ಇರುವ 8 ಸಚಿವ ಸ್ಥಾನಕ್ಕೆ ಮೈತ್ರಿ ಪಕ್ಷದಲ್ಲಿ 30ಕ್ಕೂ ಹೆಚ್ಚು ಆಕಾಂಕ್ಷಿ ಶಾಸಕರಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಸಿಎಂ ಹೆಚ್. ಡಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಶ್ ಅಲಿ ಭಾಗಿಯಾಗಲಿದ್ದಾರೆ.

Leave a Reply