ಲೋಕಸಭಾ ಚುನಾವಣೆ: ಕಾಂಗ್ರೆಸ್ ರಾಫೆಲ್ ಅಸ್ತೃಕ್ಕೆ ಪ್ರತಿಯಾಗಿ ಮೋದಿ ಬ್ರಹ್ಮಾಸ್ತ್ರ!

ಡಿಜಿಟಲ್ ಕನ್ನಡ ಟೀಮ್:

2019ರ ಲೋಕಸಭಾ ಚುನಾವಣೆ ಕಾವು ನಿಧಾನವಾಗಿ ಹೆಚ್ಚುತ್ತಿದೆ. ಕಾಂಗ್ರೆಸ್​ ಮಹಾಘಟಬಂಧನ ಸೂತ್ರ ಹಿಡಿದು ನಿಂತಿದ್ರೆ, ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿರತವಾಗಿದೆ. ಈ ಮಧ್ಯೆ ಕೇಂದ್ರದ ವಿರುದ್ಧ ಸಮರ ಸಾರಲು ಕಾಂಗ್ರೆಸ್ ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣದ ಆರೋಪದ ಅಸ್ತ್ರ ಪ್ರಯೋಗಿಸಿದೆ. ಈಗ ಇದಕ್ಕೆ ಪ್ರತಿಯಾಗಿ ಮೋದಿ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಲು ಸಜ್ಜಾಗುತ್ತಿದ್ದಾರೆ. ಅದುವೇ ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ದಲ್ಲಾಳಿ ಕ್ರಿಶ್ಚಿಯನ್​ ಜೇಮ್ಸ್​.

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಪ್ರಕರಣದಲ್ಲಿ ಬಹುಮುಖ್ಯವಾದ ಡೀಲಿಂಗ್ ಎಂದು ಸುದ್ದಿ ಮಾಡಿದ್ದು ಅಂದ್ರೆ ವಿವಿಐಪಿಗಳಿಗಾಗಿ ಖರೀದಿಸಲು ಮುಂದಾಗಿದ್ದ​ ಅಗಸ್ಟಾ ವೆಸ್ಟ್​ಲ್ಯಾಂಡ್​ ಹೆಲಿಕಾಪ್ಟರ್​ ಹಗರಣ. 3 ಸಾವಿರದ 600 ಕೋಟಿ ರೂಪಾಯಿ ಮೌಲ್ಯದ ಯೋಜನೆ ಇದಾಗಿದ್ದು, ಇದ್ರಲ್ಲಿ ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್​ ಜೇಮ್ಸ್​, 225 ಕೋಟಿ ಹಣ ಕಮಿಷನ್​ ಪಡೆದಿದ್ದ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಬಳಿಕ ಆರೋಪಿ ಗಲ್ಪ್ ರಾಷ್ಟ್ರಗಳಲ್ಲಿ ಅಡಗಿ ಕುಳಿತಿದ್ದ. ಇದೀಗ ಆರೋಪಿ ಕ್ರಿಶ್ಚಿಯನ್​ ಜೇಮ್ಸ್​ನನ್ನು ಗಡಿಪಾರು ಮಾಡಿಸುವ ಮೂಲಕ ಮೋದಿ ಸರ್ಕಾರಕ್ಕೆ ರಾಜತಾಂತ್ರಿಕ ವಿಚಾರದಲ್ಲಿ ಮೇಲುಗೈ ಆಗಿದೆ. ಇದು ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿಸಿದೆ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಶುರುವಾಗಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ತನಿಖೆಗಾಗಿ ಭಾರತಕ್ಕೆ ಕ್ರಿಶ್ಚಿಯನ್ ಮೈಕಲ್​ನನ್ನು ಹಸ್ತಾಂತರ ಮಾಡಬೇಕೆಂದು ಭಾರತ ಸರ್ಕಾರ ಮನವಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಮೈಕಲ್, ‘ತನ್ನನ್ನು ಭಾರತಕ್ಕೆ ಒಪ್ಪಿಸಬಾರದು’ ಎಂದು ಅರ್ಜಿ ಸಲ್ಲಿಸಿದ್ದ. ಆದ್ರೆ‌ ಮೈಕಲ್ ಅರ್ಜಿಯನ್ನು ದುಬೈ ನ್ಯಾಯಾಲಯ ತಳ್ಳಿಹಾಕಿ, ಹಸ್ತಾಂತರಕ್ಕೆ ಸೂಚಿಸಿತ್ತು. ದುಬೈನಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿದ ಅಧಿಕಾರಿಗಳು ದುಬೈನಿಂದ ಭಾರತಕ್ಕೆ ಕಳುಹಿಸಿಕೊಟ್ರು.

ನಿನ್ನೆ ರಾತ್ರಿ 11 ಗಂಟೆ ವೇಳೆಗೆ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದ ಮೈಕಲ್ ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಕೋರ್ಟ್‌ಗೆ ಹಾಜರು ಮಾಡಲಿದ್ದಾರೆ. ನಂತರ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಯುಪಿಎ ಸರ್ಕಾದ ಅವಧಿಯಲ್ಲಿ ಆಗಿದ್ದ ರಫೇಲ್ ಒಪ್ಪಂದವನ್ನು ರದ್ದು ಮಾಡಿದ ಬಿಜೆಪಿ ಸರ್ಕಾರ, ಕೋಟ್ಯಂತರ ರೂಪಾಯಿ ಲೂಟಿ ಮಾಡಿದೆ ಅಂತ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅಬ್ಬರಿಸುತ್ತಿದ್ರು. ಇದೀಗ ಕಾಂಗ್ರೆಸ್ ಬಾಯಿ ಮುಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮೈಕಲ್ ನನ್ನು ಹೊಸ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಳ್ಳಲಿದ್ದಾರೆ.

ಕಾಂಗ್ರೆಸ್‌ಗೆ ಆತಂಕ ಯಾಕೆ?

ಯುಪಿಎ ಸರ್ಕಾರದ ಅವಧಿಯಲ್ಲಿ ಕಾಮನ್‌ವೆಲ್ತ್, 2ಜಿ ತರಂಗಾಂತರ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ, ಅಗಸ್ಟಾ ವೆಸ್ಟ್‌ಲ್ಯಾಂಡ್ ಖರೀದಿ ಹಗರಣ ಸೇರಿದಂತೆ‌ ಸಾಕಷ್ಟು ಪ್ರಕರಣಗಳು ಸದ್ದು ಮಾಡಿದ್ವು. ಆ ಕೇಸ್‌ಗಳಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಸಾಬೀತಾಗದಿದ್ದರೂ ಜನರ ಮನಸ್ಸಿನಲ್ಲಿ‌ ಕೆಟ್ಟ ಪರಿಣಾಮ ಬೀರಿದ ಕಾರಣದಿಂದಲೇ ಮೋದಿ ನೇತೃತ್ವದಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಅಧಿಕಾರ ಹಿಡಿದಿದ್ದು. ಕಾಂಗ್ರೆಸ್ ರಚಿಸುತ್ತಿರುವ ಮಹಾಘಟಬಂಧನ್ ಲೋಕಸಭಾ ಚುನಾವಣೆಯಲ್ಲಿ ರಫೇಲ್ ಯುದ್ಧ ವಿಮಾನದ ಹಗರಣವನ್ನು ದೊಡ್ಡದಾಗಿ ಬಳಸಿಕೊಳ್ಳಲು ಚಿಂತಿಸುತ್ತಿರುವಾಗ, ಕಾಂಗ್ರೆಸ್ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಪ್ರಮುಖ ರೂವಾರಿ ಬಂಧನ ಆಗಿರೋದು ಕಾಂಗ್ರೆಸ್ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.‌

ಒಂದು ವೇಳೆ ಬಂಧಿತ ಆರೋಪಿ ಏನಾದರೂ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರು ಹೇಳಿ ಬಿಟ್ಟರೆ ಚುನಾವಣೆಯಲ್ಲಿ ಕಾಂಗ್ರೆಸ್‌‌ಗೆ ದೊಡ್ಡ ಹೊಡೆತ ಬೀಳೋದು ಗ್ಯಾರೆಂಟಿ.

Leave a Reply