ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಲಾಭ; ಆದರೂ ರಾಜಕೀಯ ಕಾರಣಕ್ಕಾಗಿ ವಿರೋಧ; ಡಿಕೆಶಿ ಆರೋಪ

ಡಿಜಿಟಲ್ ಕನ್ನಡ ಟೀಮ್:

ತಮಗೇ ಹೆಚ್ಚು ಅನುಕೂಲ ಆಗುವ ಮೇಕೆದಾಟು ಅಣೆಕಟ್ಟೆ ಯೋಜನೆಯನ್ನು ಸಂಭ್ರಮಿಸುವ ಬದಲು ತಮಿಳುನಾಡು ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ತಮಿಳುನಾಡು ಮೇಕೆದಾಟು ವಿಚಾರ ಚರ್ಚೆಗೆ ವಿಶೇಷ ಅಧಿವೇಶನ ಕರೆದಿರುವುದು ದಿಗ್ಭ್ರಮೆ ಮೂಡಿಸಿದೆ. ಇದರ ಜತೆಗೆ ತಮಿಳುನಾಡು ತಕರಾರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಬೇಕಾದ ಅರ್ಜಿ ಸ್ವರೂಪದ ಬಗ್ಗೆಯೂ ಇತ್ಯರ್ಥ ಮಾಡಲಾಗಿದೆ. ತಮಿಳುನಾಡು ಜತೆ ನಮಗೆ ಮನಸ್ತಾಪ, ತಗಾದೆ ಬೇಕಿಲ್ಲ. ಆದರೆ ಯಾವುದೇ ಕಾರಣಕ್ಕೂ ರಾಜ್ಯದ ಹಿತ, ಹಕ್ಕು ಬಲಿ ಕೊಡುವುದಿಲ್ಲ. ತಮಿಳುನಾಡಿಗೆ ಇರುವ ಅನುಮಾನಗಳನ್ನು ಬಗೆಹರಿಸಲು ಭೇಟಿ ಅವಕಾಶ ನೀಡುವಂತೆ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಅವರಿಗೆ ಪತ್ರ ಬರೆದು ಕೋರಿದ್ದೇನೆ. ಇದಕ್ಕಿಂಥ ಇನ್ನೇನು ತಾನೇ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಕೃಷ್ಣಾ, ಕಾವೇರಿ, ಮಹದಾಯಿ ಮತ್ತಿತರ ನದಿ ನೀರು ಬಳಕೆ ವಿಚಾರದಲ್ಲಿ ನೆರೆಹೊರೆ ರಾಜ್ಯಗಳ ಜತೆ ವ್ಯಾಜ್ಯಗಳ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲು ಕರೆದಿದ್ದ ಮಾಜಿ ಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಸಚಿವರು, ಕಾನೂನು ಮತ್ತು ನೀರಾವರಿ ತಜ್ಞರು ಮತ್ತು ಇಲಾಖೆ ಅಧಿಕಾರಿಗಳ ಸಭೆ ನಂತರ ಮಾಧ್ಯಮದವರ ಜತೆ ಗುರುವಾರ ಅವರು ಮಾತನಾಡಿದರು. ಒಟ್ಟಾರೆ ಅವರು ಹೇಳಿದ್ದಿಷ್ಟು:

ಕಾವೇರಿ ನದಿ ಪ್ರಾಧಿಕಾರ ಕರ್ನಾಟಕವು ತಮಿಳುನಾಡಿಗೆ ಬಿಡುಗಡೆ ಮಾಡಲು ನಿಗದಿ ಮಾಡಿರುವ ಪ್ರಮಾಣ ವಾರ್ಷಿಕ 177.25 ಟಿಎಂಸಿ. ಉತ್ತಮ ಮಳೆ ಹಿನ್ನೆಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಕರ್ನಾಟಕ ಬಿಡುಗಡೆ ಮಾಡಿರುವ ಪ್ರಮಾಣ 397 ಟಿಎಂಸಿ. ಆದರೆ ತಮಿಳುನಾಡು ಬಳಕೆ ಮಾಡಿಕೊಂಡದ್ದು ಕೇವಲ 150 ಟಿಎಂಸಿ. ಉಳಿದ ನೀರು ಸಮುದ್ರ ಸೇರಿ ಪೋಲಾಯಿತು. ಈಗ ಮೇಕೆದಾಟುವಿನಲ್ಲಿ ನಾವು ಮಾಡುತ್ತಿರುವ ಯೋಜನೆಯಿಂದ ಸಂಗ್ರಹವಾಗುವ ನೀರಿನ ಪ್ರಮಾಣ ಕೇವಲ 60 ಟಿಎಂಸಿ. ವಿದ್ಯುತ್ ಉತ್ಪಾದನೆ ನಂತರ ಆ ನೀರು ಕೂಡ ತಮಿಳುನಾಡಿಗೇ ಹರಿದು ಹೋಗುತ್ತದೆ. ಅವರಿಗೇ ಬಳಕೆ ಆಗುತ್ತದೆ. ನಮ್ಮ ದುಡ್ಡಿನಲ್ಲಿ ಅವರಿಗಾಗಿ ನೀರು ಸಂಗ್ರಹ ಮಾಡುವ ಈ ಯೋಜನೆಯನ್ನು ಅವರು ವಿರೋಧಿಸುತ್ತಿರುವುದು ಹತ್ತಿರದಲ್ಲೇ ಇರುವ ಲೋಕಸಭೆ ಚುನಾವಣೆಗಾಗಿಯೇ ಹೊರತು ಬೇರಾವುದಕ್ಕೂ ಅಲ್ಲ.

ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ವಾಸ್ತವವಾಗಿ ಎರಡೂ ರಾಜ್ಯಗಳಿಗೂ ಅನುಕೂಲ ಆಗಲಿದೆ. ಅದರಲ್ಲೂ ತಮಿಳುನಾಡಿಗೆ ಶೇಕಡಾ 90 ರಷ್ಟು ಅನುಕೂಲ ಆಗಲಿದೆ. ಏಕೆಂದರೆ ಕರ್ನಾಟಕದ ಒಂದೇ ಒಂದು ಎಕರೆ ಭೂಮಿಯಲ್ಲೂ ನೀರಾವರಿ ಮಾಡಲು ಆಗುವುದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ಎಲ್ಲಕ್ಕಿಂಥ ಮಿಗಿಲಾಗಿ ನದಿ ನೀರು ನಿರ್ವಹಣೆ ಕಾವೇರಿ ಜಲ ಆಯೋಗದ ಪರಿಮಿತಿಯಲ್ಲಿ ಬರುವುದರಿಂದ ರಾಜ್ಯ ಸರಕಾರ ತನ್ನ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ.

ಮೇಕೆದಾಟು ಯೋಜನೆಯಿಂದ ರಾಜ್ಯದ 4996 ಹೆಕ್ಟೇರ್ ಭೂಮಿ ಮುಳುಗಡೆ ಆಗುತ್ತಿದೆ. ಇದರಲ್ಲಿ 296 ಎಕರೆ ರೆವಿನ್ಯೂ, 500 ರಿಂದ 600 ಎಕರೆ ರೈತರ ಭೂಮಿ ಇದೆ. ಉಳಿದಿದ್ದೆಲ್ಲವೂ ಅರಣ್ಯ ಭೂಮಿ. ನೀರಾವರಿಗೆ ಒಂದು ಎಕರೆ ಕೂಡ ಉಳಿಯುವುದಿಲ್ಲ. ಕೇಂದ್ರ ಸರಕಾರ ಅದೆಲ್ಲವನ್ನೂ ಕೂಲಂಕಷವಾಗಿ ಪರಾಮರ್ಶಿಯೇ ಯೋಜನೆಗೆ ಅನುಮತಿ ನೀಡಿದೆ. ನ್ಯಾಯಾಲಯ, ಕೇಂದ್ರ ಜಲ ಆಯೋಗ ಕೊಟ್ಟಿರುವ ಆದೇಶ ಮತ್ತು ಅವಕಾಶದ ಪರಿಮಿತಿಯಲ್ಲೇ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಅದಕ್ಕಿಂಥ ಒಂದಿಂಚೂ ಆಚೀಚೆ ಕದಲುವುದಿಲ್ಲ. ಡಿಪಿಆರ್ ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾನೂನು ಪರಿಮಿತಿಯಲ್ಲಿ ರಾಜ್ಯದ ಹಿತ ಕಾಯಲಾಗುವುದು.

ತಮಿಳುನಾಡು ತಡೆಯಾಜ್ಞೆ ತರಲು ಪ್ರಯತ್ನಿಸುತ್ತಿದೆ. ಯೋಜನೆ ಉದ್ದೇಶ ಯಾರಿಗೂ ಅರ್ಥವಾಗದ ಬ್ರಹ್ಮವಿದ್ಯೆಯೇನೂ ಅಲ್ಲ. ತಮಿಳುನಾಡು ಸುಮ್ಮನೆ ಎಲ್ಲರನ್ನೂ ದೂರುವ ಕೆಲಸ ಮಾಡುತ್ತಿದೆ. ಆದರೆ ನಮ್ಮ ಪಾಡಿಗೆ ನಮ್ಮ ಕೆಲಸ ನಾವು ಮಾಡುತ್ತೇವೆ. ಯಾರಿಗೂ ತೊಂದರೆ ಕೊಡುವುದಿಲ್ಲ.

ಇವತ್ತು ರಾಜ್ಯದ ಎಲ್ಲ ಮಾಜಿ ಸಿಎಂಗಳು ಹಾಗೂ ನೀರಾವರಿ ಸಚಿವರ ಸಲಹೆ ಕೇಳಲು ಅವರನ್ನು ಸಭೆಗೆ ಆಹ್ವಾನಿಸಿದ್ದೆವು. ಏಕೆಂದರೆ ರೈತರ ಮತ್ತು ರಾಜ್ಯದ ಹಿತ ಕಾಪಾಡಲು ಅವರೆಲ್ಲ ಹಿಂದಿನಿಂದ ಹೋರಾಡುತ್ತಾ ಬಂದಿದ್ದಾರೆ. ದೇವೇಗೌಡರು, ಎಸ್.ಎಂ. ಕೃಷ್ಣ ಸಾಹೇಬರು, ಸದಾನಂದಗೌಡರು, ಯಡಿಯೂರಪ್ಪನವರನ್ನೂ ಕರೆಯಲಾಗಿತ್ತು. ಆದರೆ ಪೂರ್ವನಿಗದಿತ ಕಾರ್ಯಕ್ರಮ ನಿಮಿತ್ತ ಬೇರೆಡೆ ಇರುವುದರಿಂದ ಸಭೆಗೆ ಬಂದಿಲ್ಲ. ಸಿದ್ದರಾಮಯ್ಯ ಹಾಗೂ ಶೆಟ್ಟರ್ ಬಂದಿದ್ದರು. ಕೃಷ್ಣ ಮಹಾದಾಯಿ ಹಾಗೂ ಕಾವೇರಿ ವಿಚಾರಕ್ಕೆ ಅವರವರದೆ ಆದ ಸಲಹೆಗಳನ್ನು ನೀಡಿದ್ದಾರೆ. ಯಾವ ಯೋಜನೆಗೆ ಎಷ್ಟು ಪ್ರಾಮುಖ್ಯತೆ ನೀಡಬೇಕೆಂದು ಮಾರ್ಗದರ್ಶನ ಮಾಡಿದ್ದಾರೆ. ನಮ್ಮ ತಾಂತ್ರಿಕ ವರ್ಗ, ಕಾನೂನು, ನೀರಾವರಿ ತಜ್ಞರು ಸಭೆಯಲ್ಲಿದ್ದರು. ಮುಖ್ಯವಾಗಿ ಮೇಕೆದಾಟು ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ತಮಿಳುನಾಡು ಒಂದು ವಿಶೇಷ ಅಧಿವೇಶನ ಕರೆದಿದೆ. ನಾವು ನಮ್ರತೆಯಿಂದ ಅವರನ್ನು ಮನವಿ ಮಾಡಿದ್ದೇವೆ. ಅವರು ನಮ್ಮ ಸಹೋದರರು ಇದ್ದಂತೆ. ಸಹೋದರರ ಜತೆ ಜಗಳವಾಡುವುದು ಸರಿಯೇ? ಎರಡೂ ರಾಜ್ಯಗಳ ಹಿತಕ್ಕಾಗಿ ಇಬ್ಬರೂ ಶ್ರಮಿಸಬೇಕಿದೆ.

ನಾಳೆ ಮೇಕೆದಾಟು ಯೋಜನೆ ಸ್ಥಳಕ್ಕೆ ನಾವು ಭೇಟಿ ನೀಡುತ್ತಿದ್ದೇವೆ. ನಮ್ಮ ರಾಜ್ಯದ ಹಣದಿಂದ ನಮ್ಮ ಜಾಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಅದರ ಉಪಯೋಗ ನಮಗಿಂತ ಅವರಿಗೆ ಹೆಚ್ಚು ಆಗುತ್ತದೆ. ನಮಗೆ ವಿದ್ಯುತ್ ಮಾತ್ರ ಉಪಯೋಗವಾಗುತ್ತದೆ. ಒಂದು ಸಾವಿರ ಕೋಟಿ ರುಪಾಯಿ ಯೋಜನೆಯನ್ನು ನಾವು ಆಗ ತಯಾರಿಸಿದ್ದೆವು. ಇದು ನೀರಾವರಿ ಯೋಜನೆಯಲ್ಲ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ತಮಿಳುನಾಡು ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈಗ ನಾವೇ ಅವರ ಮನೆ ಬಾಗಿಲಿಗೆ ಹೋಗಿ ತಿಳಿಸಿ ಹೇಳುತ್ತೇವೆ. ಮಹಾದಾಯಿ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ. ಅದನ್ನು ಪ್ರಶ್ನಿಸಿದ್ದೇವೆ. ಆದರೆ ತೀರ್ಪಿನಲ್ಲಿರುವ ಅಂಶಗಳ ಪ್ರಕಾರ ಯೋಜನೆ ಅನುಷ್ಠಾನಕ್ಕೆ ತರುತ್ತೇವೆ.

Leave a Reply