ಮೇಕೆದಾಟು ಯೋಜನೆ ವಿವರಿಸಲು ಕಾಲಾವಕಾಶಕ್ಕಾಗಿ ತಮಿಳುನಾಡು ಸಿಎಂಗೆ ಡಿಕೆಶಿ ಪತ್ರ

 

ಡಿಜಿಟಲ್ ಕನ್ನಡ ಟೀಮ್

ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗುವ ಮೇಕೆದಾಟು ಯೋಜನೆ ಬಗ್ಗೆ ವಿವರಣೆ ನೀಡಲು ಕಾಲಾವಕಾಶ ನೀಡುವಂತೆ ರಾಜ್ಯ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಗುರುವಾರ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ವಿಶೇಷ ಅಧಿವೇಶನ ಕರೆಯಲಾಗಿತ್ತು. ಕರ್ನಾಟಕ ಸರ್ಕಾರದ ಯೋಜನೆ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದೆ. ಹೀಗಾಗಿ ರಾಜ್ಯದ ಯೋಜನೆಯನ್ನು ವಿವರಿಸಿ, ಅವರಲ್ಲಿ ಯೋಜನೆ ಕುರಿತು ಉದ್ಭವಿಸಿರುವ ಗೊಂದಲ ಬಗೆಹರಿಸಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಚಿವ ಡಿಕೆಶಿ ಪತ್ರದ ಸಾರಾಂಶ…
‘ಕಾವೇರಿ ಕರ್ನಾಟಕ ಮತ್ತು ತಮಿಳುನಾಡಿನ ಜೀವಜಲವಾಗಿದ್ದು, ಎರಡೂ ರಾಜ್ಯದ ಜನರಿಗೆ ಕಾವೇರಿ ಪವಿತ್ರ ನದಿ ಎಂಬುದು ನಿಮಗೂ ತಿಳಿದಿದೆ. ಕಾವೇರಿ ವಿಚಾರವಾಗಿ ಉಭಯ ರಾಜ್ಯಗಳ ನಡುವೆ ಉದ್ಭವಿಸಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎರಡೂ ರಾಜ್ಯಗಳ ಸರ್ಕಾರ ಹಾಗೂ ಜನರು ಎದುರುನೋಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ರೂಪಿಸುವ ಮೂಲಕ ಶಾಶ್ವತ ಪರಿಹಾರ ಕಂಡು ಕೊಳ್ಳಲು ಮುಂದಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೇ. ಈ ಯೋಜನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗುವ ನೀರನ್ನು ನ್ಯಾಯಯುತವಾಗಿ ಹರಿಸಲಾಗುವುದು.

ಈ ವರ್ಷದಂತೆ ಮುಂಗಾರಿನಲ್ಲಿ ಅತಿ ಹೆಚ್ಚು ಮಲೆಯಾದ ಸಂದರ್ಭದಲ್ಲಿ ಅನಾವಶ್ಯಕವಾಗಿ ಮೆಟ್ಟೂರು ಜಲಾಶಯದಿಂದ ಸಮುದ್ರಕ್ಕೆ ಅನಾವಶ್ಯಕವಾಗಿ ನೀರು ಬಿಟ್ಟು ಅದು ಸಮುದ್ರ ಸೇರುವುದನ್ನು ತಪ್ಪಿಸಬೇಕಾಗಿದೆ.

ಮೇಕೆದಾಟು ಯೋಜನೆಯ ಉದ್ದೇಶ ಒಳ್ಳೆಯದಿದ್ದರೂ ತಮಿಳುನಾಡು ಸರ್ಕಾರ ಹಾಗೂ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ.

ನಿಮ್ಮಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಲು ಯೋಜನೆಯ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದಿಡಲು ನಾವು ಬಯಸುತ್ತೇವೆ. ಹೀಗಾಗಿ ನಿಮ್ಮ ಭೇಟಿಗೆ ಕಾಲಾವಕಾಶ ಬೇಕಾಗಿದೆ.’

Leave a Reply