ತೆಲಂಗಾಣ ಮತದಾರರಿಗೆ ಮೋದಿ ಕೊಟ್ಟಿದ್ದು ಕರ್ನಾಟಕದ ಉದಾಹರಣೆ..!

ಡಿಜಿಟಲ್ ಕನ್ನಡ ಟೀಮ್:

ಆಂಧ್ರಪ್ರದೇಶದಿಂದ ಬೇರ್ಪಟ್ಟ ಬಳಿಕ 2ನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ತೆಲಂಗಾಣದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಕಳೆದ ಬಾರಿ ಹೊಸದಾಗಿ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ರಾಜ್ಯ ಉಗಮವಾಗಲು ಕಾರಣವಾಗಿದ್ದು ಯುಪಿಎ ಸರ್ಕಾರವೇ ಆದರೂ ಅದರ ಮುಂದಾಳತ್ವ ವಹಿಸಿದ್ದು ಕೆ ಚಂದ್ರಶೇಖರ್ ರಾವ್. ಹಾಗಾಗಿ ಜನರು ಕೆ. ಚಂದ್ರಶೇಖರ ರಾವ್ ಅವರ ನೇತೃತ್ವದ ಟಿಆರ್‌ಎಸ್ ಬೆಂಬಲಿಸಿದ್ರು. ಸದ್ಯದ ಪರಿಸ್ಥಿತಿ ಐದು ವರ್ಷದ ಹಿಂದೆ ಇದ್ದಂತೆ ಇಲ್ಲ. ಈಗ ಟಿಆರ್‌ಎಸ್ ಗೆಲುವು ನಿಶ್ಚಿತ ಎನ್ನಲು ಆಗುತ್ತಿಲ್ಲ ಅದೇ ಕಾರಣಕ್ಕಾಗಿ ಟಿಆರ್‌ಎಸ್ ಕಾಂಗ್ರೆಸ್ ವಿರುದ್ಧ ಕೆಂಡಕಾರುತ್ತಿದೆ. ಜೊತೆಗೆ ಬಿಜೆಪಿ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದೆ. ಈ ಸೂತ್ರ ಪ್ರಚಾರ ಸಭೆ, ಭಾಷಣ ಶೈಲಿಯಲ್ಲಿ ಕಾಣಿಸುತ್ತಿದೆ. ಇದನ್ನೇ ರಾಹುಲ್ ಗಾಂಧಿ ಪ್ರಚಾರದ ವೇಳೆ ಹೇಳುತ್ತಾ ಆಕ್ರೋಶ ಹೊರ ಹಾಕಿದ್ರು. ಆ ಮಾತಿಗೆ ಉತ್ತರವಾಗಿ ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ ಮತದಾರರಿಗೆ ಕರ್ನಾಟಕದ ಉದಾಹರಣೆ ಕೊಟ್ಟಿದ್ದಾರೆ.

ನಾಳೆ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದ್ದು, ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಮಾಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಪ್ರಚಾರ ನಡೆಸುತ್ತಾ ಟಿಆರ್‌ಎಸ್ ಹಾಗೂ ಅಸಾದುದ್ದೀನ್ ಓವೈಸಿ ಪಕ್ಷಗಳು ಬಿಜೆಪಿ ಬಿ ಟಿಮ್ ರೀತಿ ಕೆಲಸ ಮಾಡುತ್ತಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವುದೇ ಅವರ ಉದ್ದೇಶವಾಗಿದೆ. ನೇರವಾಗಿ ಕಾಂಗ್ರೆಸ್ ಎದುರಿಸಿ ಗೆಲ್ಲಲಾಗದ ಪ್ರಧಾನಿ ನರೇಂದ್ರ ಮೋದಿ ಅಸಾದುದ್ದೀನ್ ಓವೈಸಿ ಹಾಗೂ ಕೆ. ಚಂದ್ರಶೇಖರ್ ರಾವ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕೆ ಮಾಡಿದ್ರು.

ರಾಹುಲ್ ಗಾಂಧಿ ಕಳೆದ ಮೇನಲ್ಲಿ ಚುನಾವಣೆ ಎದುರಿಸಿದ ಕರ್ನಾಟಕದಲ್ಲಿ ಕೂಡ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಪ್ರಚಾರ ನಡೆಸಿದ್ರು. ಮಾಜಿ ಪ್ರಧಾನಿ ದೇವೇಗೌಡರನ್ನು ಹೆಚ್.ಡಿ ಕುಮಾರಸ್ವಾಮಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ರು. ಆದ್ರೆ ಚುನಾವಣೆಯಲ್ಲಿ ಪೂರ್ಣ ಫಲಿತಾಂಶ ಹೊರಬರುವ ಮುಂಚೆಯೇ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಜೆಡಿಎಸ್‌ನವರ ಮನೆ ಬಾಗಿಲಿನಲ್ಲಿ ನಿಂತಿದ್ದರು. ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿ ಮಾತನ್ನು ನಂಬಬೇಡಿ ಎಂದು ಕರುನಾಡ ಸಾಕ್ಷಿಯನ್ನು ತೆಲಂಗಾಣ ಜನರ ಎದುರು ಇಟ್ಟಿದ್ದಾರೆ. ನಾಳೆ ಮತದಾನ ನಡೆಯಲಿದ್ದು, ಮೋದಿ ಹೇಳಿದ ಕರ್ನಾಟಕದ ಸಾಕ್ಷಿಯನ್ನು ತೆಲಂಗಾಣ ಜನ ಎಷ್ಟರ ಮಟ್ಟಿಗೆ ನಂಬಿದ್ದಾರೆ ಅನ್ನೋದು ಡಿಸೆಂಬರ್ 11ಕ್ಕೆ ಗೊತ್ತಾಗಲಿದೆ.

Leave a Reply