ಪಂಚರಾಜ್ಯದಲ್ಲಿ ಬಿಜೆಪಿಗೆ ಮುಖಭಂಗ..!

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಯ ಪ್ರಕಾರವೇ ಫಲಿತಾಂಶ ಹೊರಹೊಮ್ಮಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಛತ್ತೀಸ್‌ಗಢದಲ್ಲಿ ಭರ್ಜರಿ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.

ಇನ್ನೂ ಆಂಧ್ರದಿಂದ ವಿಭಜನೆಯಾಗಿ ಎರಡನೇ ಬಾರಿಗೆ ಚುನಾವಣೆ ಎದುರಿಸಿದ‌ ತೆಲಂಗಾಣ ಜನತೆ ಎರಡನೇ ಬಾರಿಗೂ ಕೆ.ಚಂದ್ರಶೇಖರ್ ರಾವ್ ಅವರ ಪಕ್ಷಕ್ಕೆ ಮತ್ತೆ ಜೈ ಎಂದಿದ್ದಾರೆ. ಇನ್ನು ಮಿಜೋರಾಂನಲ್ಲಿ ಎಂಎನ್‌ಎಫ್ ಭರ್ಜರಿ ಗೆಲುವು ಸಾಧಿಸಿದೆ.

ರಾಜಸ್ಥಾನ ಹಾಗೂ ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಈಗ ಕಾಂಗ್ರೆಸ್ ಅಧಿಕಾರವನ್ನು ಬಿಜೆಪೀಯಿಂದ ಕಿತ್ತುಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿ ಎಂದು ಬಿಂಬಿತವಾಗಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಬಿಜೆಪಿ ಮೂರು ರಾಜ್ಯಗಳಲ್ಲಿ ತನ್ನ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಮೂರು ದೊಡ್ಡ ರಾಜ್ಯಗಳಲ್ಲಿ ಅಧಿಕಾರ ಹಿಡಿದುಕೊಂಡಿದೆ. ಇದರೊಂದಿಗೆ ಕಾಂಗ್ರೆಸ್ ಮುಕ್ತ ಭಾರತ ಮಂತ್ರ ಜಪಿಸುತ್ತಿದ್ದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.

ಈ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ನಾಯಕತ್ವಕ್ಕೆ ಹೊಸ ಮೆರುಗು ಬಂದಿದ್ದು, ಲೋಕಸಭೆ ಚುನಾವಣೆ ಎದುರಿಸಲು ಹೊಸ ಉತ್ಸಾಹ ಬಂದಂತಾಗಿದೆ.

ಇದು ಲೋಕಸಭಾ ಚುನಾವಣೆಗೆ ದಿಕ್ಸೂಚಿಯಲ್ಲ, ಸ್ಥಳೀಯ ಸಮಸ್ಯೆಗಳ ಆಧಾರದಲ್ಲಿ ಚುನಾವಣೆ ನಡೆಯುತ್ತದೆ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ.

Leave a Reply