ಕುಮಾರಸ್ವಾಮಿಯನ್ನು ಹೆಬ್ಬೆಟ್ಟು ಸಿಎಂ ಎಂದ ಬಸವರಾಜ ಹೊರಟ್ಟಿ

ಡಿಜಿಟಲ್ ಕನ್ನಡ ಟೀಮ್:

ದೇಶ ಹಾಗೂ ರಾಜ್ಯದಲ್ಲಿ ಹಲವಾರು ಜನರು ಪ್ರಧಾನಿ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಅದರಲ್ಲಿ ಕೆಲವರು ಸರ್ವಾಧಿಕಾರಿಗಳು, ಇನ್ನು ಕೆಲವರು ಉತ್ತಮ ಆಡಳಿತಗಾರರು ಎನಿಸಿಕೊಂಡಿದ್ದಾರೆ. ಮತ್ತೆ ಕೆಲರವನ್ನು ರಬ್ಬರ್ ಸ್ಟಾಂಪ್, ಸೂತ್ರದ ಬೊಂಬೆ, ರಿಮೋಟ್ ಕಂಟ್ರೋಲ್ ಎಂದು ಟೀಕೆ ಎದುರಿಸಿರುವುದು ಇತಿಹಾಸದಲ್ಲಿ‌ ದಾಖಲಾಗಿದೆ. ಎರಡು ಬಾರಿ‌ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು‌ ಸೋನಿಯಾ ಗಾಂಧಿ ಅವರ ರಬ್ಬರ್ ಸ್ಟಾಂಪ್ ಎನ್ನಲಾಗ್ತಿತ್ತು. ಅದೇ ರೀತಿ ಕರ್ನಾಟಕದಲ್ಲಿ ಧರಂಸಿಂಗ್ ಅವರು ಜೆಡಿಎಸ್ ಬೆಂಬಲ ಪಡೆದು ಸಿಎಂ ಆಗಿದ್ದಾಗ, ದೇವೇಗೌಡರ ಸೂತ್ರದ ಗೊಂಬೆ ಅನ್ನೋ ಮಾತು ಇತ್ತು. ಇದೀಗ ಕಾಂಗ್ರೆಸ್ ಬೆಂಬಲ ಪಡೆದು ಸಿಎಂ ಆಗಿರುವ ಕುಮಾರಸ್ವಾಮಿ ಕೂಡ ಹೆಬ್ಬೆಟ್ಟು ಸಿಎಂ ಎನ್ನುವುದು ಅವರದೇ ಪಕ್ಷದ ನಾಯಕರ ನೇರಾನೇರ ಆರೋಪ!

ಸಭಾಪತಿ ಹುದ್ದೆ ಕೈ ತಪ್ಪಿದ್ದಕ್ಕೆ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್ ಮತ್ತು ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಕೇವಲ ಹೆಬ್ಬೆಟ್ಟು ಸಿಎಂ ಆಗಿದ್ದಾರೆ. ಕಾಂಗ್ರೆಸ್‌ನವರು ಹೇಳಿದ್ದಕ್ಕೆ ಹೆಬ್ಬೆಟ್ಟು ಒತ್ತುತ್ತಿದ್ದಾರೆ. ಹೀಗಾದರೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ ಎಂದಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ, ಕೆಪಿಎಸ್‌ಸಿ ಹುದ್ದೆ ಸೇರಿದಂತೆ ಯಾವುದೇ ಆಗಲಿ ಇವೆಲ್ಲವುಗಳ ವಿಚಾರದಲ್ಲಿ ಕಾಂಗ್ರೆಸ್ ಹೇಳಿದ ಹಾಗೆ ಸಿಎಂ ಕುಮಾರಸ್ವಾಮಿ ಹೆಬ್ಬೆಟ್ಟು ಒತ್ತುತ್ತಿದ್ದಾರೆ ಎಂದು ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಸಿಎಂ ಸಿಕ್ಕಿದಾಗ ನೀವು ಬರೇ ಹೆಬ್ಬೆಟ್ಟು ಸಿಎಂ ಆಗಿದ್ದೀರಾ ಎಂದು ನೇರವಾಗಿಯೇ ಹೇಳಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್ ಮೈತ್ರಿ ಸೂತ್ರ ಪಾಲಿಸುತ್ತಿಲ್ಲ. ಕಾಂಗ್ರೆಸ್‌ನವರೇ ಹಾಗೆ, ಮೊದಲು ಅನ್ ಕಂಡೀಶನಲ್ ಅಂದ್ರು ಈಗ ಕಂಡೀಶನ್ ಹಾಕ್ತಿದಾರೆ. ಕಾಂಗ್ರೆಸ್‌ನಲ್ಲಿಯೂ ಕೂಡ ಒಗ್ಗಟ್ಟಿಲ್ಲ. ಸಿದ್ದರಾಮಯ್ಯ ಎಸ್.ಆರ್‌ ಹುಡಪಾಟೀಲ್‌ರನ್ನು ಸಭಾಪತಿ ಮಾಡಬೇಕೆಂದಿದ್ದರು. ಜಿ. ಪರಮೇಶ್ವರ್ ಅವರು ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಸಭಾಪತಿ ಮಾಡಿದ್ದಾರೆ. ಕಾಂಗ್ರೆಸ್‌ನ ಈ ವರ್ತನೆಯನ್ನು ಪ್ರಶ್ನೆ ಮಾಡಿ ಅಂತ ವರಿಷ್ಠರಿಗೆ ಹೇಳ್ತೀನಿ ಎಂದು ಗುಡುಗಿದ್ದಾರೆ.

ಬಸವರಾಜ ಹೊರಟ್ಟಿಯವರ ಹೆಬ್ಬೆಟ್ಟು ಸಿಎಂ ಹೇಳಿಕೆ ಬಗ್ಗೆ ಹಲವಾರು ಜನ ಮಾತನಾಡಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ಕೈ ತಪ್ಪಿದ್ದು ಶಾಕಿಂಗ್ ಸುದ್ದಿ. ಅತಿ ಹೆಚ್ಚು ಬಾರಿ ಎಂಎಲ್‌ಸಿ ಆಗಿ ಆಯ್ಕೆ ಆಗಿದ್ದವರು. ಅವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ರೀತಿ ತಾರತಮ್ಯ ಮಾಡಲು ಸರ್ಕಾರ ಉತ್ತೇಜಿಸುತ್ತಿದೆ. ಕಾಂಗ್ರೆಸ್‌ನಿಂದ ಎಸ್.ಆರ್ ಪಾಟೀಲ್‌ಗೆ ಸಭಾಪತಿ ಸ್ಥಾನ ಸಿಗುತ್ತೆ ಅಂದಿದ್ದರು. ಅವರಿಗೂ ನೀಡಿಲ್ಲ. ಇದು ಮೈತ್ರಿ ವಿರುದ್ಧದ ನಡೆ. ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರಕ್ಕೆ ಪೆಟ್ಟು ಬೀಳಲಿದೆ. ಸರ್ಕಾರ ಪಥನವಾಗಲಿದೆ ಎಂದಿರುವ ಅವರು, ಬಸವರಾಜ ಹೊರಟ್ಟಿ ತುಂಬಾ ಯೋಚನೆ ಮಾಡಿ ಹೇಳಿದ್ದಾರೆ. ಅವರ ಹೇಳಿಕೆ ಸರಿಯಾಗಿದೆ ಎಂದಿದ್ದಾರೆ.

ಬಿಜೆಪಿ ನಾಯಕ ಸಿ.ಟಿ ರವಿ ಮಾತನಾಡಿ, ಬಸವರಾಜ ಹೊರಟ್ಟಿ ಪ್ರಬುದ್ಧ ರಾಜಕಾರಣಿ, ಅವರು ಅಳೆದು ತೂಗಿ ವಿವೇಚನೆಯಿಂದ ಹೇಳಿಕೆ ನೀಡಿದ್ದಾರೆ. ಸರ್ಕಾರ ನಡೆದುಕೊಂಡಿರುವ ರೀತಿ ವ್ಯಕ್ತವಾಗಿದೆ ಮತ್ತು ಅವರ ಹಿರಿಮೆಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಸರ್ಕಾರ ಕುರ್ಚಿಗಾಗಿ ಯಾವ ಹಂತಕ್ಕೆ ಬೇಕಾದರೂ ಹೋಗ್ತಾರೆ‌. ಕಾಂಗ್ರೆಸ್ ಜೆಡಿಎಸ್ ನಾಯಕರ ಕಾರ್ಯನಿರ್ವಹಣೆ ಬಗ್ಗೆ ಕನ್ನಡಿ ಹಿಡಿದಂತೆ ಮಾತನಾಡಿದ್ದಾರೆ ಎಂದಿದ್ದಾರೆ.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ನಾನು ಅವರ ಗೊಂದಲದ ಮಧ್ಯೆ ಬಾಯಿ ಹಾಕೋಕೆ ಇಷ್ಟಪಡಲ್ಲ. ಆದ್ರೆ ಬಸವರಾಜ್ ಹೊರಟ್ಟಿ ಅವರು ಈಗಲಾದ್ರೂ ಜಾಗೃತರಾದ್ರಲ್ವಾ ಅಷ್ಟು ಸಾಕು ಎಂದಿದ್ದಾರೆ.

ಮಾಜಿ ಡಿಸಿಎಂ ಆರ್. ಅಶೋಕ್ ಮಾತನಾಡಿ, ಈ ಬಗ್ಗೆ ಜೆಡಿಎಸ್ ನಾಯಕರ ಪ್ರತಿಕ್ರಿಯೆ ಏನು ಎಂದು ಹೇಳಲಿ. 6 ಬಾರಿ ಶಾಸಕರಾಗಿದ್ದವರು ಅವರೇ ಹೆಬ್ಬೆಟ್ಟು ಸಿಎಂ ಹೇಳಿದ್ದಾರೆ ಎಂದರೆ ಅರ್ಥ ಮಾಡ್ಕೊಬೇಕು. ಕಾಂಗ್ರೆಸ್ ಬುದ್ಧಿನೇ ಮನೆಹಾಳು ಬುದ್ಧಿ. ಈ ಹಿಂದೆ ದೇವೇಗೌಡರನ್ನ ಕೂಡ ರಾತ್ರೋರಾತ್ರಿ ಅಧಿಕಾರದಿಂದ ಇಳಿಸಿದ್ರು. ಸರ್ಕಾರ ಎಷ್ಟು ಕೆಟ್ಟದಾಗಿ ನಡೀತಿದೆ ಅನ್ನೋದು ಇದರಿಂದ ಗೊತ್ತಾಗುತ್ತೆ. ಇದು 240 ವೋಲ್ಟ್ ಶಾಕ್ ಟ್ರೀಟ್‌ಮೆಂಟ್ ಅಷ್ಟೇ ಮುಂದೆ ಇನ್ನೂ 440 ವೋಲ್ಟ್ ಶಾಕ್ ಟ್ರೀಟ್‌ಮೆಂಟ್ ಇದೆ. ಇದು ನಿಜಕ್ಕೂ ಆ ಪಕ್ಷದಲ್ಲಿ ನಡೆಯುವ ಗೊಂದಲವನ್ನ ಎತ್ತಿ ತೋರಿಸ್ತಾ ಇದೆ ಎಂದಿದ್ದಾರೆ.

ಇನ್ನು ಮಾಜಿ ಸಚಿವ ಉಮೇಶ್ ಕತ್ತಿ ಮಾತನಾಡಿ, ಬಸವರಾಜ ಹೊರಟ್ಟಿಯವರಿಗೆ ಈಗ ಅರ್ಥ ಆಗಿದೆ. ಕಾಂಗ್ರೆಸ್ – ಜೆಡಿಎಸ್‌ನಿಂದ ಉತ್ತರ ಕರ್ನಾಟಕಕ್ಕೆ ಏನೂ ಪ್ರಯೋಜನ ಆಗಿಲ್ಲ. ಉತ್ತರ ಕರ್ನಾಟಕಕ್ಕೆ ಮೊದಲಿನಿಂದಲೂ ಅನ್ಯಾಯ ಮಾಡ್ತಾ ಬಂದಿದ್ದಾರೆ. ಇನ್ನಾದ್ರೂ ಬಸವರಾಜ್ ಹೊರಟ್ಟಿ ಆ‌ ಪಕ್ಷಗಳಿಂದ ಹೊರಬರಲಿ ಎಂದು ಸಲಹೆ ಕೊಟ್ಟಿದ್ದಾರೆ.

Leave a Reply