ಮೇಕೆದಾಟು ಯೋಜನೆ ತಡೆಗೆ ಸುಪ್ರೀಂ ನಕಾರ: ತಮಿಳುನಾಡಿಗೆ ಹಿನ್ನಡೆ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ತಡೆ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ ಇದರಿಂದ ತಮಿಳುನಾಡಿಗೆ ಹಿನ್ನಡೆಯಾಗಿದೆ.

ಜಲವಿದ್ಯುತ್ ಉತ್ಪಾದನೆ ಮುಖ್ಯವಾಗಿರಿಸಿಕೊಂಡು ಕರ್ನಾಟಕ ಸರ್ಕಾರ ಕೇಂದ್ರ ಜಲ ಆಯೋಗದ ನಿರ್ದೇಶನದ ಮೇರೆಗೆ ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುತ್ತಿದೆ. ಇದಕ್ಕೆ ತಡೆ ನೀಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ವಾದ ಮಂಡಿಸಿದ ತಮಿಳುನಾಡು, ‘ಮೇಕೆದಾಟುವಿನಲ್ಲಿ ಡ್ಯಾಮ್ ನಿರ್ಮಾಣ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಈ ಯೋಜನೆಗೆ ತಡೆಯಾಜ್ಞೆ ನೀಡಬೇಕು’ ಎಂದು ತಿಳಿಸಿತು.

ಇದಕ್ಕೆ ಪ್ರತಿಯಾಗಿ ತಮ್ಮ ವಾದ ಮಂಡಿಸಿದ ಕರ್ನಾಟಕ, ‘ಕೇಂದ್ರ ಜಲ ಮಂಡಳಿ (ಸಿಡಬ್ಲ್ಯೂಸಿ) ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಕೇಳಿದೆ. ಇದು ನ್ಯಾಯಾಲಯದ ತೀರ್ಪು ಉಲ್ಲಂಘನೆ ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿತು.

ಇನ್ನು ಈ ವಿಚಾರವಾಗಿ ಕೇಂದ್ರ ಸರ್ಕಾರದ ವಾದವನ್ನು ಆಲಿಸಲಾಗಿದ್ದು, ‘ಈ ಯೋಜನೆಯಲ್ಲಿ ತಮಿಳುನಾಡು ಸರ್ಕಾರದ ಒಪ್ಪಿಗೆ ಇಲ್ಲದೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ’ ಎಂದು ತಿಳಿಸಿತು.

ನಂತರ ಕೋರ್ಟ್ ತನ್ನ ಅಭಿಪ್ರಾಯ ತಿಳಿಸಿದ್ದು, ‘ವಿಚಾರಣೆ ಮುಕ್ತಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಅರ್ಜಿ ಹಾಕಲು ಹೇಗೆ ಸಾಧ್ಯ? ನಾವು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಬಹುದು ಆದರೆ ಮುಕ್ತಾಯವಾದ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದರೆ ಅದರ ವಿಚಾರಣೆ ಮಾಡುವುದು ಹೇಗೆ? ಹೀಗಾಗಿ ಮೇಕೆದಾಟು ಯೋಜನೆಗೆ ತಡೆ ನೀಡಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಡಿಪಿಆರ್ ರಚನೆ ಮಾಡಬಹುದು. ಈ ವಿಚಾರವಾಗಿ ಕೇಂದ್ರ ಸರ್ಕಾರ ನಾಲ್ಕು ವಾರಗಳ ಒಳಗಾಗಿ ತಮ್ಮ ಪ್ರತಿಕ್ರಿಯೆ ನೀಡಬೇಕು’ ಎಂದು ತಿಳಿಸಿದೆ.

Leave a Reply