ಪರ್ಥ್ ಪಿಚ್ ನಲ್ಲಿ ಕಾಂಗರೂಗಳ ತಂತ್ರಕ್ಕೆ ಟೀಮ್ ಇಂಡಿಯಾ ಪ್ರತಿತಂತ್ರ! ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ

ಡಿಜಿಟಲ್ ಕನ್ನಡ ಟೀಮ್:

ಏಳು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಗೆದ್ದು ಮುನ್ನಡೆ ಪಡೆದ ಇತಿಹಾಸ ಬರೆದಿರುವ ಟೀಮ್ ಇಂಡಿಯಾ ಈಗ ಪರ್ಥ್ ನಲ್ಲಿ ನಡೆಯಲಿರುವ ಎರಡನೇ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ.

ಆರಂಭಿಕ ಪಂದ್ಯದ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗದೆ ಗಾಯಗೊಂಡ ಸಿಂಹದಂತಾಗಿರುವ ಆಸ್ಟ್ರೇಲಿಯಾ ತಂಡ ದ್ವಿತೀಯ ಪಂದ್ಯಕ್ಕಾಗಿ ವೇಗದ ಪಿಚ್ ಮೊರೆ ಹೋಗಿದೆ. ಹೀಗಾಗಿ ಈ ಪಂದ್ಯ ವೇಗಿಗಳಿಗೆ ಸ್ವರ್ಗವಾಗುವ ನಿರೀಕ್ಷೆ ಇದ್ದು, ಬ್ಯಾಟ್ಸ್ ಮನ್ ಗಳಿಗೆ ಅಗ್ನಿ ಪರೀಕ್ಷೆ ಎದುರಾಗಲಿದೆ.

ಆಸ್ಟ್ರೇಲಿಯಾದ ಈ ತಂತ್ರಕ್ಕೆ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿ, ‘ವೇಗದ ಪಿಚ್ ನೋಡಿ ನಮಗೆ ಉತ್ಸಾಹ ಹೆಚ್ಚುತ್ತಿದೆಯೇ ಹೊರತು ಹೆದರಿಕೆಯಾಗುತ್ತಿಲ್ಲ’ ಎಂದಿದ್ದಾರೆ.

ಕಾಂಗರೂಗಳ ಈ ತಂತ್ರಕ್ಕೆ ಪ್ರತಿಯಾಗಿ ಟೀಮ್ ಇಂಡಿಯಾ ಐವರು ವೇಗಿಗಳನ್ನು ಕಣಕ್ಕಿಳಿಸಲು ಎದುರುನೋಡುತ್ತಿದೆ. ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಹಾಗೂ ಪೃಥ್ವಿ ಶಾ 13 ಸದಸ್ಯರ ತಂಡದಿಂದ ಹೊರಗುಳಿದಿದ್ದಾರೆ. ಆರಂಭಿಕ ಪಂದ್ಯದಲ್ಲಿ ಉತ್ತಮ ದಾಳಿ ಸಂಘಟಿಸಿದ್ದ ಮೊಹಮದ್ ಶಮಿ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಜತೆಗೆ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ಹಾಗೂ ಉಮೇಶ್ ಯಾದವ್ ಅವರ ವೇಗದ ಅಸ್ತ್ರ ಸೇರಿದರೆ ಆಸ್ಟ್ರೇಲಿಯಾದ ಅನನುಭವಿ ಬ್ಯಾಟಿಂಗ್ ವಿಭಾಗವನ್ನು ಹೊಡೆದುರುಳಿಸಬಹುದು.

ಟೀಮ್ ಇಂಡಿಯಾದ ಅಂತಿಮ 13 ಆಟಗಾರರು:

ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ.ಎಲ್ ರಾಹುಲ್, ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಶಬ್ ಪಂತ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮದ್ ಶಮಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್.

Leave a Reply