ಲೋಕಸಭೆಗೆ ಬಿಜೆಪಿ ಶಕ್ತಿ ಕುಂದಿ ಹೋಯ್ತಾ?

ಡಿಜಿಟಲ್ ಕನ್ನಡ ಟೀಮ್:

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್​ ಪಾಲಿಗೆ ಹಿರಿಹಿರಿ ಹಿಗ್ಗುವಂತೆ ಮಾಡಿದ್ರೆ, ಕಮಲ ಪಾಳಯ ಕೈ ಹಿಸುಕಿಕೊಳ್ಳುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಐಕಾನ್​ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಜೆಪಿ ಪಕ್ಷಕ್ಕೆ ಇದು ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಕಾಂಗ್ರೆಸ್​ ನಾಯಕರು ಲೋಕಸಭೆಗೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ದಿಕ್ಸೂಚಿ ಅಂತೇಳಿದ್ರೆ, ಬಿಜೆಪಿ ನಾಯಕರು ಮಾತ್ರ ಈ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್​ ಇದೇ ಹುಮ್ಮಸ್ಸಿನಲ್ಲಿ ಲೋಕಸಭಾ ಚುನಾವಣೆಗೆ ಹೋಗುವುದು ಶತಸಿದ್ಧ. ಆದ್ರೆ ಬಿಜೆಪಿ ಸೋಲು ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರುತ್ತಾ ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಬಿಜೆಪಿ ನಾಯಕರು ಹೇಳುವ ಮಾತನ್ನೂ ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಯಾಕಂದ್ರೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ರಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಆದರ ಜೊತೆಗೆ ಲೋಕಸಭಾ ಚುನಾವಣೆ ಬೇರೆ ವಿಚಾರದ ಮೇಲೆಯೇ ಮತದಾನ ನಡೆಯುತ್ತೆ ಎನ್ನುತ್ತಿದ್ದಾರೆ. ಅದೂ ಕೂಡ ನಿಜ. ಯಾಕಂದ್ರೆ ರಾಷ್ಟ್ರೀಯ ವಿಚಾರಗಳೇ ಬೇರೆ, ರಾಜ್ಯದ ವಿಚಾರಗಳೇ ಬೇರೆ. ಆದ್ರೆ ಸ್ಥಳೀಯ ಸರ್ಕಾರ ಯಾವುದು ಇರುತ್ತೋ ಆ ಪಕ್ಷದ ಕಡೆಗೆ ಜನರ ಒಲವು ಸಿಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಈ ಹಿಂದಿನ ಚುನಾವಣೆಯಲ್ಲೂ ಇದೇ ರೀತಿ ಪುನಾರವರ್ತನೆಯಾಗಿದೆ ಕೂಡ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ಒಟ್ಟು 65 ಲೋಕಸಭಾ ಸ್ಥಾನಗಳಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ 62 ಸ್ಥಾನಗಳಲ್ಲಿ ಗೆದ್ದಿತ್ತು. ಇದೀಗ ಮೂರೂ ರಾಜ್ಯಗಳಲ್ಲಿದ್ದ ಬಿಜೆಪಿ ಸರ್ಕಾರ ಉರುಳಿದ್ದು, ಬಿಜೆಪಿ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಹವಾ ವರ್ಕೌಟ್​ ಆದರೂ ಅರ್ಧದಷ್ಟು ಸ್ಥಾನ ಗೆಲ್ಲೋದು ಡೌಟ್​ ಅನ್ನೋ ಮಾತುಗಳು ಕೇಳಿಬರುತ್ತಿವೆ. ವಿಶೇಷ ಅಂದ್ರೆ 2004, 2009 ಹಾಗೂ 2014 ರಲ್ಲಿ ವಿಧಾನಸಭೆ ಚುನಾವಣೆ ನಡೆದ ಆರು ತಿಂಗಳಲ್ಲೇ ಲೋಕಸಭಾ ಚುನಾವಣೆ ನಡೆದಿತ್ತು. ಆಗ ವಿಧಾನಸಭಾ ಚುನಾವಣೆ ಫಲಿತಾಂಶಗಳೇ ಪುನರಾವರ್ತನೆ ಆಗಿತ್ತು ಅನ್ನೋದು ಕೂಡ ಕಾಂಗ್ರೆಸ್​ ಹುಮ್ಮಸ್ಸಿಗೆ ಸಕಾರಾತ್ಮಕ ಅಂಶ.

Leave a Reply